ನಿವೃತ್ತ ಪ್ರಾಂಶುಪಾಲೆ ಶ್ರೀಮತಿ ಮಾಲತಿ ವೈ.ಕೆ. ಬೀಳ್ಕೊಡುಗೆ
ಸಂಪಾಜೆ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಹಾಗೂ ಕಾಲೇಜಿನಲ್ಲಿ ಸುದೀರ್ಘ ಅವಧಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀಮತಿ ಮಾಲತಿ ವೈ.ಕೆ. ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ಜೂ.24ರಂದು ನಡೆಯಿತು
ಸಂಪಾಜೆ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಕೆ.ಜಿ. ರಾಜಾರಾಮ ಅವರು ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಶೈಕ್ಷಣಿಕ ಸಾಲಿನಲ್ಲಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಹಾಗೂ ಎಸ್.ಎಸ್.ಎಲ್.ಸಿ. ಪಬ್ಲಿಕ್ ಪರೀಕ್ಷೆಯಲ್ಲಿ ಐನೂರಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಸ್ವಾತಿ ಎಸ್., ಪವನ್ ಬಿ.ಕೆ., ಆದಿತ್ಯರಾಜ್ ಎನ್., ಅನನ್ಯ ಯು.ಬಿ., ಪವಿತ್ರ ಆರ್., ಸುಶ್ಮಿತಾ ಕೆ., ಸಾನಿಯಾ ಎಮ್.ಕೆ., ಧನ್ಯಶ್ರೀ ಎನ್.ಟಿ., ಅಕ್ಷಯಕುಮಾರ್ ಬಿ.ವಿ., ಆಯಿಷತ್ ಫಾಯಿಮಾ ಕೆ.ಎ., ಆಸೀಮಾ ಕೆ.ಐ. ಅವರನ್ನು ನಗದು ಬಹುಮಾನ ನೀಡಿ ಅಭಿನಂದಿಸಲಾಯಿತು.
ಕಳೆದ ಮೂವತ್ತೈದು ವರ್ಷಗಳ ಕಾಲ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ, ನಿವೃತ್ತರಾದ ಶ್ರೀಮತಿ ಮಾಲತಿ ಅವರು ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ತಮ್ಮ ವೈಯಕ್ತಿಕ ನೆಲೆಯಲ್ಲಿ ನಗದು ಬಹುಮಾನವನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ವತಿಯಿಂದ ಸುದೀರ್ಘವಾಗಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀಮತಿ ಮಾಲತಿ ಹಾಗೂ ಅವರ ಪತಿ ಮೋಹನ್ ದಾಸ್ ಅವರನ್ನು ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಿ, ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಸಂಪಾಜೆ ಎಜ್ಯುಕೇಶನ್ ಸೊಸೈಟಿ ಉಪಾಧ್ಯಕ್ಷ ಯು.ಬಿ. ಚಕ್ರಪಾಣಿ, ಕಾಲೇಜಿನ ನಿಯೋಜಿತ ಪ್ರಾಂಶುಪಾಲ ಲೋಕ್ಯ ನಾಯ್ಕ, ಉದ್ಯಮಿ ಬಿ.ಆರ್. ಪದ್ಮಯ್ಯ ಕಲ್ಲುಗುಂಡಿ, ಸುಬ್ರಹ್ಮಣ್ಯ ಉಪಾಧ್ಯಾಯ, ಗಣಪತಿ ಭಟ್ ಸಂಪಾಜೆ, ಗ್ರಾ.ಪಂ. ಸದಸ್ಯ ಎಸ್.ಕೆ. ಹನೀಫ್ ಕಲ್ಲುಗುಂಡಿ, ಕಾರ್ಯಪ್ಪ, ಜಯರಾಮ ಭಟ್ ಸಂಪಾಜೆ , ಸುದ್ದಿ ವರದಿಗಾರ ಕೃಷ್ಣ ಬೆಟ್ಟ ಉಪಸ್ಥಿತರಿದ್ದರು.
ಕಾಲೇಜಿನ ಉಪನ್ಯಾಸಕ ವೃಂದದವರು, ವಿದ್ಯಾರ್ಥಿಗಳ ಪೋಷಕರು ಹಾಗೂ ವಿದ್ಯಾರ್ಥಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಉಪನ್ಯಾಸಕ ಕುಮಾರ ಮಾಸ್ತರ್ ಕಾರ್ಯಕ್ರಮ ನಿರೂಪಿಸಿದರು.