ಲಂಚ ಭ್ರಷ್ಟಾಚಾರ ವಿರೋಧಿ ಫಲಕ ಹಸ್ತಾಂತರ – ಪ್ರತಿಜ್ಞೆ ಸ್ವೀಕಾರ
ಅರಂತೋಡು ಪ್ರಥಮ ಹಂತದ ಗ್ರಾಮಸಭೆ
ಗ್ರಾಮದಲ್ಲಿ ಬೆಳೆ ಸಮೀಕ್ಷೆ ಯೋಜನೆಯ ದಾಖಲಾತಿ ಬಹುತೇಕ ಜನರಿಗೆ ಆಗಿಲ್ಲ. ಪ್ರತೀ ಬಾರಿ ಇದಕ್ಕಾಗಿ ಆರ್.ಟಿ.ಸಿ. ಹಿಡಿದು ಕಂದಾಯ ಇಲಾಖೆಗೆ ಅಲೆದಾಡುವ ಪರಿಸ್ಥಿತಿ ಇದ್ದು, ಇದನ್ನು ಸರಿಪಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ ಘಟನೆ ಅರಂತೋಡು ಗ್ರಾಮಸಭೆಯಿಂದ ವರದಿಯಾಗಿದೆ.
ಅರಂತೋಡು ಗ್ರಾಮ ಪಂಚಾಯತಿಯ 2023-24ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯು ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಹರಿಣಿ ದೇರಾಜೆ ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತಿಯ ಅಮೃತ ಸಭಾಂಗಣದಲ್ಲಿ ಜು.1ರಂದು ಜರುಗಿತು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಶ್ರೀಮತಿ ವೀಣಾ ಎಂ.ಟಿ. ಅವರು ನೋಡೆಲ್ ಅಧಿಕಾರಿಯಾಗಿ ಉಪಸ್ಥಿತರಿದ್ದರು. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.
ಗ್ರಾಮ ಪಂಚಾಯತಿ ಸಿಬ್ಬಂದಿ ಈಶ್ವರ ಅವರು ವರದಿ ಮಂಡಿಸಿದರು. ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖೆ ಸವಲತ್ತುಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸುದ್ದಿ ಜನಾಂದೋಲನವಾದ ಲಂಚ – ಭ್ರಷ್ಟಾಚಾರ ವಿರೋಧಿ ಫಲಕ ಹಸ್ತಾಂತರ ಹಾಗೂ ಪ್ರತಿಜ್ಞೆ ಸ್ವೀಕಾರ ನಡೆಯಿತು.
ಸುದ್ದಿ ವರದಿಗಾರ ಕೃಷ್ಣ ಬೆಟ್ಟ ಅವರು ಸುದ್ದಿ ಜನಾಂದೋಲನ ಲಂಚ ಭ್ರಷ್ಟಾಚಾರ ವಿರೋಧಿ ಆಂದೋಲನದ ಕುರಿತು ಮಾತನಾಡಿ, ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಹರಿಣಿ ದೇರಾಜೆ ಅವರಿಗೆ ಫಲಕ ಹಸ್ತಾಂತರಿಸಿದರು. ಪಿ.ಡಿ.ಒ. ಜಯಪ್ರಕಾಶ್ ಅವರು ಪ್ರತಿಜ್ಞೆ ಬೋಧಿಸಿದರು.
ಕಂದಾಯ ಇಲಾಖೆಯ ಬಗ್ಗೆ ಗ್ರಾಮ ಲೆಕ್ಕಾಧಿಕಾರಿ ಮೀಯಾ ಸಾಬುಲ್ಲ ಅವರು ಮಾಹಿತಿ ನೀಡುತ್ತಿದ್ದಾಗ , ನಿವೃತ್ತ ಪ್ರಾಂಶುಪಾಲರಾದ ಕೆ.ಆರ್. ಗಂಗಾಧರ್ ಅವರು ಮಾತನಾಡಿ ನನಗೂ ಸೇರಿದಂತೆ ಅರಂತೋಡು ಗ್ರಾಮದ ಬಹಳಷ್ಟು ಜನರಿಗೆ ಬೆಳೆ ಸಮೀಕ್ಷೆ ಯೋಜನೆಗೆ ದಾಖಲಾತಿ ಆಗಿಲ್ಲ. ಇದಕ್ಕಾಗಿ
ಪ್ರತೀ ಸಲ ಆರ್.ಟಿ.ಸಿ. ಹಿಡಿದುಕೊಂಡು ಕಂದಾಯ ಇಲಾಖೆಗೆ ಅಲೆದಾಡುವ ಪರಿಸ್ಥಿತಿ ಇದೆ. ಇದೊಂದು ಅತ್ಯಂತ ನೋವಿನ ಸಂಗತಿಯಾಗಿದ್ದು, ಇದು ಮುಂದಿನ ಗ್ರಾಮ ಸಭೆಯೊಳಗೆ ಸರಿಯಾಗದಿದ್ದರೆ ನಾನು ಮತ್ತು ಗ್ರಾಮಸ್ಥರು ಸೇರಿ ಇದಕ್ಕಾಗಿ ಧರಣಿ ಕೂತುಕೊಳ್ಳುತ್ತೇವೆ ಎಂದು ಹೇಳಿದರು.
2017ರಿಂದ ಬೆಳೆ ಸಮೀಕ್ಷೆ ಯೋಜನೆ ಪ್ರಾರಂಭಗೊಂಡಿದೆ. ಪ್ರತಿ ಬೆಳೆಯ ಬಗ್ಗೆ ಮಾಹಿತಿ ಎಂಟ್ರಿ ಮಾಡಬಹುದು. ದ.ಕ.ದಲ್ಲಿ ಬಹುವಾರ್ಷಿಕ ಬೆಳೆಯಿದ್ದು, ಆರ್.ಟಿ.ಸಿ. ಯಲ್ಲಿ ಪ್ರತಿ ವರ್ಷ ಬದಲಾವಣೆ ಆಗುತ್ತದೆ. ಮೊದಲು ನೇರವಾಗಿ ಬೆಂಗಳೂರಿನಿಂದಲೇ ಸಾಪ್ಟ್ ವೇರ್ ನಲ್ಲಿ ಮಾಹಿತಿ ದಾಖಲಾಗುತ್ತಿತ್ತು. ಈಗ ಆಗುತ್ತಿಲ್ಲ. ಆದರೆ ಜನರು ತಮ್ಮ ಮೊಬೈಲ್ ಮೂಲಕ ಜಿ.ಪಿ.ಎಸ್. ಆಧಾರದಲ್ಲಿ ಬೆಳೆ ಸಮೀಕ್ಷೆ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಗ್ರಾಮ ಲೆಕ್ಕಾಧಿಕಾರಿ ಮೀಯಾಸಾಬುಲ್ಲ ಹೇಳಿದರು.
ಕಂದಾಯ ಮತ್ತು ಕೃಷಿ ಇಲಾಖೆ ಸೇರಿಕೊಂಡು ಬೆಳೆ ಸಮೀಕ್ಷೆ ನಡೆಸುತ್ತಿದೆ. ಗ್ರಾಮಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಎ.ಸಿ., ಡಿ.ಸಿ. ಸೇರಿದಂತೆ ಕಂದಾಯ ಸಚಿವರ ಗಮನಕ್ಕೂ ಇಲಾಖೆಯ ವತಿಯಿಂದ ನೀವು ಮಾಹಿತಿ ನೀಡಬೇಕು ಎಂದು ಕೆ.ಆರ್. ಗಂಗಾಧರ ಅವರು ಹೇಳಿದರು.
ಗ್ರಾ.ಪಂ. ಸದಸ್ಯ ಶಿವಾನಂದ ಅವರು ಮಾತನಾಡಿ, ಈ ಸಮಸ್ಯೆ ಪ್ರತೀ ಸಲ ಇದೆ. ಇದಕ್ಕಾಗಿ ಗ್ರಾಮ ಪಂಚಾಯತಿ ಅಧ್ಯಕ್ಷರ ಮೂಲಕ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವ ಎಂದು ಹೇಳಿದರು.
ಅರಂತೋಡು ಗ್ರಾಮಕ್ಕೆ ಖಾಯಂ ವಿ.ಎ. ಬೇಕು ಎಂದು ಕೆ.ಆರ್. ಗಂಗಾಧರ ಅವರು ಹೇಳಿದಾಗ ನನಗೆ ಕಳಂಜ ಗ್ರಾಮ ಅರಂತೋಡು ಚಾರ್ಜ್ ಇದೆ ತಾಲೂಕಿನಲ್ಲಿ ಇರುವುದೇ ಒಟ್ಟು ಹದಿನೆಂಟು ವಿ.ಎ. ಗಳು ಎಲ್ಲರಿಗೂ ಒಂದಷ್ಟು ಗ್ರಾಮಗಳನ್ನು ಹಂಚಿಕೆ ಮಾಡಿ ಕೊಡಲಾಗಿದೆ ಎಂದು ಗ್ರಾಮ ಲೆಕ್ಕಾಧಿಕಾರಿ ಮೀಯಾಸಾಬುಲ್ಲ ಹೇಳಿದರು.
ಪೆನ್ಶನ್ ಪಡೆಯುವವರು ತಮ್ಮ ಆಧಾರ್ ಕಾರ್ಡ್ ನಲ್ಲಿ ಏನಾದರೂ ತಿದ್ದುಪಡಿ ಮಾಡಿದ್ದರೆ, ತಾವು ಪೆನ್ಶನ್ ಪಡೆಯುವ ಬ್ಯಾಂಕ್ ನೊಂದಿಗೆ ಆಧಾರ್ ಲಿಂಕ್ ಮಾಡಲೇ ಬೇಕು ಇಲ್ಲದಿದ್ದರೆ
ನಿಂದ ವಂಚಿತರಾಗಬೇಕಾಗುತ್ತದೆ ಎಂದು ಗ್ರಾಮಕರಣಿಕರು ಹೇಳಿದರು.
ಅರಣ್ಯ ಇಲಾಖೆಯ ವತಿಯಿಂದ ಬಿತ್ತೋತ್ಸವ ಹಾಗೂ ವನ ಮಹೋತ್ಸವ ಕಾರ್ಯಕ್ರಮವನ್ನು ನಡೆಸುತ್ತಿದ್ದು, ಮಕ್ಕಳಿಗೆ ಅರಣ್ಯದ ಬಗ್ಗೆ ಕಾಳಜಿ ಬರುವ ಉದ್ಧೇಶದಿಂದ ಶಾಲೆಗಳಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಸ್ಥಳೀಯ ಸಂಘ ಸಂಸ್ಥೆಗಳು ಅರಣ್ಯ ಇಲಾಖೆಯ ಜೊತೆ ಕೈಜೋಡಿಸಿಕೊಂಡು ರೈತರಿಗೆ ಬೇಕಾಗ ಗಿಡ ಖರೀದಿ ಮಾಡುವ ಯೋಜನೆ ಇದೆ.
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿಯಲ್ಲಿ ಅರಣ್ಯ ಜಾತಿಯ ಗಿಡವನ್ನು ನೆಟ್ಟು ಬೆಳೆಸುವ ಯೋಜನೆಯಿದ್ದು, ಮೂರು ವರ್ಷಗಳಲ್ಲಿ ಪ್ರೋತ್ಸಾಹಧನ ನೀಡಲಾಗುವುದು ಎಂದು ಅಧಿಕಾರಿ ಹೇಳಿದರು.
ತೊಡಿಕಾನ ಭಾಗದಲ್ಲಿ ಅಪಾಯಕಾರಿ ಮರಗಳ ತೆರವಿಗೆ ಅರಣ್ಯ ಇಲಾಖೆ ಗಮನಕ್ಕೆ ಬಂದಿದ್ದು,ತೆರವುಗೊಳಿಸಲಾಗುವುದು ಎಂದು ಹೇಳಿದರು.
ಅರಂತೋಡು ಪೇಟೆಯಲ್ಲಿ ಬೀದಿ ದನಗಳ ಹಾವಳಿ ಬಹಳಷ್ಟಿದೆ ಇದನ್ನು ನಿಯಂತ್ರಣ ಮಾಡಬೇಕಾಗಿದೆ ಎಂದು ಗ್ರಾಮಸ್ಥರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪಿಡಿಒ ಜಯಪ್ರಕಾಶ್ ಅವರು ಅರಂತೋಡಿನಲ್ಲಿ ಬೀದಿ ದನಗಳ ಹಾವಳಿ ಇದೆ. ಹೆಚ್ಚಾಗಿ ರಸ್ತೆ ಅಪಘಾತದಲ್ಲಿ ಬಲಿಯಾಗುತ್ತಿದೆ. ಇದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಗ್ರಾಮ ಪಂಚಾಯತಿ ಸದಸ್ಯ ಶಿವಾನಂದ ಕುಕ್ಕುಂಬಳ ಅವರು ಮಾತನಾಡಿ ಸ್ವಚ್ಛಭಾರತ್ ಯೋಜನೆಯಡಿಯಲ್ಲಿ ಗ್ರಾಮದಲ್ಲಿ ಸ್ವಚ್ಛತೆಯ ನಿರ್ವಹಣೆ ಆಗುತ್ತಿದ್ದು, ಸ್ವಚ್ಛತಾ ವೆಚ್ಚ ಇಪ್ಪತ್ತು ರೂ.ಗಳನ್ನು ಪ್ರತೀ ಮನೆಗೆ ತಿಂಗಳಿಗೆ ನಿಗದಿ ಮಾಡಲಾಗಿದ್ದು, ಹಣ ಸಂಗ್ರಹ ಸುಲಭದ ನಿಟ್ಟಿನಲ್ಲಿ ಒಂದು ವರ್ಷದ ಸ್ವಚ್ಚತಾ ವೆಚ್ಚವನ್ನು ಒಂದೇ ಬಾರಿ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಕು. ಶ್ವೇತಾ, ಸದಸ್ಯರುಗಳಾದ ಗಂಗಾಧರ ಗುಂಡ್ಲ ಬನ, ಶ್ರೀಮತಿ ಸರಸ್ವತಿ ಬಿ., ಶಿವಾನಂದ ಕೆ.ಎಲ್., ಶ್ರೀಮತಿ ಸುಜಯ ಎಂ., ಕೇಶವ ಅಡ್ತಲೆ, ಪುಷ್ಪಾಧರ ಕೆ.ಜಿ. ಶ್ರೀಮತಿ ಉಷಾ ಪಿ., ಶ್ರೀಮತಿ ವಿನೋದ ವಿ.ಸಿ., ಶಶಿಧರ ಕೆ.ಸಿ., ಶ್ರೀಮತಿ ಭವಾನಿ ಸಿ.ಎ., ಶ್ರೀಮತಿ ಮಾಲಿನಿ ಯು.ವಿ. ರವೀಂದ್ರ ಜಿ., ವೆಂಕಟ್ರಮಣ ಪಿ.ಹೆಚ್., ಸೇರಿದಂತೆ ತಾಲೂಕಿನ ಗ್ರಾಮ ಲೆಕ್ಕಾಧಿಕಾರಿ ಮೀಯಾಸಾಬುಲ್ಲ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ ವರ್ಗದವರು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಗ್ರಾಮ ಪಂಚಾಯತಿ ಸಿಬ್ಬಂದಿಗಳು ಸಹಕರಿಸಿದರು.
ಸಭೆಯಲ್ಲಿ ಗ್ರಾಮದ ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.