ಕಳ್ಳತನ ಪ್ರಕರಣದ ಅಸಲಿ ಕಥೆ ಏನು?
ಕೆಲವು ತಿಂಗಳ ಮೊದಲು ಕಾಂಗ್ರೆಸ್ ಮುಖಂಡ ಎಸ್. ಸಂಶುದ್ದೀನ್ ರವರ ಮನೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದು, ಇಂದು ಆರೋಪಿಗಳನ್ನು ಸುಳ್ಯ ಪೊಲೀಸರು ಕರೆತಂದು ಮಹಜರು ನಡೆಸಿದ್ದಾರೆ.
ಇಬ್ಬರು ಆರೋಪಿಗಳಲ್ಲಿ ಫಯಾಜ್ ಎಂಬಾತನನ್ನು ಸಕಲೇಶಪುರದಿಂದ, ಮತ್ತೋರ್ವ ಪ್ರಸನ್ನ ಎಂಬಾತನನ್ನು ಬೆಂಗಳೂರಿನ ಗೋವಿಂದ ನಗರದಿಂದ ಬಂಧಿಸಲಾಗಿತ್ತು.
ಇದೀಗ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನೂ ಸುಳ್ಯ ಪೊಲೀಸರು ಸುಳ್ಯಕ್ಕೆ ಕರೆತಂದು ದರೋಡೆಗೆ ಒಳಗಾಗಿದ್ದ ಮನೆ ಮತ್ತು ಪರಿಸರದ ಮಹಜರು ನಡೆಸಿದ್ದು ಬಳಿಕ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಆರೋಪಿಗಳ ಮೇಲೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಕಡೆಗಳಲ್ಲಿ 30ಕ್ಕೂ ಹೆಚ್ಚು ಪ್ರಕರಣಗಳು ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ದಾಖಲಾಗಿದೆ ಎಂದು ತಿಳಿದುಬಂದಿದೆ.
ಸಂಶುದ್ದೀನ್ ರವರ ಮನೆ ದರೋಡೆ ಮಾಡಿದ ಕಳ್ಳರಿಗೆ ಆ ದಿನ ಅಲ್ಲಿ ಕಳ್ಳತನ ಮಾಡುವ ಉದ್ದೇಶ ಇರಲಿಲ್ಲವೆಂದು ವಿಚಾರಣೆ ವೇಳೆ ಗೊತ್ತಾಗಿರುವುದಾಗಿ ಹೇಳಲಾಗಿದೆ. ಆರೋಪಿಗಳ ಸಹಚರನೋರ್ವ ಕೇರಳದ ಕಾಸರಗೋಡಿನಲ್ಲಿ ಇದ್ದು ಆತನನ್ನು ಭೇಟಿಯಾಗಲು ಘಟನೆ ನಡೆದ ದಿನದಂದು ಬೆಳಿಗ್ಗೆ ತಮ್ಮ ಸ್ವಿಫ್ಟ್ ಕಾರಿನಲ್ಲಿ ಸುಳ್ಯದ ಮೂಲಕ ಕಾಸರಗೋಡಿಗೆ ಹೋಗುತ್ತಿದ್ದಾಗ ಅರಂಬೂರು ಸಮೀಪ ಬರುತ್ತಿದ್ದಂತೆ ಸಂಶುದ್ದೀನ್ ರವರ ಮನೆಯ ಮುಂಭಾಗದ ಗೇಟಿನಲ್ಲಿ ನ್ಯೂಸ್ ಪೇಪರ್ ಇಟ್ಟದ್ದನ್ನು ಗಮನಿಸಿದ್ದು, ಇದನ್ನು ಗಮನಿಸಿದ ಕಳ್ಳರು ಮನೆಯಲ್ಲಿ ಯಾರು ಇರಲಾರರು ಎಂದು ದೃಢಪಡಿಸಿಕೊಂಡು ಅಲ್ಲಿಂದ ಕಾಸರಗೋಡಿಗೆ ಹೋಗಿದ್ದರೆಂದೂ, ಕಾಸರಗೋಡಿನಲ್ಲಿ ಅವರ ಸಹಚರನನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಯಾವುದೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರಿಗೆ ಫೀಸ್ ಕೊಡಲು ಆತನ ಕೈಯಲ್ಲಿ ಹಣವಿಲ್ಲದೆ ಇರುವ ತನ್ನ ಸಮಸ್ಯೆಯನ್ನು ಇವರ ಬಳಿ ಹೇಳಿಕೊಂಡಿದ್ದನೆಂದೂ ಹೇಳಾಲಾಗಿದೆ. ಅದಕ್ಕೆ ಈ ಆರೋಪಿಗಳು ಆತನಿಗೆ ಬೇಕಾದ ಹಣವನ್ನು ತಾವು ಒದಗಿಸಿಕೊಡುವ ಭರವಸೆಯನ್ನು ನೀಡಿ ಬಂದಿದ್ದು, ಸುಳ್ಯಕ್ಕೆ ಬಂದು ತಾವು ಬೆಳಿಗ್ಗೆ ನೋಡಿದ್ದ ಸಂಶುದ್ದೀನ್ ರವರ ಮನೆಯನ್ನು ದರೋಡೆ ನಡೆಸಲು ತೀರ್ಮಾನಿಸಿದ್ದಾರೆ. ಬಳಿಕ ಸುಳ್ಯದ ಅರಂಬೂರಿಗೆ ಬಂದ ಆರೋಪಿಗಳು ಸಂಶುದ್ದೀನ್ ರವರ ಮನೆಯ ಗೇಟಿನ ಮುಂಭಾಗದಲ್ಲಿ ಕಾರು ನಿಲ್ಲಿಸಿ ಓರ್ವನನ್ನು ಮನೆಯ ಗೇಟಿನ ಮುಂಭಾಗದಲ್ಲಿ ಇಳಿಸಿ ಮತ್ತೋರ್ವ ಅದೇ ಕಾರನ್ನು ತಿರುಗಿಸಿ ಅರಂಬೂರು ಮಸೀದಿಯ ಮುಂಭಾಗದಲ್ಲಿ ನಿಲ್ಲಿಸಿದ್ದಾನೆ. ಮನೆಯೊಳಗೆ ಪ್ರವೇಶಿಸಿದ್ದ ಆರೋಪಿ ರಾತ್ರಿ 7 ಗಂಟೆಯ ಸಮಯಕ್ಕೆ ಒಳ ಪ್ರವೇಶಿಸಿದ್ದು ಸುಮಾರು 9:30 ರ ವೇಳೆಗೆ ತನ್ನ ಎಲ್ಲಾ ಕೆಲಸವನ್ನು ಮುಗಿಸಿ ಕಾರಿನತ್ತ ಬಂದು ಮತ್ತೆ ಸುಳ್ಯ ರಸ್ತೆಯ ಮೂಲಕ ಸುಬ್ರಹ್ಮಣ್ಯಕ್ಕೆ ತೆರಳಿ ಅಲ್ಲಿಂದ ಸಕಲೇಶಪುರ ರಸ್ತೆಯ ಮೂಲಕ ಬೆಂಗಳೂರಿಗೆ ತೆರಳಿದ್ದಾರೆ ಎಂದು ಕೃತ್ಯದ ಬಗ್ಗೆ ಆರೋಪಿಗಳು ಪೊಲೀಸರ ಬಳಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಇದೀಗ ಸುಳ್ಯ ನ್ಯಾಯಾಲಯದಲ್ಲಿ ಆರೋಪಿಗಳನ್ನು ಹಾಜರುಪಡಿಸಿದ ಬಳಿಕ ಆರೋಪಿಗಳನ್ನು ಮತ್ತೆ ಬೆಂಗಳೂರು ಪೊಲೀಸರ ಕಸ್ಟಡಿಗೆ ನೀಡಲಾಗುವುದು ಎಂದು ತಿಳಿದುಬಂದಿದೆ.
ಪ್ರಕರಣದ ಬಯಲಿಗೆ ಬರಲು ಸುಳ್ಯದ ಹಲವು ಭಾಗಗಳಲ್ಲಿ ಹಾಕಲಾದ ಸಿಸಿ ಕ್ಯಾಮರಾ ಫೂಟೇಜ್ ಗಳು ಕಾರಣವಾಗಿದ್ದು ಹಿಂದಿನ ಎಸ್.ಐ. ದಿಲೀಪ್ ಅವರ ನೇತೃತ್ವದಲ್ಲಿ ತನಿಖೆ ಕಾರ್ಯ ಕೈಗೊಳ್ಳಲಾಗಿತ್ತು.