ಆಲೆಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ರಾಜ್ಯ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕಿ ಶ್ರೀಮತಿ ಪದ್ಮ ರಂಗನಾಥ್ ರವರು ಸುದೀರ್ಘ 41 ವರ್ಷಗಳ ಕಾಲದ ವೃತ್ತಿ ಸೇವೆಯಿಂದ ಜೂ.30 ರಂದು ನಿವೃತ್ತಿ ಹೊಂದಲಿದ್ದಾರೆ.
ಮೂಲತಃ ಬಳ್ಳಾರಿ ಜಿಲ್ಲೆಯವರಾಗಿರುವ ಇವರು ತನ್ನ ಪ್ರಾಥಮಿಕ ,ಪ್ರೌಢ ಶಿಕ್ಷಣವನ್ನು ಬಳ್ಳಾರಿಯ ಸರಕಾರಿ ಶಾಲೆಯಲ್ಲಿ ಪೂರೈಸಿರುತ್ತಾರೆ.
ಬಳಿಕ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಬಳ್ಳಾರಿಯಲ್ಲಿ ತರಬೇತಿಯನ್ನು ಪೂರೈಸಿದರು.
1982 ರಲ್ಲಿ ಬಳ್ಳಾರಿಯಲ್ಲಿ ಸ.ಹಿ.ಪ್ರಾ.ಶಾಲೆ ಉರ್ದು ಶಾಲೆಯ ಕನ್ನಡ ಭಾಷೆಯ ಶಿಕ್ಷಕಿಯಾಗಿ ಉದ್ಯೋಗ ಕ್ಕೆಸೇರ್ಪಡೆಗೊಂಡರು. 1988 ರಲ್ಲಿ ಆಲೆಟ್ಟಿ ಗ್ರಾಮದ ನಾಗಪಟ್ಟಣ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡು ಸುದೀರ್ಘ 18 ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ. ಅಲ್ಲಿಂದ
ಮುಖ್ಯ ಶಿಕ್ಷಕಿಯಾಗಿ ಭಡ್ತಿಗೊಂಡು ಪಡ್ಪಿನಂಗಡಿ ಸ.ಹಿ.ಪ್ರಾ.ಶಾಲೆಯಲ್ಲಿ ಸೇವೆ ಸಲ್ಲಿಸಿದರು.
ನಂತರ ಮಂಡೆಕೋಲು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 5 ವರ್ಷಗಳ ಕಾಲ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುತ್ತಾರೆ. 2015 ರಲ್ಲಿ ಆಲೆಟ್ಟಿ ಸ.ಹಿ.ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡು ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಜೂ.30 ರಂದು ತನ್ನ ಸುದೀರ್ಘ ವೃತ್ತಿ ಸೇವೆಯಿಂದ ನಿವೃತ್ತಿ ಯಾಗಲಿದ್ದಾರೆ.
ಈ ಮಧ್ಯೆ ಒಂದು ವರ್ಷ ಪೇರಾಲು ಸ.ಹಿ.ಪ್ರಾ.ಶಾಲೆಯಲ್ಲಿ ಸೇವೆ ಸಲ್ಲಿಸಿರುತ್ತಾರೆ.
ಸುದೀರ್ಘ 41 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಇವರಿಗೆ 2014-15 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ರಾಜ್ಯ ಪ್ರಶಸ್ತಿ ಹಾಗೂ 2019-20 ರಲ್ಲಿ ಕರ್ನಾಟಕ ಸರಕಾರದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.
ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೂ ಇವರು ಭಾಜನರಾಗಿರುತ್ತಾರೆ. ಲಯನೆಸ್ ಕ್ಲಬ್ ಅಂತರಾಷ್ಟ್ರೀಯ ಸಂಸ್ಥೆಯ ಜಿಲ್ಲಾಧ್ಯಕ್ಷರಾಗಿ, ಸುಳ್ಯ ಲಯನೆಸ್ ಕ್ಲಬ್ ಇದರ ಅಧ್ಯಕ್ಷೆಯಾಗಿ, ಕಾರ್ಯದರ್ಶಿಯಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಇವರ ಪತಿ ಸುಳ್ಯ ನಾಗಪಟ್ಟಣ ಕೆ.ಎಫ್.ಡಿ.ಸಿ ಯ ನಿವೃತ್ತ ಮ್ಯಾನೇಜರ್ ಲ| ರಂಗನಾಥ್ ಪಿ.ಎಂ, ಪುತ್ರಿಯರಿಬ್ಬರು ಡಾ.ಆರ್.ಸೋನಿಕಾ ಮತ್ತು ಡಾ.ಆರ್.ಸುಲೇಖಾ ರವರು ಮುಂಬಯಿಯಲ್ಲಿ
ವೈದ್ಯರಾಗಿದ್ದಾರೆ.
ಪ್ರಸ್ತುತ ಇವರು ಅಡ್ಕಾರಿನ ಪದವು ಎಂಬಲ್ಲಿ ವಾಸವಾಗಿದ್ದಾರೆ.