ಕೋವಿ ಠೇವಣಿ: ಹೈಕೋರ್ಟ್‌ ಮಹತ್ವದ ಆದೇಶ

0

ಆದೇಶಕ್ಕೆ ಮೊದಲೇ ಸ್ಕ್ರೀನಿಂಗ್ ಸಮಿತಿ ರಚಿಸಿ


ಚುನಾವಣೆ ಸಂದರ್ಭದಲ್ಲಿ ಕೃಷಿಕರ ಕೋವಿ ಠೇವಣಿ ಇರಿಸುವ ಆದೇಶಕ್ಕೆ ಮೊದಲೇ ಈ ಕುರಿತ ಸ್ಕ್ರೀನಿಂಗ್ ಸಮಿತಿಯನ್ನು ಜಿಲ್ಲಾ ಚುನಾವಣಾಧಿಕಾರಿ ರಚಿಸಿರಬೇಕು ಎಂಬ ಮಹತ್ವದ ಆದೇಶವನ್ನು ಹೈಕೋರ್ಟ್ ನೀಡಿದೆ.

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ 2023ರ ಮಾರ್ಚ್ 29ರಂದು ಜಿಲ್ಲಾಧಿಕಾರಿಯವರು ಹೊರಡಿಸಿದ್ದ ಕೋವಿ ಠೇವಣಿಯ ಆದೇಶವನ್ನು ರದ್ದು ಪಡಿಸುವಂತೆ ಕೋರಿ ಜಿಲ್ಲೆಯ 56 ರೈತರು ಹೈಕೋರ್ಟ್‌ಗೆ ಮೊರೆ ಹೋಗಿದ್ದರು.

ಈ ಕುರಿತು ಆದೇಶ ನೀಡಿರುವ ಹೈಕೋರ್ಟ್ ರಿಟ್ ಅರ್ಜಿಯನ್ನು ಇತ್ಯರ್ಥಪಡಿಸಿದ್ದು, ಚುನಾವಣೆ ಘೋಷಣೆಯಾಗುತ್ತಿರುವಂತೆಯೇ ಕೋವಿ ಠೇವಣಿಯ ವಿನಾಯಿತಿ ಕೋರಿ ಬರುವ ಅರ್ಜಿಗಳನ್ನು ವಿಲೇವಾರಿ ಮಾಡಲು ಸ್ಕ್ರೀನಿಂಗ್ ಸಮಿತಿ ರಚಿಸಿರಬೇಕು. ಕೃಷಿಕರು ಹಾಕುವ ವಿನಾಯಿತಿ ಅರ್ಜಿಗಳನ್ನು ಸಮಿತಿ ಇತ್ಯರ್ಥ ಪಡಿಸಬೇಕು. ಒಂದು ವೇಳೆ ಅರ್ಜಿ ತಿರಸ್ಕೃತವಾಗಿದ್ದಲ್ಲಿ ಕೋವಿಯ ಪರವಾನಿಗೆದಾರರು ತಮಗೆ ಆದೇಶ ಕೈಗೆ ಸಿಕ್ಕಿದ ದಿನದಿಂದ ಒಂದು ವಾರದೊಳಗೆ ಕೋವಿ ಠೇವಣಿ ಇರಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ಹಿಂದಿನ ಚುನಾವಣೆಗಳಲ್ಲಿ ಇಂತಹ ಅವಕಾಶ ಇರಲಿಲ್ಲ. ಜಿಲ್ಲಾ ಧಿಕಾರಿಯವರ ಆದೇಶದ ಹಿನ್ನೆಲೆಯಲ್ಲಿ ಆಯಾ ಲೈಸನ್ಸ್‌ದಾರರಿಗೆ ಸ್ಟೇಷನ್‌ಗಳಿಂದ ಠೇವಣಿ ಇರಿಸುವಂತೆ ಕರೆ ಬರುತ್ತಿತ್ತು. ಈ ಬಾರಿ ಸಮಿತಿ ರಚನೆ ಚುನಾವಣೆಯ ಜತೆಯಲ್ಲೇ ಆಗಬೇಕು ಹಾಗೂ ಲೈಸನ್ಸ್‌ದಾರರ ಕೈಗೆ ಆದೇಶ ಸಿಕ್ಕಿದ ಒಂದು ವಾರದ ಕಾಲಾವಕಾಶವನ್ನು ಠೇವಣಿಗೆ ಕೊಡಬೇಕೆಂದೂ ತಿಳಿಸಿಲಾಗಿದೆ.

ಕೃಷಿಕರ ಪರವಾಗಿ ಗಂಗಾಧರ ಪುಚ್ಚಪ್ಪಾಡಿ, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ ನೇತೃತ್ವದಲ್ಲಿ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಲಾಗಿತ್ತು. ಸುಳ್ಯದ ವಕೀಲ ಡಿ. ಕೃಷ್ಣಮೂರ್ತಿ ಹೈಕೋರ್ಟ್ ನಲ್ಲಿ ವಾದಿಸಿದ್ದರು. ವಕೀಲ ಶಂಕರ್‌ ಕುಮಾರ್‌ ಸಹಕಾರ ನೀಡಿದ್ದರು.