ದೇಶದ ವಿವಿಧೆಡೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಳ್ಯದ ಪತ್ರಕರ್ತರ ಸಂಗಮ
ವೃತ್ತಿ ಬದುಕಿನ ಅನುಭವ ಹಂಚಿಕೆ; ಸುದ್ದಿ ಬಿಡುಗಡೆಯನ್ನು ಸ್ಮರಿಸಿದ ಪತ್ರಕರ್ತರು
ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿ ಹಬ್ಬದ ಪ್ರಯುಕ್ತ ಕೇರ್ಪಳದ ಬಂಟರ ಭವನದಲ್ಲಿ ನಡೆದ ಮಾಧ್ಯಮ ಸಮ್ಮಿಳನ ಕಾರ್ಯಕ್ರಮ ವಿಶೇಷ ಗಮನ ಸೆಳೆಯಿತು. ರಾಜ್ಯದ ಹಾಗೂ ರಾಷ್ಟ್ರದ ವಿವಿಧೆಡೆ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಸುಳ್ಯದ ಪತ್ರಕರ್ತರು ಭಾಗವಹಿಸಿ ವೃತ್ತಿ ಬದುಕಿನ ಅನುಭವಗಳನ್ನು ಬಿಚ್ಚಿಟ್ಟರು.
ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ ಪಿ.ಬಿ ಹರೀಶ್ ರೈ ಮಾತನಾಡಿ ಪತ್ರಿಕೋದ್ಯಮಕ್ಕೆ ಸುಳ್ಯ ತಾಲೂಕಿನ ಕೊಡುಗೆಯ ಬಗ್ಗೆ ವಿವರಿಸಿದರು.
ವಿಜಯ ಕರ್ನಾಟಕ ಪತ್ರಿಕೆಯ ಮುಖ್ಯ ಉಪಸಂಪಾದಕ ಆರ್.ಸಿ. ಭಟ್ ಮಾತನಾಡಿ ಬರವಣಿಗೆಯನ್ನು ಸಮಾಜಮುಖಿತ್ತ ಹೊರಳಿಸಿ ಲೇಖನಗಳು ಹೊರಬಂದರೆ ನಾಡಿನ ಅಭ್ಯುದಯ ಸಾಧ್ಯ ಎಂದರು.
ಹಿರಿಯ ಪತ್ರಕರ್ತ ಸುರೇಶ್ ಬೆಳಗಜೆ ಮಾತನಾಡಿ ಮಾಧ್ಯಮ ಕ್ಷೇತ್ರದ ಒತ್ತಡದ ವೃತ್ತಿಯನ್ನು ಖುಷಿಯಿಂದ ಒಪ್ಪಿಕೊಂಡು ಕರ್ತವ್ಯದಲ್ಲಿ ತೊಡಗಿಕೊಂಡರೆ ಯಶಸ್ಸು ನಿಶ್ಚಿತ ಎಂದರು.
‘ವಿಶ್ವವಾಣಿ’ ಮುಖ್ಯ ಉಪಸಂಪಾದಕಿ ಭವ್ಯ ಬೊಳ್ಳೂರು ಮಾತನಾಡಿ ಬರವಣಿಗೆಯತ್ತ ತನಗಿದ್ದ ತುಡಿತ ಪತ್ರಿಕೋದ್ಯಮಕ್ಕೆ ಕಾಲಿಡಲು ಸಾಧ್ಯವಾಯಿತು. ಸಾಹಿತ್ಯ ಕ್ಷೇತ್ರಕ್ಕೆ ಸಹಕಾರಿಯಾಗುವ ಸುಳ್ಯದ ಮಣ್ಣು ಕೂಡಾ ತನಗೆ ಸಹಕಾರಿಯಾಯಿತು ಎಂದರು.
ಕಾರ್ಕಳದ ‘ಕೃಷಿ ಬಿಂಬ’ ಪತ್ರಿಕೆಯ ಸಂಪಾದಕ ರಾಧಾಕೃಷ್ಣ ತೊಡಿಕಾನ, ತಾನು ಬೆಳೆದು ಬಂದ ದಾರಿಯನ್ನು ಉಲ್ಲೇಖಿಸುತ್ತಾ ವೃತ್ತಿಗಾಗಿ ಬೇರೆ ಊರನ್ನು ಆಯ್ದುಕೊಂಡರೂ ಜನ್ಮಭೂಮಿಯ ಸೆಳೆತದ ಬಗ್ಗೆ ವಿವರಿಸಿದರು.
ಪ್ರಜಾವಾಣಿ’ ಪತ್ರಿಕೆಯ ವಿಶೇಷ ಪ್ರತಿನಿಧಿ ಬಾಲಕೃಷ್ಣ ಎಂ.ಜಿ ಮಾತನಾಡಿ ಲೇಖನದ ಮೂಲಕ ಕೂತ್ಕುಂಜದಲ್ಲಿರುವ ಮುಚ್ಚುವ ಶಾಲೆಯನ್ನು ತೆರೆಸಿದ ತೃಪ್ತಿಯ ನೆನಪನ್ನು ಕೆದಕಿದರು.
‘ನ್ಯೂಸ್ 18’ ಸಹಾಯಕ ಸುದ್ದಿ ಸಂಪಾದಕ ಚಂದ್ರಶೇಖರ ಮಂಡೆಕೋಲು, ಮಾಧ್ಯಮ ಕ್ಷೇತ್ರಕ್ಕೆ ಕಾಲಿಡಲು ಇನ್ನೊಬ್ಬರ ಸಹಾಯ ಪಡೆಯದೆ ಸ್ವ ಆಸಕ್ತಿಯಿಂದ ತೊಡಗಿಕೊಳ್ಳಲು ಕಿವಿಮಾತು ಹೇಳಿದರು.
ಮುಂಬೈಯ ಸ್ಟಾರ್ ಸ್ಪೋರ್ಟ್ಸ್ ನ ವರದಿಗಾರ ಹರ್ಷಿತ್ ಪಡ್ರೆ ಮಾತನಾಡಿ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಬಾಕ್ಸ್ ನಲ್ಲಿ ಅಭಿಪ್ರಾಯ ವ್ಯಕ್ತಪಡಿಸುವ ಹವ್ಯಾಸವೇ ಮುಂದೆ ತುತ್ತಿನ ಚೀಲ ತುಂಬಿಸುವ ವೃತ್ತಿಯಾಗಿ ಪರಿವರ್ತನೆಯಾದ ಬಗೆಯನ್ನು ವಿವರಿಸಿದರು.
ವಿಜಯವಾಣಿ ಪತ್ರಿಕೆಯ ಮಂಗಳೂರು ವರದಿಗಾರ ಹರೀಶ್ ಮೋಟುಕಾನ, ಬರವಣಿಗೆಗೆ ಸೇತುವಾದ ಸುಳ್ಯದ ವಾತಾವರಣವನ್ನು ಉಲ್ಲೇಖಿಸಿದರಲ್ಲದೆ ಬರವಣಿಗೆಗೆ ತಕ್ಷಣ ಸ್ಪಂದನೆ ದೊರೆತರೆ ಅದಕ್ಕಿಂತ ಮಿಗಿಲಾದ ಸಂತಸ ಬೇರಿಲ್ಲ ಎಂದರು.
ಸುವರ್ಣ ನ್ಯೂಸ್ ಉಪಸಂಪಾದಕಿ ಗೌತಮಿ ಕೊಯಿಂಗುಳಿ, ಡಿಜಿಟಲ್ ಮೀಡಿಯಾದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅನುಭವವನ್ನು ವಿವರಿಸುತ್ತಾ ಹುಟ್ಟೂರಿನ ಬಗ್ಗೆ ಲೇಖನಗಳನ್ನು ಬರೆಯುವ ಬಗೆಗಿನ ಖುಷಿಯನ್ನು ತೆರೆದಿಟ್ಟರು.
ಉದಯವಾಣಿ ಪತ್ರಿಕೆಯ ಕಾರ್ಕಳ ವರದಿಗಾರ ಬಾಲಕೃಷ್ಣ ಭೀಮಗುಳಿ ಮಾತನಾಡಿ ಮಾಧ್ಯಮಕ್ಕೆ ಸುಳ್ಯ ಕ್ಷೇತ್ರದ ಕೊಡುಗೆಯ ಬಗ್ಗೆ ವಿವರಿಸಿ ಸುಳ್ಯ ತಾಲೂಕು ಪತ್ರಕರ್ತರನ್ನು ಸೃಷ್ಟಿಸುವ ಕಾರ್ಖಾನೆ ಎಂದು ಬಣ್ಣಿಸಿದರು.
ವಿಜಯ ಕರ್ನಾಟಕ’ ಪತ್ರಿಕೆಯ ಹಿರಿಯ ಉಪಸಂಪಾದಕ ಕೃಷ್ಣ ಕೋಲ್ಚಾರು, ಹೊಸದಿಗಂತ ಪತ್ರಿಕೆಯ ವರದಿಗಾರ ಹರೀಶ್ ಕುಲ್ಕುಂದ, ಉಪ ಸಂಪಾದಕರಾದ ಶರಣ್ಯ ಕೋಲ್ಚಾರು, ಚರಿಷ್ಮಾ ದೇರುಮಜಲು, ದಿಗ್ವಿಜಯ ನ್ಯೂಸ್‌ನ ದೀಪ್ತಿ ಮುಚ್ಚಾರ, ಚೈತ್ರಾ ಪುರ, ಸುವರ್ಣ ವೆಬ್‌ಸೈಟ್ ಉಪಸಂಪಾದಕಿ ಅನುಶಾ ಕೆ.ಬಿ, ವಾರ್ತಾಭಾರತಿ ಹಿರಿಯ ಉಪಸಂಪಾದಕಾದ ಸಂಶುದ್ದೀನ್ ಎಣ್ಮೂರು, ಅಬ್ದುಲ್ ರವೂಫ್, ವಿ೪ ನ್ಯೂಸ್ ನ ನಿರೂಪಕಿ ಕಾವ್ಯಾ ಕೊರಂಬಡ್ಕ ಮೊದಲಾದ ಪತ್ರಕರ್ತರು ಕಾರ್ಯಕ್ರಮದಲ್ಲಿ ಭಾಗವಹಸಿ ಮಾಧ್ಯಮ ಕ್ಷೇತ್ರದ ಅನುಭವವನ್ನು ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಯಾನಂದ ಕೊರತ್ತೋಡಿ ವಹಿಸಿದ್ದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷ ಗಂಗಾಧರ ಮಟ್ಟಿ, ಪತ್ರಕರ್ತರ ಸಂಘದ ಕೋಶಾಧಿಕಾರಿ ದಯಾನಂದ ಕಲ್ನಾರ್ ಸ್ವಾಗತಿಸಿದರು. ದುರ್ಗಾಕುಮಾರ್ ನಾಯರ್ ಕೆರೆ ಪ್ರಸ್ತಾವನೆಗೈದರು. ಕಾರ್ಯದರ್ಶಿ ಶಿವಪ್ರಸಾದ್ ಕೇರ್ಪಳ ವಂದಿಸಿದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ ಕಾರ್ಯಕ್ರಮ ನಿರೂಪಿಸಿದರು.
ಮಾಧ್ಯಮ ಸಮ್ಮಿಲನದಲ್ಲಿ ಪಾಲ್ಗೊಂಡ ಬಹುತೇಕ ಪತ್ರಕರ್ತರು ತಾವು ಆರಂಭದ ದಿನಗಳಲ್ಲಿ ಸುದ್ದಿ ಬಿಡುಗಡೆಯಲ್ಲಿ ವೃತ್ತಿ ಜೀವನ ಆರಂಭಿಸಿದ ನೆನಪುಗಳನ್ನು, ಬರವಣಿಗೆಗೆ ಸುದ್ದಿ ನೀಡಿದ ಪ್ರೋತ್ಸಾಹವನ್ನು ನೆನಪಿಸಿಕೊಂಡರು.