ಕಾಂಗ್ರೆಸ್ ಗ್ಯಾರಂಟಿಗಳಲ್ಲಿ ಒಂದಾದ ಉಚಿತ ಅಕ್ಕಿ ವಿತರಣೆಗೆ ತೊಡಕಾಗಿರುವುದರಿಂದ ಐದು ಕೆಜಿ ಅಕ್ಕಿ ಬದಲಿಗೆ ಹಣ ನೀಡಲು ಕರ್ನಾಟಕ ಸಚಿವ ಸಂಪುಟ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ತಿಳಿದು ಬಂದಿದೆ.
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಈ ಕುರಿತು ಆಹಾರ ಸಚಿವ ಮುನಿಯಪ್ಪ ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರಾದ ಎಚ್ಕೆ ಪಾಟೀಲ್ ಹಾಗೂ ಕೆಎಚ್ ಮುನಿಯಪ್ಪ ಸಂಪುಟ ಸಭೆಯ ನಿರ್ಧಾರಗಳನ್ನು ಪ್ರಕಟಿಸಿದ್ದು ಇದರೊಂದಿಗೆ ಅನ್ನಭಾಗ್ಯಯೋಜನೆಯಡಿ ಬಿಪಿಎಲ್ ಕಾರ್ಡ್ದಾರರಿಗೆ 5 ಕೆಜಿ ಅಕ್ಕಿ ಹಾಗೂ ಇನ್ನುಳಿದ 5ಕೆಜಿ ಅಕ್ಕಿಯ ಬದಲು ಹಣ ದೊರೆಯಲಿದೆ ಎನ್ನಲಾಗಿದೆ.
ಅಕ್ಕಿ ಬದಲು ಜನರಿಗೆ ಹಣ ನೀಡಲು ಸಂಪುಟ ಸಭೆ ತೀರ್ಮಾನಿಸಿದೆ. 5 ಕೆಜಿ ಅಕ್ಕಿ ಬದಲು ಜನರಿಗೆ ಹಣ ನೀಡಲು ನಿರ್ಧರಿಸಲಾಗಿದೆ. ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಯಂತೆ ಬಿಪಿಎಲ್ ಪಡಿತರ ಕಾರ್ಡ್ ದಾರರಿಗೆ ಮಾಸಿಕ ತಲಾ 170 ರೂ. ನೀಡುತ್ತೇವೆ. ಜುಲೈ ತಿಂಗಳಿಂದಲೇ ಪಡಿತರದಾರರ ಖಾತೆಗೆ ಹಣ ವರ್ಗಾವಣೆ ಮಾಡಲಾಗುವುದು ಎಂದು ಮುನಿಯಪ್ಪ ತಿಳಿಸಿದ್ದಾರೆ.