ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ 2023 –24ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸರಕಾರದ ಪದಗ್ರಹಣ ಸಮಾರಂಭವು ಜುಮ 4ರಂದು ನಡೆಯಿತು.
ವಿದ್ಯಾರ್ಥಿ ಸರಕಾರದ ರಾಜ್ಯಪಾಲರು ಶಾಲೆಯ ಮುಖ್ಯೋಪಾಧ್ಯಾಯರಾದ ಯಶೋಧರ ಎನ್ ಸಮಾರಂಭದಲ್ಲಿ ಭಾಗವಹಿಸಿ ಸಭಾಪತಿ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಂಪುಟ ದರ್ಜೆಯ ಸಚಿವರು ಮತ್ತು ಸಹಾಯಕ ಸಚಿವರುಗಳಿಗೆ ಶಾಲಾ ಸಂವಿಧಾನದಂತೆ ಪಂಚ ಭಾಷೆಗಳಾದ ಸಂಸ್ಕೃತ, ಕನ್ನಡ, ಇಂಗ್ಲಿಷ್, ಹಿಂದಿ ಮತ್ತು ತುಳು ಭಾಷೆಗಳಲ್ಲಿ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ರಾಜ್ಯಪಾಲರ ನೆಲೆಯಿಂದ ಮುಖ್ಯೋಪಾಧ್ಯಾಯರು ಮಾತನಾಡುತ್ತಾ ಶಾಲಾ ಸಂವಿಧಾನದ ರಕ್ಷಣೆ, ವಿದ್ಯಾರ್ಥಿ ಸರಕಾರದ ಕರ್ತವ್ಯ. ಶಾಲೆಯ ವ್ಯವಸ್ಥೆ ಮತ್ತು ಜವಾಬ್ದಾರಿಯುತ ವಿದ್ಯಾರ್ಥಿಯಾಗಿ ಪ್ರತಿಯೊಬ್ಬರು ಶಾಲೆಯ ನಿಯಮದಂತೆ ನಡೆದುಕೊಳ್ಳಬೇಕಾದ ಅಗತ್ಯತೆಯನ್ನು ವಿವರಿಸಿದರು. ವಿಪಕ್ಷ ನಾಯಕಿ, ಉಪನಾಯಕ ಮತ್ತು ವಿಪಕ್ಷ ಸದಸ್ಯರಿಗೆ ಸಭಾಪತಿಯಾದ ಪ್ರದೀಪ್ ಕೆ (10 ನೇ ತರಗತಿ)ಇವರು ಪಂಚಭಾಷೆಗಳಲ್ಲಿ ಪ್ರತಿಜ್ಞೆಯನ್ನು ಬೋಧಿಸಿದರು. ಮುಖ್ಯಮಂತ್ರಿಯಾದ ಚಿಂತನ್ ಎ (10 ನೇ ತರಗತಿ) ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯವನ್ನು ಮಂಡಿಸಿದರು. ವಿಪಕ್ಷ ನಾಯಕಿ ವೇದಿನಿ ಎಂ ಡಿ (10ನೇ ತರಗತಿ) ವಂದನಾ ನಿರ್ಣಯವನ್ನು ಅನುಮೋದಿಸಿದರು.
ಮುಖ್ಯಮಂತ್ರಿಯವರು ವಿವಿಧ ಖಾತೆಗಳನ್ನು ಸಂಪುಟ ದರ್ಜೆ ಸಚಿವರಿಗೆ ಹಂಚಿಕೆ ಮಾಡಿ ಸದನವನ್ನು ಉದ್ದೇಶಿಸಿ ಮಾತನಾಡಿದರು. ವಿಪಕ್ಷ ನಾಯಕಿ ಸರಕಾರದ ಕಾರ್ಯಕ್ರಮಗಳಿಗೆ ಪೂರ್ಣ ಪ್ರಮಾಣದ ಬೆಂಬಲವನ್ನು ತನ್ನ ಭಾಷಣದಲ್ಲಿ ಘೋಷಿಸಿದರು. ಸಭಾಪತಿಯವರು ಕಲಾಪವನ್ನು
ಅನಿರ್ದಿಷ್ಟಾವಧಿಗೆ ಮುಂದೂಡಿದರು. ಶಿಕ್ಷಕ ವೃಂದದವರು ಸಹಕರಿಸಿದರು.