ಪೆರಾಜೆ ಸೊಸೈಟಿ ಚುನಾವಣೆ – ಬಿಜೆಪಿ ಜಯಭೇರಿ – ಮೊಳಗಿದ ಹರ್ಷೋದ್ಘಾರ

ಜು.3ರಂದು ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ

0

ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯು ಜೂ.24ರಂದು ನಡೆದಿದ್ದು, ಒಟ್ಟು 13 ಸ್ಥಾನಗಳ ಆಯ್ಕೆಗೆ 13 ಸ್ಥಾನಗಳಿಗೂ ಚುನಾವಣೆ ನಡೆದು, ಬಿಜೆಪಿ ಜಯಭೇರಿ ಭಾರಿಸಿದೆ. ಫಲಿತಾಂಶ ಹೊರ ಬೀಳುತ್ತಿದ್ದಂತೆ ಕಾರ್ಯಕರ್ತರಿಂದ ಹರ್ಷೋದ್ಧಾರ ಮೊಳಗಿದೆ.

ಮತದಾನ ಮುಗಿದ ಬಳಿಕ ಸಂಜೆ ಮತಕೇಂದ್ರದಲ್ಲಿ ಪೋಲೀಸ್ ಭದ್ರತೆಯ ನಡುವೆ ಮತ ಎಣಿಕೆ ಕಾರ್ಯ ಆರಂಭವಾಯಿತು. ಸಂಜೆ 7.30ರ ಸಮಯಕ್ಕೆ ಮತ ಎಣಿಕೆ ಕಾರ್ಯ ಬಹುತೇಕ‌ ಮುಕ್ತಾಯಗೊಂಡಿತು. ಫಲಿತಾಂಶ ಹೋರಬೀಳುತ್ತಿದ್ದಂತೆ ಮತೆಣಿಕೆ‌ಕೇಂದ್ರದ ಹೊರಗೆ ನಿಂತಿದ್ದ ಕಾರ್ಯಕರ್ತರು ಪಟಾಕಿ ಸಿಡಿಸಿ ಹರ್ಷೋದ್ಧಾರ ಮೊಳಗಿಸತೊಡಗಿದರು. 7.45 ಸುಮಾರಿಗೆ ವಿಜಯಿ ಅಭ್ಯರ್ಥಿಗಳು ಮತ ಎಣಿಕೆ‌ಕೇಂದ್ರದಿಂದ ಕೆಳಗೆ ಇಳಿದು ಬರುತ್ತಿದ್ದಂತೆ ಅಲ್ಲಿ ಸೇರಿದ್ದ ಕಾರ್ಯಕರ್ತರು ಹಾರರ್ಪಣೆ ಮಾಡಿ ಜಯಘೋಷದೊಂದಿಗೆ ಅಭಿನಂದಿಸಿದರು.
ಬಳಿಕ ಅಲ್ಲಿ ಸೇರಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ನಾಗೇಶ್ ಕುಂದಲ್ಪಾಡಿ, ಪಯಸ್ವಿನಿ ಕೃ.ಪ.ಸ.ಸಂಘದ ಅಧ್ಯಕ್ಷ ಎನ್.ಸಿ.ಅನಂತ, ಪೆರಾಜೆ ಗ್ರಾ.ಪಂ.ಮಾಜಿ ಅಧ್ಯಕ್ಷ ಎ‌.ಸಿ.ಹೊನ್ನಪ್ಪ ರವರು ಮಾತನಾಡಿ, ಎಲ್ಲಾ ಕಾರ್ಯಕರ್ತರ ಶ್ರಮದಿಂದಾಗಿ ನಾವು 13ರಲ್ಲಿ 13 ಸ್ಥಾನಗಳನ್ನು ಗೆದ್ದಿದ್ದೇವೆ. ಈ ಹಿಂದೆ ಸಹಕಾರ ಸಂಘದಲ್ಲಿ ಮಾಡಿದ ಅಭಿವೃದ್ಧಿಯನ್ನು ಸಂಘದ ಸದಸ್ಯರು ಗಮನಿಸಿ ಮತ ಚಲಾಯಿಸಿದ್ದಾರೆ. ಮುಂದೆಯೂ ಎಲ್ಲಾ ನಿರ್ದೇಶಕರು ಪ್ರಾಮಾಣಿಕವಾಗಿ ಕೆಲಸ ಮಾಡಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ವಿಜಯಿಯಾದ ಎಲ್ಲಾ ನಿರ್ದೇಶಕರುಗಳು, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು, ಸದಸ್ಯರುಗಳು, ಸೊಸೈಟಿಯ ಮಾಜಿ ನಿರ್ದೇಶಕರುಗಳು, ಬಿಜೆಪಿ ಕಾರ್ಯಕರ್ತರು ಮತ್ತಿತರರಿದ್ದರು. ಪೆರಾಜೆ ಸೊಸೈಟಿಯ ಸಿಬ್ಬಂದಿಗಳು‌ ಮತ್ತು ಚುನಾವಣಾ ಧಿಕಾರಿ ಡಿಸಿಸಿ ಬ್ಯಾಂಕ್ ನ ಸಂದೀಪ್ ರವರು ಚುನಾವಣಾ ಸಂದರ್ಭದಲ್ಲಿ ಸಹಕರಿಸಿದರು. ಸಂಪಾಜೆ ಪಯಸ್ವಿನಿ ಬ್ಯಾಂಕ್ ನ‌ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಮತ ಎಣಿಕೆಯಲ್ಲಿ ಸಹಕರಿಸಿದರು. ಜು.3ರಂದು ಅಧ್ಯಕ್ಷ ಉಪಾಧ್ಯಕ್ಷತೆಗೆ ದಿನ‌ ನಿಗದಿಯಾಗಿದ್ದು, ಆಯ್ಕೆ ನಡೆಯಲಿದೆ.