ಎಲ್ಲ ವೈದ್ಯರೂ ಇರುವುದು , ನರನಿಗೆ ನಾರಾಯಣನಾಗಲು , ಹಾಗೆಯೇ ಅವರೆಲ್ಲರೂ ಆರೋಗ್ಯ ಕ್ಷೇತ್ರದಲ್ಲಿ ಮಹತ್ತ್ವದ ಸೇವೆ ಸಲ್ಲಿಸುತ್ತಾ ಇರುವುದು ಸಹಜವೇ. ಆದರೆ ಓರ್ವ ವೈದ್ಯ ಸಮಾಜದ ಎಲ್ಲ ವರ್ಗದವರನ್ನೂ ತಲುಪುವುದು ಮತ್ತು ಅವರ ಪ್ರೀತಿ, ಅಭಿಮಾನಕ್ಕೆ ಪಾತ್ರರಾಗುವುದು ಎಂದರೆ ಅವರಲ್ಲೇನೋ ಹೆಚ್ಚಿನದ್ದು ಇರುತ್ತದೆ. ಆ ಹೆಚ್ಚುಗಾರಿಕೆ ಹೆಚ್ಚಿನವರಲ್ಲಿ ಇರಲಾರದು. ಅದು ದೇವರ ಹೆಚ್ಚುವರಿ ವರ ಮತ್ತು ಸಮಾಜದ ಭಾಗ್ಯ. ಇಲ್ಲೊಬ್ಬ ಅಂತಹ ದಂತ ವೈದ್ಯರನ್ನು ಕಾಣಬಹುದು. ಸದಾ ಲವಲವಿಕೆಯ , ಚಟುವಟಿಕೆಯ , ಬಹುಮುಖ ಪ್ರತಿಭೆಯ , ಸಮಾಜಮುಖೀ ಚಿಂತನೆಯ , ಚುರುಕು ಮಾತಿನ , ನಗುಮೊಗದ ಸ್ನೇಹಶೀಲ ವ್ಯಕ್ತಿತ್ತ್ವದ ಅಂತಹ ವೈದ್ಯರು ಯಾರು ,
ಅಂದುಕೊಂಡಿರೇ ?
ಬೇರೆ ಯಾರು ?
ಅವರೇ ,
ಡಾ. ಮುರಲೀಮೋಹನ್ ಚೂಂತಾರು.
ನೀವು ರಾತ್ರೆ ಸುಮಾರು ಎಂಟು ಗಂಟೆಯ ಹೊತ್ತಿಗೆ ಇವರ ಮನೆಯ ಬಳಿ ಹೋದರೆ , ಆಸುಪಾಸಿನ ರಸ್ತೆಗಳಲ್ಲಿ ಸೈಕಲ್ ತುಳಿಯುತ್ತಿರುತ್ತಾರೆ. ಸ್ವಲ್ಪ ಮೊದಲು ಅವರ ಮುದ್ದಿನ ನಾಯಿಗಳನ್ನು ಆಟವಾಡಿಸಿರುತ್ತಾರೆ. ಗೃಹ ರಕ್ಷಕ ದಳದ ಯಾರೋ ಬಂದು ಅಂದಿನ ವರದಿಯನ್ನು ಇವರಿಗೆ ಸಲ್ಲಿಸಿರುತ್ತಾರೆ. ಮನೆಯೊಳಗೆ ಹಲವಾರು ಕಲಾಕೃತಿಗಳು , ಗಣೇಶನ ವಿವಿಧ ಮೂರ್ತಿಗಳು , ಇವರ ಆಸಕ್ತಿಗೆ ಕನ್ನಡಿ ಹಿಡಿದರೆ , ಮನೆಗೆ ಬಂದವರನ್ನು , ಆಸ್ಪತ್ರೆಯಲ್ಲಿ ದಂತವೈದ್ಯೆಯಾಗಿ ಪರಿಪೂರ್ಣೆ , ಮನೆಯಲ್ಲಿ ಅನ್ನಪೂರ್ಣೆ ಆಗಿರುವ ಮಡದಿಯನ್ನು ಪ್ರೀತಿಯಿಂದ ಡಾಕ್ಟ್ರೇ… ಎಂದು ಕರೆದು ಇವರು ಇಂಥವರು ಎಂದು ಪರಿಚಯಿಸುವ ಪರಿ , ಮಕ್ಕಳನ್ನೂ ಕರೆದು ಮಾತನಾಡಿಸುವಂತೆ ಹೇಳುವ ರೀತಿ , ಒಂದಿಷ್ಟು ಹರಟೆ , ತಮಾಷೆ , ನಮ್ಮನ್ನು ಸ್ನೇಹ ಬಂಧದ ಪ್ರಭಾವಲಯಕ್ಕೆ ಸೆಳೆಯುತ್ತದೆ. ಸಮಯ ಸಿಕ್ಕಿದಾಗಲೆಲ್ಲ ಗಾರ್ಡನಿಂಗ್ , ಸಾವಯವ ಕೈತೋಟ , ಆಗೊಮ್ಮೆ ಈಗೊಮ್ಮೆ ಕೌಟುಂಬಿಕ ಪ್ರವಾಸ …. ಹೀಗೆ ಬರೆಯಹೊರಟರೆ ಈ ಬಹುಮುಖ ವ್ಯಕ್ತಿತ್ತ್ವವನ್ನು ಹಿಡಿದಿಡಲು ಕಷ್ಟವಾದೀತು.
ಜನನ ಮತ್ತು ವಿದ್ಯಾಭ್ಯಾಸ :
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಮರಪಡ್ನೂರು ಗ್ರಾಮದ ಹಳ್ಳಿಯ ಹಸಿರ ಸೆರಗಿನ ‘ಚೂಂತಾರು’ ಎಂಬ ಹೆಸರಾಂತ ಮನೆತನದಲ್ಲಿ 1973ನೇ ಜನವರಿ 18 ರಂದು ಶ್ರೀಮತಿ ಸರೋಜಿನಿ ಭಟ್ ಮತ್ತು ಲಕ್ಷ್ಮೀನಾರಾಯಣ ಭಟ್ ದಂಪತಿಗಳ ಮಗನಾಗಿ ಜನಿಸಿದ ಇವರಿಗೆ ಸಂಸ್ಕಾರ , ಬುದ್ಧಿಮತ್ತೆ ಮತ್ತು ಪ್ರತಿಭೆಗಳು ರಕ್ತಗತವಾಗಿ ಬಂದಿವೆ ಎಂದರೆ ಅತಿಶಯೋಕ್ತಿ ಅಲ್ಲ. ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಶಾಲೆಗಳಾದ ಶೇಣಿ ಬೆಳ್ಳಾರೆಗಳಲ್ಲಿ ಮುಗಿಸಿ, ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಪಿಯುಸಿ. ಸರಕಾರಿ ಮೆರಿಟ್ ಕೋಟಾದಲ್ಲಿ ಸರಕಾರಿ ದಂತ ವೈದ್ಯಕೀಯ ಕಾಲೇಜು ಬೆಂಗಳೂರು ಇಲ್ಲಿ ಉಚಿತ ಅರ್ಹತೆ ಪಡೆದು ಬಿ.ಡಿ.ಯಸ್. ಪದವಿ- 1995ರಲ್ಲಿ. ಯಮ್.ಡಿ.ಯಸ್. ಸೀಟನ್ನು ಕೂಡ ಸರಕಾರಿ ಕೋಟಾದಲ್ಲಿಯೇ ಅರ್ಹತೆ ಆಧಾರದ ಮೇಲೆ ಉಚಿತವಾಗಿ ಪಡೆದು ದಾವಣಗೆರೆಯಲ್ಲಿ 2000ನೇ ಇಸವಿಯಲ್ಲಿ ಎಮ್.ಡಿ.ಎಸ್. ಪದವಿ. ದಂತ ವೈದ್ಯಕೀಯ ಕ್ಷೇತ್ರದ ಬಾಯಿ, ಮುಖ, ದವಡೆ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿ.
2000ನೇ ಇಸವಿಯಲ್ಲಿ ಭಾರತೀಯ ರಾಷ್ಟ್ರೀಯ ಪರೀಕ್ಷಾ ಮಂಡಲಿ (National Board of Examination, New Delhi) ಇದರಿಂದ ದಂತ ವೈದ್ಯಕೀಯ ಶಾಸ್ತ್ರದಲ್ಲಿ ಡಿ.ಎನ್.ಬಿ. ಪದವಿ. 2001ರಲ್ಲಿ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ಎಡಿನ್ ಬರ್ಗ್ ಇಂಗ್ಲೆಂಡ್ ಇದರ MOSRCSEd. ಆಸ್ಪತ್ರೆಯ ನಿರ್ವಹಣೆ (Hospital Management) ವಿಷಯದಲ್ಲಿ ಅಲಗಪ್ಪ ವಿಶ್ವವಿದ್ಯಾಲಯದಿಂದ ಎಂ.ಬಿ.ಎ. ಪದವಿ , 2012ರಲ್ಲಿ.
2013ರಲ್ಲಿ Fierre Fauchard Acadamy ಇದರ ಫೆಲೋಶಿಪ್.
1997 ಜುಲೈ 3 ರಂದು ಹೊಸಂಗಡಿ – ಮಂಜೇಶ್ವರ ಹೃದಯಭಾಗದಲ್ಲಿ ‘ಸುರಕ್ಷಾ ದಂತ ಚಿಕಿತ್ಸಾಲಯ’ವನ್ನು ತೆರೆದು ದಂತ ವೈದ್ಯಕೀಯ ಸೇವೆಯನ್ನು ಆರಂಭಿಸಿದರು. ಕಳೆದ 26 ವರ್ಷಗಳಿಂದ ತಮ್ಮ ಧರ್ಮಪತ್ನಿ ಡಾ.ರಾಜಶ್ರೀ ಮೋಹನ್ ಇವರ ಜೊತೆಗೂಡಿ ಗಡಿನಾಡಿನ ಜನರ ದಂತ ಸಂಬಂಧಿ ತೊಂದರೆಗಳಿಗೆ ಪರಿಹಾರ ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದಾರೆ. ಬದ್ಧತೆ, ಕಳಕಳಿ, ಕಾಳಜಿ ಮತ್ತು ವೃತ್ತಿ ಧರ್ಮವನ್ನು ಚಾಚೂ ತಪ್ಪದೆ ಪಾಲಿಸುತ್ತಾ ಕಾಲಕಾಲಕ್ಕೆ ದಂತ ಚಿಕಿತ್ಸಾಲಯವನ್ನು ವಿಸ್ತರಿಸುತ್ತಾ ಒಂದು ದಂತ ಕುರ್ಚಿಯಿಂದ ಆರಂಭಿಸಿದ ಸುರಕ್ಷಾ ದಂತ ಚಿಕಿತ್ಸಾಲಯ, ಇಂದು 10 ದಂತ ಕುರ್ಚಿಗಳು 2 ದಂತ ಕ್ಷ-ಕಿರಣ ಯಂತ್ರಗಳು ಮತ್ತು ಸಕಲ ಅತ್ಯಾಧುನಿಕ ದಂತ ಪರಿಹಾರಗಳೊಂದಿಗೆ ಸುರಕ್ಷಾ ದಂತ ಆಸ್ಪತ್ರೆಯಾಗಿ ಬೆಳೆದು ನಿಂತಿದೆ ಮತ್ತು ಸುರಕ್ಷಾ ದಂತ ಚಿಕಿತ್ಸಾಲಯವು , ದಂತ ಚಿಕಿತ್ಸೆಗೆ ಸುರಕ್ಷಿತ ತಾಣ ಎನ್ನಿಸಿಕೊಂಡಿರುವುದಲ್ಲದೆ, ಮಂಗಳೂರು ಹಾಗೂ ಕಾಸರಗೋಡಿನ ಜನರ ನಡುವೆ ಭಾವನಾತ್ಮಕ ಕೊಂಡಿಯಾಗಿದೆ.
ಡಾಕ್ಟರ್ ಗಳು ತಮ್ಮ ವಿಷಯ ತಜ್ಞತೆ ಮತ್ತು ಅನುಭವಗಳ ಮೂಲಕ ಮೌಲಿಕ ಲೇಖನಗಳನ್ನು ಬರೆದು ರಾಷ್ಟ್ರೀಯ ಯಾ ಅದಕ್ಕೂ ಮೇಲಿನ ಮೆಡಿಕಲ್ ಜರ್ನಲ್ ಗಳಿಗೆ ಕಳುಹಿಸಬಹುದು. ಆದರೆ ಅದು ಅಂತಹ ಓದುಗರನ್ನು ಮಾತ್ರ ತಲುಪಬಲ್ಲುದು. ಇವರು ಹಾಗಲ್ಲ. ಅಂತಹ ಲೇಖನಗಳ ಜೊತೆಗೆ , ಓರ್ವ ಅಪ್ಪಟ ಕನ್ನಡಿಗನಾಗಿ , ಜನಸಾಮಾನ್ಯರಿಗೆ ಮುಟ್ಟುವಂತೆ ಕನ್ನಡದಲ್ಲಿ ವೈದ್ಯಕೀಯ ಲೇಖನಗಳನ್ನು ಸಮಗ್ರ ಮಾಹಿತಿಯೊಂದಿಗೆ ಬರೆದು ವಿವಿಧ ಪತ್ರಿಕೆಗಳಲ್ಲಿ , ಫೇಸ್ ಬುಕ್ , ವಾಟ್ಸ್ಆಪ್ ಹೀಗೆ ಇಂದು ಎಲ್ಲರಿಗೆ ಅತಿ ಸುಲಭವಾಗಿ ತಲುಪುವಂತೆ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಹಾಗೂ ಹೆಮ್ಮೆಯ ವಿಚಾರ. ಹಾಗಾಗಿ ಇವರು ಜನ ಸಾಮಾನ್ಯರ ಪ್ರೀತಿ , ಗೌರವ , ಕೃತಜ್ಞತೆಗಳಿಗೆ ಪಾತ್ರರಾಗಿದ್ದಾರೆ.
ಇವರು ಇಕ್ಕಳ ಹಿಡಿದರೆ ಹಲ್ಲು ನೋವಿನಿಂದ ಮುಕ್ತಿ.
ಪೆನ್ನು ಹಿಡಿದರೆ ಓದುಗರಿಗೆ ಅರಿವಾಗುವುದು ಇವರ ಸಾಹಿತ್ಯದ ಶಕ್ತಿ.
ಕಾರ್ಯವೈಖರಿ , ಸಿದ್ಧಿ ,ಸಾಧನೆಗಳು :
ಈಗ ಡಾ. ಮುರಲೀಯವರ ಕಾರ್ಯ ವೈಖರಿ , ಸಿದ್ಧಿ , ಸಾಧನೆ ಹಾಗೂ ಅರಸಿ ಬಂದ ಪ್ರಶಸ್ತಿಗಳ ಪಟ್ಟಿ ಮಾಡೋಣವೇ ?
2000ನೇ ಇಸವಿಯ ಆಗಸ್ಟ್ 1 ರಂದು ಮಂಗಳೂರಿನ ಖ್ಯಾತ ಎ.ಬಿ. ಶೆಟ್ಟಿ ದಂತ ವೈದ್ಯಕೀಯ ಕಾಲೇಜಿನಲ್ಲಿ ವೃತ್ತಿಪರ ಅಧ್ಯಾಪಕರಾಗಿ 16 ವರ್ಷಗಳ ಕಾಲ ಸತತವಾಗಿ ದಂತ ವೈದ್ಯಕೀಯ ಕ್ಷೇತ್ರದಲ್ಲಿ ಬೋಧನಾನುಭವ.
ಬಾಯಿ, ಮುಖ, ದವಡೆ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಹಿರಿಯ ಪ್ರಾಧ್ಯಾಪಕರಾಗಿ ಸೇವೆ.
ದಂತ ವೈದ್ಯಕೀಯ ವಿಜ್ಞಾನ ವಿಷಯದಲ್ಲಿ ಉಪನ್ಯಾಸಗಳು. ದಂತ ವೈದ್ಯಕೀಯ ಕ್ಷೇತ್ರದ ಜ್ಞಾನಾರ್ಜನೆಗಾಗಿ ಶ್ರೀಲಂಕಾ, ನೇಪಾಳ, ಥೈಲಾಂಡ್, ಮಲೇಷ್ಯಾ, ಸಿಂಗಪೂರ್, ಚೈನಾ, ಈಜಿಪ್ಟ್, ದುಬೈ, ಶಾರ್ಜಾ, ಹಾಂಕಾಂಗ್, ಮಕಾವ್, ರಷ್ಯಾ, ಮಾಲ್ಫೀವ್ಸ್ ಮುಂತಾದ ದೇಶಗಳಿಗೆ ಭೇಟಿ ಮತ್ತು ದೇಶ ವಿದೇಶಗಳ ವಿವಿಧೆಡೆಗಳಲ್ಲಿ ನಡೆದ ದಂತ ಸಮ್ಮೇಳನಗಳಲ್ಲಿ ಪ್ರಬಂಧ ಮಂಡನೆ.
ದಂತ ವೈದ್ಯಕೀಯ ಶಾಸ್ತ್ರದ ನಿಯತಕಾಲಿಕಗಳಲ್ಲಿ ನೂರಕ್ಕೂ ಹೆಚ್ಚು ದಂತ ಆರೋಗ್ಯದ ಬಗೆಗಿನ ಲೇಖನಗಳು – ಆಂಗ್ಲ ಭಾಷೆಯಲ್ಲಿ.
ಸಾಮಾಜಿಕ ಕಳಕಳಿಯ 150 ಕ್ಕೂ ಹೆಚ್ಚು ಉಚಿತ ದಂತ ಚಿಕಿತ್ಸಾ ಶಿಬಿರಗಳು – ಸಾವಿರಾರು ಮಂದಿಗೆ ಉಚಿತ ದಂತ ಚಿಕಿತ್ಸೆ ನೀಡುವಲ್ಲಿ ಮುಖ್ಯ ಭೂಮಿಕೆ.
50ಕ್ಕೂ ಹೆಚ್ಚು ಬಾಯಿ ಕ್ಯಾನ್ಸರ್ ತಪಾಸಣಾ ಶಿಬಿರ, 25ಕ್ಕೂ ಹೆಚ್ಚು ಕಣ್ಣು ತಪಾಸಣಾ ಶಿಬಿರ, 25 ಕ್ಕೂ ಹೆಚ್ಚು ವೈದ್ಯಕೀಯ ಶಿಬಿರ ನಡೆಸಿ ಜನರಿಗೆ ಉಚಿತ ವೈದ್ಯಕೀಯ ಸೌಲಭ್ಯ ತಲುಪುವಲ್ಲಿ ಮುತುವರ್ಜಿ. ನೂರ ಐವತ್ತಕ್ಕೂ ಹೆಚ್ಚು ರಕ್ತದಾನ ಶಿಬಿರಗಳ ಆಯೋಜನೆ.
ಸಾವಿರಾರು ಯುನಿಟ್ ರಕ್ತ ಸಂಗ್ರಹಿಸಿ ಮಂಗಳೂರಿನ ಸರಕಾರಿ ಬ್ಲಡ್ ಬ್ಯಾಂಕ್‍ಗಳಿಗೆ ರಕ್ತ ಪೂರೈಕೆ.
ರಕ್ತದಾನದ ಬಗ್ಗೆ “ರಕ್ತದಾನ ಜೀವದಾನ” ಎಂಬ ಪುಸ್ತಕ ಬರೆದು 35000 ಪ್ರತಿಗಳನ್ನು ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯಾದ್ಯಂತ ಉಚಿತವಾಗಿ ಹಂಚಿ, ರಕ್ತದಾನದ ಬಗ್ಗೆ ಬಹುದೊಡ್ಡ ಜಾಗೃತಿ ಮೂಡಿಸಿರುವುದು.
“ಸುರಕ್ಷಾ ದಂತ ಆರೋಗ್ಯ” ಮಾರ್ಗದರ್ಶಿ ಎಂಬ ದಂತ ಆರೋಗ್ಯದ ಬಗೆಗಿನ ಪುಸ್ತಕ ಮತ್ತು ಕಚಗುಳಿ ಎಂಬ ದಂತ ಹನಿಗವನ ಸಂಕಲನ.
ರಕ್ತದಾನ ಜೀವದಾನ , ಸುರಕ್ಷಾ ದಂತ ಆರೋಗ್ಯ ಮಾರ್ಗದರ್ಶಿ, ಕಚಗುಳಿ ದಂತ ಹನಿಗವನಗಳು, ಚಿತ್ರಾನ್ನ 32 ನೈಜ ದಂತಕತೆಗಳು, ಸಂಜೀವಿನಿ ಆರೋಗ್ಯ ಮಾರ್ಗದರ್ಶಿ, ಸಂಜೀವಿನಿ ಆರೋಗ್ಯ ಮಾರ್ಗದರ್ಶಿ ಭಾಗ-2, ಅರಿವು ಬಾಯಿ ಕ್ಯಾನ್ಸರ್ ಮಾರ್ಗದರ್ಶಿ, ಸಂಗಾತಿ ಜ್ವರ ಸಂಹಿತೆ, ಧನ್ವಂತರಿ ವೈದ್ಯಕೀಯ ಲೇಖನಗಳು, ಸುಮುಖ ದಂತ ಆರೋಗ್ಯ ಮಾರ್ಗದರ್ಶಿ, ಸಂಕಲ್ಪ-2020 ಕೋವಿಡ್ -19 ಆರೋಗ್ಯ ಮಾರ್ಗದರ್ಶಿ, ಅಶೀತಿ ಮತ್ತು ಸ್ವಾದ ಆಹಾರ ಸಂಹಿತೆ ಎಂಬ 13 ಪುಸ್ತಕಗಳನ್ನು ಈವರೆಗೆ ಬರೆದು ಪ್ರಕಟಿಸಿ ವೈದ್ಯಕೀಯ ಸಾಹಿತಿಯೆಂದು ರಾಜ್ಯಾದಂತ ಗುರುತಿಸುವಿಕೆ ಮತ್ತು ಗೌರವ.
4ನೇ ಕೃತಿ ಸಂಜೀವಿನಿ ಆರೋಗ್ಯ ಮಾರ್ಗದರ್ಶಿ ಪುಸ್ತಕಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಇದರ 2017ರ ಸಾಲಿನ ಪ್ರತಿಷ್ಠಿತ ಬಿಸಲೇರಿ ಜಯಣ್ಣ ಮತ್ತು ಬಿಸಲೇರಿ ಬ್ರದರ್ಸ್ ದತ್ತಿ ಸಾಹಿತ್ಯ ಪ್ರಶಸ್ತಿ.
6ನೇ ಕೃತಿ ಸಂಜೀವಿನಿ ಆರೋಗ್ಯ ಮಾರ್ಗದರ್ಶಿ ಭಾಗ-2 ಪುಸ್ತಕಕ್ಕೆ 2018ನೇ ಸಾಲಿನ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಕರ್ನಾಟಕ ಸರಕಾರ ಇದರ ಪ್ರತಿಷ್ಠಿತ ವೈದ್ಯಕೀಯ ಸಾಹಿತ್ಯ ಕೃತಿ ಪ್ರಶಸ್ತಿ .
7ನೇ ಕೃತಿ ಅರಿವು ಬಾಯಿ ಕ್ಯಾನ್ಸರ್ ಮಾರ್ಗದರ್ಶಿ ಪುಸ್ತಕಕ್ಕೆ ಕನ್ನಡ ಸಾಹಿತ್ಯ ಅಕಾಡೆಮಿ ಇದರ 2019ನೇ ಸಾಲಿನ ಉತ್ತಮ ವೈದ್ಯಕೀಯ ಸಾಹಿತ್ಯ ಕೃತಿ ಪ್ರಶಸ್ತಿ .
11ನೆಯ ಕೃತಿ ಸಂಗಾತಿ ಜ್ವರ ಸಂಹಿತೆ ಪುಸ್ತಕಕ್ಕೆ 2022ನೇ ಸಾಲಿನ ಪ್ರತಿಷ್ಠಿತ ಬಿಸಲೇರಿ ಜಯಣ್ಣ ಮತ್ತು ಬಿಸಿಲೇರಿ ಬ್ರದರ್ಸ್ ದತ್ತಿ ಪ್ರಶಸ್ತಿ
ಕನ್ನಡ ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ವಿಜ್ಞಾನ ಹಾಗೂ ತಂತ್ರಜ್ಞಾನ ಅಕಾಡೆಮಿ ಎಂಬ ಮೂರು ಪ್ರತಿಷ್ಠಿತ ಸಾಹಿತ್ಯ ಸಂಸ್ಥೆಗಳ ಪ್ರಶಸ್ತಿ ಗಿಟ್ಟಿಸಿದ ಕೆಲವೇ ಕೆಲವು ವೈದ್ಯ ಸಾಹಿತಿಗಳ ಸಾಲಿನಲ್ಲಿ ಡಾ. ಮುರಲೀ ಮೋಹನ್ ಚೂಂತಾರು.
ಪೀಠಿಕೆಯಲ್ಲಿ ತಿಳಿಸಿದಂತೆ ಸರಳವಾಗಿ ಕನ್ನಡದಲ್ಲಿ ಬರೆದ ಸಾವಿರಾರು ವೈದ್ಯಕೀಯ ಲೇಖನಗಳು ದೈನಿಕ ಪತ್ರಿಕೆಗಳಾದ ಹೊಸದಿಗಂತ, ಪ್ರಜಾವಾಣಿ, ವಿಜಯವಾಣಿ, ಕನ್ನಡ ಪ್ರಭ, ಉದಯವಾಣಿ, ವಾರ್ತಾಭಾರತಿ, ಕಾರವಲ್, ಉತ್ತರಪ್ರದೇಶ, ಜಯಕಿರಣ ಮತ್ತು ಮಾಸಿಕಗಳಾದ ‘ಆರೋಗ್ಯ’, ‘ವೈದ್ಯಲೋಕ’, ಸುಧಾ, ತರಂಗ, ಸಂಜೀವಿನಿ ಮುಂತಾದ ಪತ್ರಿಕೆಗಳಲ್ಲಿ ಬರೆದು ಜನರಲ್ಲಿ ವಿವಿಧ ರೋಗಗಳ ಬಗ್ಗೆ ಜಾಗೃತಿ ಮೂಡಿಸಿ, ರೋಗ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ. ಬಹಳ ಕಷ್ಟವಾದ ವೈದ್ಯಕೀಯ ರೋಗಗಳನ್ನು ತುಂಬಾ ಸರಳವಾದ ಭಾಷೆಯಲ್ಲಿ ಬರೆಯುವ ಚಾಕಚಕ್ಯತೆ ಶ್ರೀಯುತರ ವಿಶೇಷತೆ. ಇತ್ತೀಚೆಗೆ ಉಂಬುಳ ಚಿಕಿತ್ಸೆ ಬಗ್ಗೆ ಬರೆದಿದ್ದಾರೆ ಎಂದರೆ ಇವರ ಜ್ಞಾನದ ಹರಹು ಮತ್ತು ವಿಷಯ ವೈವಿಧ್ಯದ ಸೂಚನೆ ಸಿಗಬಹುದೇನೋ ?!
ಈವರೆಗೂ ಸುಮಾರು 5000 ಆರೋಗ್ಯ ಜಾಗೃತಿ ಲೇಖನಗಳನ್ನು ಬರೆದು ರಾಜ್ಯಾದ್ಯಂತ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡಿರುವ ಡಾ. ಮುರಲೀಯವರ ಆರೋಗ್ಯ ಕ್ಷೇತ್ರದಲ್ಲಿ ವೈದ್ಯಕೀಯ ಸಾಹಿತ್ಯಕ್ಕೆ ನೀಡಿದ ಅಪಾರ ಸೇವೆಯನ್ನು ಗುರುತಿಸಿ ರಾಜೀವ್ ಗಾಂಧಿ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು, ಕರ್ನಾಟಕ ಸರಕಾರ 2020ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಕಲಬುರಗಿಯ ಶಂಕರ್ ಪ್ರತಿಷ್ಠಾನ 2000ನೇ ಇಸವಿಯ ಶ್ರೀ ವೈದ್ಯಸಾಹಿತಿ ಪ್ರಶಸ್ತಿ ನೀಡಿ ಗೌರವಿಸಿದೆ.
ವೈದ್ಯಕೀಯ, ಶೈಕ್ಷಣಿಕ ಸೇವೆಯ ಜೊತೆಗೆ ಸಾಮಾಜಿಕ ಬದ್ಧತೆ ಮತ್ತು ಕಳಕಳಿಗಳಿಂದ ಕಾರ್ಯವೆಸಗುತ್ತಿರುವ ಶ್ರೀಯುತರಲ್ಲಿ ನಾಯಕತ್ವ ಗುಣವನ್ನು ಮೇಲ್ನೋಟಕ್ಕೇ ಗುರುತಿಸಬಹುದಾಗಿದೆ.
ಭಾರತೀಯ ದಂತ ವೈದ್ಯಕೀಯ ಸಂಘ ಮಂಗಳೂರು ಇದರ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿರುತ್ತಾರೆ. ಭಾರತೀಯ ರೆಡ್‍ಕ್ರಾಸ್ ಸೊಸೈಟಿ ದಕ್ಷಿಣ ಕನ್ನಡ ಜಿಲ್ಲೆ ಇದರ ಸಭಾಪತಿಯಾಗಿಯೂ ಕೆಲಸ ನಿರ್ವಹಿಸಿರುತ್ತಾರೆ. ನಿಟ್ಟೆ ವಿಶ್ವವಿದ್ಯಾಲಯ ಇದರ ರಾಷ್ಟ್ರೀಯ ಸೇವಾ ಯೋಜನೆಯ ಸಂಘಟನಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದಾರೆ.
ಇವರ ಸಾಮಾಜಿಕ ಕಳಕಳಿ ಮತ್ತು ಬದ್ಧತೆಯನ್ನು ಮೆಚ್ಚಿ ಘನತೆವೆತ್ತ ಕರ್ನಾಟಕ ಸರ್ಕಾರ ಗೃಹರಕ್ಷಕ ದಳ, ದಕ್ಷಿಣ ಕನ್ನಡ ಜಿಲ್ಲೆ ಇದರ ಸಮಾದೇಷ್ಟರಾಗಿ 2015ನೇ ಜನವರಿ 6ರಂದು ನೇಮಿಸಿದೆ. 5 ವರ್ಷಗಳ ಕಾಲಾವಧಿ ಇರುವ ಈ ಹುದ್ದೆಯಲ್ಲಿ ಅಧಿಕಾರ ವಹಿಸಿದ ಬಳಿಕ ಕ್ರಾಂತಿಕಾರಕ ಬದಲಾವಣೆ ತಂದು, ಗೃಹರಕ್ಷಕ ದಳಕ್ಕೆ ಹೊಸ ಚೈತನ್ಯವನ್ನು ತುಂಬಿರುತ್ತಾರೆ.
2020ರಲ್ಲಿ 2ನೇ ಬಾರಿಗೆ ಗೃಹರಕ್ಷಕ ದಳದ ಸಮಾದೇಷ್ಟರಾಗಿ ಅಧಿಕಾರ ವಹಿಸಿಕೊಂಡಿರುತ್ತಾರೆ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೌರರಕ್ಷಣಾ ದಳದ ಚೀಫ್ ವಾರ್ಡನ್ ಆಗಿ ಅಧಿಕಾರ ವಹಿಸಿಕೊಂಡಿರುತ್ತಾರೆ. ಶ್ರೀಯುತರು ಗೃಹರಕ್ಷಕ ದಳಕ್ಕೆ ನೀಡಿದ ಗಣನೀಯ ಸೇವೆಯನ್ನು ಗುರುತಿಸಿ, 2019ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ನೀಡಿ ಗೌರವಿಸಲಾಗಿದೆ.
ತಮ್ಮ ತಾಯಿ ದಿವಂಗತ ಸರೋಜಿನಿ ಭಟ್ ಇವರ ಅಕಾಲಿಕ ಮರಣದ ನಂತರ ಅವರ ನೆನಪಿನಲ್ಲಿ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಅದರ ಚುಕ್ಕಾಣಿಯನ್ನು ತಾವೇ ಹಿಡಿದು ಮುನ್ನಡೆಸುತ್ತಿದ್ದಾರೆ. ಆಶ್ರಯ, ಆಸರೆ, ಆರೋಗ್ಯ ಎಂಬ ಧ್ಯೇಯದೊಂದಿಗೆ ಕಾರ್ಯಾಚರಿಸುವ ಈ ಸಂಸ್ಥೆ ಬಡವರಿಗೆ ಉಚಿತ ವಸತಿ, ಉದ್ಯೋಗ, ವಿದ್ಯಾಭ್ಯಾಸ ಮತ್ತು ಆರೋಗ್ಯ ಸೌಲಭ್ಯ ನೀಡುವಲ್ಲಿ ಕಾರ್ಯತತ್ಪರವಾಗಿದೆ. ಈ ಪ್ರತಿಷ್ಠಾನದ ಮೂಲಕ ಸುಮಾರು 20 ಕ್ಕೂ ಹೆಚ್ಚು ಸರಕಾರಿ ಶಾಲೆಗಳ ಗ್ರಂಥಾಲಯಗಳಿಗೆ ಸುಮಾರು 5000 ಕ್ಕಿಂತಲೂ ಹೆಚ್ಚು ಪುಸ್ತಕಗಳನ್ನು ನೀಡಿರುತ್ತಾರೆ. ಈಗಾಗಲೇ 200ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಿರುವ ಈ ಸಂಸ್ಥೆ ಮುಂದಿನ ದಿನಗಳಲ್ಲಿ ಡಾ. ಮುರಲೀಯವರ ನೇತೃತ್ವದಲ್ಲಿ ಮತ್ತಷ್ಟು ಬೆಳಗುವುದರಲ್ಲಿ ಎರಡು ಮಾತಿಲ್ಲ. ಇವೆಲ್ಲದರ ಜತೆಗೆ ದೈವಭಕ್ತರಾದ ಶ್ರೀಯುತರು ಸಾಮಾಜಿಕ, ಧಾರ್ಮಿಕ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಅವಿರತವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದು , ಇಂದಿನ ಯುವಜನತೆಗೆ ಮಾದರಿ ವ್ಯಕ್ತಿತ್ವವಾಗಿದ್ದಾರೆ ಎಂದು ಕಂಡಿತವಾಗಿಯೂ ಹೇಳಬಹುದು. ವಿವಾಹಿತರಾಗಿರುವ ಶ್ರೀಯುರು ಪತ್ನಿ ಡಾ.ರಾಜಶ್ರೀ ಮೋಹನ್, ಖ್ಯಾತ ದಂತ ವೈದ್ಯರು, ಮಗ ಸಮರ್ಥ ಮತ್ತು ಮಗಳು ಸಿರಿ ಇವರೊಂದಿಗೆ ಮಂಗಳೂರಿನ ಬಿಜೈಯಲ್ಲಿ ತುಂಬು ಸಂಸಾರ ನಡೆಸುತ್ತಿದ್ದಾರೆ. ಇವರ ಮಗ ಸ್ವಿಜರ್‍ಲ್ಯಾಂಡ್‍ನ ಜ್ಯೂರಿಕ್ ಯುನಿವರ್ಸಿಟಿಯಲ್ಲಿ ಗಣಿತ ಶಾಸ್ತ್ರದಲ್ಲಿ ಉನ್ನತ ವ್ಯಾಸಾಂಗ ಮಾಡುತ್ತಿದ್ದಾನೆ ಮತ್ತು ಮಗಳು ಸಿ.ಎಫ್.ಎ.ಎಲ್ ಸಂಸ್ಥೆಯಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಾಳೆ.
ಕೋವಿಡ್ -19 ಜವಾಬ್ದಾರಿಗಳು :
ಓರ್ವ ವೈದ್ಯರಾಗಿ, ಕೋವಿಡ್-19 ಸಾಂಕ್ರಾಮಿಕ ರೋಗ ಸಮುದಾಯದಲ್ಲಿ ಹರಡುತ್ತಿದ್ದ ವೇಳೆಯಲ್ಲಿ , ಜನರಲ್ಲಿ ಸದ್ರಿ ರೋಗದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಸಂಕಲ್ಪ -2020, ಕೋವಿಡ್-19 ಆರೋಗ್ಯ ಮಾರ್ಗದರ್ಶಿ ಎಂಬ ಪುಸ್ತಕವನ್ನು ಬರೆದು ಪ್ರಕಾಶಿಸಿ ಸುಮಾರು 1000 ಪ್ರತಿಗಳನ್ನು ಹಂಚಿ ರೋಗದ ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ. ಈ ಪುಸ್ತಕದಲ್ಲಿ ವೈರಾಣುವಿನ ರಚನೆ, ಕೋವಿಡ್ -19 ರೋಗದ ಲಕ್ಷಣಗಳು, ತಡೆಗಟ್ಟುವುದು ಹೇಗೆ ಮತ್ತು ಚಿಕಿತ್ಸೆ ಹೇಗೆ ಎಂಬುದರ ಬಗ್ಗೆ ಪರಿಪೂರ್ಣ ಮಾಹಿತಿ ನೀಡಲಾಗಿದೆ. ದ.ಕ. ಜಿಲ್ಲೆಯ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಮತ್ತು ಗೃಹರಕ್ಷಕ ಇಲಾಖೆಯ ಎಲ್ಲಾ ಸಿಬ್ಬಂದಿಗಳಿಗೂ ಈ ಪುಸ್ತಕವನ್ನು ಉಚಿತವಾಗಿ ಹಂಚಲಾಗಿದೆ ಮತ್ತು ದ.ಕ. ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಿಗೆ ಉಚಿತವಾಗಿ ನೀಡಲಾಗಿದೆ.
ದ.ಕ. ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರ ನೆಲೆಯಲ್ಲಿ ಹಾಗೂ ದ.ಕ. ಜಿಲ್ಲಾ ಪೌರರಕ್ಷಣಾ ತಂಡದ ಮುಖ್ಯಪಾಲಕರ ನೆಲೆಯಲ್ಲಿ ಮಂಗಳೂರು ನಗರದ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ, ಕೂಲಿ ಕೆಲಸದವರಿಗೆ ಮತ್ತು ಆಟೋ ರಿಕ್ಷಾ ಚಾಲಕರಿಗೆ ನಿರಂತರವಾಗಿ ಕೋವಿಡ್-19 ರೋಗದ ಬಗ್ಗೆ ಮಾಹಿತಿ ಶಿಬಿರ ನಡೆಸಿರುತ್ತಾರೆ. ಜೊತೆಗೆ ಅವರಿಗೆ ಮುಖಕವಚ, ಸ್ಯಾನಿಟೈಸರ್‍ಗಳನ್ನು ಉಚಿತವಾಗಿ ಹಂಚಲಾಗಿದೆ. ಸುಮಾರು 500ಕ್ಕೂ ಹೆಚ್ಚು ಮಂದಿ ಈ ಸೌಲಭ್ಯವನ್ನು ಪಡೆದಿರುತ್ತಾರೆ. ಕೋವಿಡ್-19 ರೋಗ ಬಂದು ಹೋದ ಬಳಿಕ ಜನರಿಗೆ ಹೆಚ್ಚಿನ ಮಾನಸಿಕ ಧೈರ್ಯ ತುಂಬಿರುತ್ತಾರೆ ಹಾಗೂ ಲಸಿಕಾ ಅಭಿಯಾನದಲ್ಲಿ ಪಾಲ್ಗೊಂಡು ಹೆಚ್ಚು ಹೆಚ್ಚು ಜನರು ಲಸಿಕೆ ತೆಗೆದುಕೊಳ್ಳುವಂತೆ ಪ್ರೇರಣೆ ನೀಡಿರುತ್ತಾರೆ. ಲಸಿಕೆ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ತೊಡೆದು ಹಾಕಿ ಮಾರ್ಗದರ್ಶನ ನೀಡಿ ಲಸಿಕೆ ತೆಗೆದುಕೊಳ್ಳುವಂತೆ ಮನವೊಲಿಸಿ “ಸಮುದಾಯ ಪ್ರತಿರೋಧಕತೆ”
ಪಡೆಯುವಲ್ಲಿ ಬಹುಮುಖ್ಯ ಭೂಮಿಕೆ ವಹಿಸಿರುತ್ತಾರೆ.
ಇತರ ಉಲ್ಲೇಖಾರ್ಹ ಚಟುವಟಿಕೆಗಳು :
ಪರಿಸರ ಸಂರಕ್ಷಣೆಯ ಪರವಾದ ಅನೇಕ ಕಾರ್ಯಕ್ರಮಗಳನ್ನು ನಡೆಸಿರುವುದಲ್ಲದೆ , ಸ್ವಚ್ಛತಾ ಕಾರ್ಯಕ್ರಮಗಳ ನೇತೃತ್ವ.
ಯೋಗ ದಿನಾಚರಣೆ ಹಾಗೂ ವಿವಿಧ ಸಂದರ್ಭಗಳಲ್ಲಿ ಯೋಗದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ.
ಪ್ರಸ್ತುತ, ತಮ್ಮೆಲ್ಲ ಜವಾಬ್ದಾರಿ ಹಾಗೂ ಹವ್ಯಾಸಗಳ ನಡುವೆ , ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ಓರ್ವ ಗೌರವ ಕಾರ್ಯದರ್ಶಿಯಾಗಿಯೂ ಇದ್ದುಕೊಂಡು , ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ.
ಕೊನೆಗೆ ,
ಡಾ. ಮುರಲೀಮೋಹನ್ ಚೂಂತಾರು
ಬಹುಮುಖದ ವ್ಯಕ್ತಿತ್ತ್ವ ನಮ್ಮ ಚೂಂತಾರು
ಸಮಾಜ ಹಿತದೃಷ್ಟಿಯಲಿ ಎದ್ದು ನಿಂತಾರು
ಬಿಡುವಿಲ್ಲ ದಣಿವಿಲ್ಲ ಶ್ರದ್ಧೆ ಆಸಕ್ತಿ
ಪರಹಿತದ ಸಂಕಲ್ಪ ನೀಡುವುದು ಶಕ್ತಿ !
ವೈದ್ಯರ ದಿನದಂದು ಇಂಥವರನ್ನು ಅಭಿನಂದಿಸುವುದು ನಮ್ಮೆಲ್ಲರ ಕರ್ತವ್ಯವಲ್ಲವೇ ?
ಎನ್. ಸುಬ್ರಾಯ ಭಟ್ , ಮಂಗಳೂರು.