ಸುಬ್ರಹ್ಮಣ್ಯ ಪುತ್ತಿಲ ಅಭಿಮಾನಿ ಬಳಗ ಮತ್ತು ಪುತ್ತಿಲ ಪರಿವಾರ ಕುಕ್ಕೆ ಸುಬ್ರಹ್ಮಣ್ಯ ಇದರ ಆಶ್ರಯದಲ್ಲಿ ಸಾರ್ವಜನಿಕ ಸಭೆ
ಸನಾತನ ಧರ್ಮ ಪರಂಪರೆಯು ಅತ್ಯಂತ ಶ್ರೇಷ್ಠವಾದುದು. ಸಾಮಾಜಿಕ ಜವಬ್ದಾರಿಯ ಜೊತೆಗೆ ಧರ್ಮ ರಕ್ಷಣೆ ನಮ್ಮ ಆಧ್ಯತೆಯಾಗಬೇಕು.ಜಾಗೃತ ಸಮಾಜದ ನಿರ್ಮಾಣಕ್ಕೆ ಯುವ ಸಮಾಜ ಕಠಿಬದ್ಧವಾಗಬೇಕು.ಧರ್ಮವನ್ನು ಉಳಿಸುವ, ಹಿಂದುತ್ವ ಪ್ರತಿಪಾದಿಸುವ ಮತ್ತು ಸಮಾಜ ಹಿತ ಕಾರ್ಯ ನೆರವೇರಿಸುವ ಸಂಕಲ್ಪವನ್ನು ಯುವ ಜನಾಂಗ ಮಾಡಬೇಕು. ಧರ್ಮವು ಜೀವನಕ್ಕೆ ಸಂಸ್ಕಾರವನ್ನು ನೀಡುತ್ತದೆ.ಸಮಾಜಮುಖಿ ವ್ಯವಸ್ಥೆಯ ನಡುವೆ ಧರ್ಮ ಜಾಗೃತಿಯನ್ನು ನೆರವೇರಿಸುವ ಕಾರ್ಯವು ನಡೆಯುತ್ತಿದೆ.ಹಿಂದೂ ರಾಷ್ಟ್ರದ ಪರಿಕಲ್ಪನೆ ಸಾಕಾರಗೊಳ್ಳಬೇಕು. ಹಿಂದುತ್ವದ ಜೊತೆಗೆ ನಮ್ಮ ಸನಾತನ ಸಂಸ್ಕೃತಿ ಹಾಗೂ ವಿಚಾರಧಾರೆ ಸರ್ವರ ಹೃದಯದಲ್ಲಿ ಅನುಷ್ಠಾನವಾಗಬೇಕು ಎಂದು ಹಿಂದೂ ನಾಯಕ ಅರುಣ್ ಕುಮಾರ್ ಪುತ್ತಿಲ ಹೇಳಿದರು.
ಅವರು ಪುತ್ತಿಲ ಅಭಿಮಾನಿ ಬಳಗ ಸುಬ್ರಹ್ಮಣ್ಯ ಮತ್ತು ಪುತ್ತಿಲ ಪರಿವಾರ ಕುಕ್ಕೆ ಸುಬ್ರಹ್ಮಣ್ಯ ಇದರ ಆಶ್ರಯದಲ್ಲಿ ಸುಬ್ರಹ್ಮಣ್ಯದ ವನದುರ್ಗ ದೇವಿ ಸಭಾಭವನದಲ್ಲಿ ಜೂ.25 ರಂದು ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು. ನಮ್ಮ ಸಂಸ್ಕೃತಿ ಸಂಸ್ಕಾರಗಳ ವಿಚಾರಧಾರೆಗಳು ನೂರಾರು ವರ್ಷಗಳ ಕಾಲ ಜಗತ್ತಿಗೆ ಮಾರ್ಗದರ್ಶನ ನೀಡುವಂತಹ ವ್ಯವಸ್ಥೆ ನಿರ್ಮಾಣವಾಗಬೇಕು.ಧರ್ಮದ ಮೇಲೆ ಅಪಮಾನಗಳು, ಅವಮಾನಗಳು ಆದ ಸಂದರ್ಭದಲ್ಲಿ ಈ ಸಮಾಜಕ್ಕೆ ಶಕ್ತಿಯನ್ನು ಕೊಟ್ಟು ಮತ್ತೆ ಧರ್ಮವನ್ನು ಮೇಲಕ್ಕೆ ಎತ್ತುವುದರ ಮೂಲಕ ಹಿಂದುತ್ವದ ಪ್ರತಿಪಾದನೆ ಮಾಡುವ ಕಾರ್ಯವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ನಡೆಸುತ್ತಾ ಬರುತ್ತಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಪುತ್ತಿಲ ಅಭಿಮಾನಿ ಬಳಗದ ಅಶೋಕ್ ಕುಮಾರ್ ಯೇನೆಕಲ್ಲು ವಹಿಸಿದ್ದರು. ಹಿರಿಯರಾದ ಹರೀಶ್ ಕಾಮತ್ ಸುಬ್ರಹ್ಮಣ್ಯ, ಪುತ್ತಿಲ ಪರಿವಾರದ ರಾಜೇಶ್ ಶೆಟ್ಟಿ, ಕಿರಣ್ ಕುಮಾರ್ ವೇದಿಕೆಯಲ್ಲಿದ್ದರು.ಆರಂಭದಲ್ಲಿ ಕಾರ್ಯಕ್ರವನ್ನು ಅರುಣ್ ಕುಮಾರ್ ಪುತ್ತಿಲ ದೀಪ ಬೆಳಗಿಸಿ ಉದ್ಘಾಟಿಸಿದರು.ಕಾರ್ಯಕ್ರಮದ ಕೊನೆಯಲ್ಲಿ ಪುತ್ತಿಲ ಅವರನ್ನು ಅಭಿಮಾನಿ ಬಳಗದಿಂದ ಗೌರವಿಸಿ ಸನ್ಮಾನಿಸಲಾಯಿತು. ವಿ.ಜೆ.ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿದರು.
ಬೃಹತ್ ಮೆರವಣಿಗೆ:
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಗೋಪುರ ಬಳಿ ಬೃಹತ್ ಮೆರವಣಿಗೆಗೆ ಚಾಲನೆ ನೀಡಲಾಯಿತು.ಘೋಷಣೆಗಳನ್ನು ಕೂಗುತ್ತಾ ಕಾರ್ಯಕರ್ತರು ಕಾಲ್ನಡಿಗೆಯಲ್ಲಿ ಮುನ್ನಡೆದರು. ರಥಬೀದಿಯಿಂದ ದೇವಿ ದೇವಸ್ಥಾನದ ತನಕ ಬೃಹತ್ ಕಾರ್ಯಕರ್ತರ ನಡುವೆ ಅರುಣ್ ಕುಮಾರ್ ಪುತ್ತಿಲ ಸರ್ವರಿಗೂ ನಮಸ್ಕರಿಸುತ್ತಾ ಮುನ್ನಡೆದರು.ಮೆರವಣಿಗೆ ನಡುವೆ ಕಾರ್ಯಕರ್ತರು, ಅಭಿಮಾನಿಗಳು ಅಲ್ಲಲ್ಲಿ ಪುತ್ತಿಲ ಅವರಿಗೆ ಶಾಲು, ಹಾರ ಹಾಕಿ ಗೌರವಿಸಿದರು.