ಬಿಜೆಪಿ ಶಕ್ತಿಕೇಂದ್ರದ ಸಭೆಯಲ್ಲಿ ಮೂಡದ ಒಮ್ಮತ – ವರಿಷ್ಠರಿಗೆ ಅಧ್ಯಕ್ಷರ ಆಯ್ಕೆ ಜವಾಬ್ದಾರಿ
ಮಡಿಕೇರಿ ತಾಲೂಕಿನ ಕೊಡಗು ಸಂಪಾಜೆ ಗ್ರಾಮ ಪಂಚಾಯತಿಯ ಮುಂದಿನ ಎರಡೂವರೆ ವರ್ಷದ ಅವಧಿಗೆ ಅಧ್ಯಕ್ಷತೆ – ಉಪಾಧ್ಯಕ್ಷತೆ ಮೀಸಲಾತಿ ಪ್ರಕಟಗೊಂಡಿದ್ದು, ಬಿಜೆಪಿ ಶಕ್ತಿಕೇಂದ್ರದ ವತಿಯಿಂದ ನಡೆದ ಸಭೆಯಲ್ಲಿ ಒಮ್ಮತದ ಅಭ್ಯರ್ಥಿಯ ಆಯ್ಕೆ ನಡೆಯದೇ ಇದ್ದುದರಿಂದ ನೂತನ ಅಧ್ಯಕ್ಷರ ಆಯ್ಕೆಯನ್ನು ಮಾಡುವಂತೆ ಪಕ್ಷದ ವರಿಷ್ಠರಿಗೆ ಜವಾಬ್ದಾರಿ ವಹಿಸಲಾಗಿದೆ.
ಕೊಡಗು ಸಂಪಾಜೆ ಗ್ರಾಮ ಪಂಚಾಯತಿಯಲ್ಲಿ ಒಟ್ಟು 8 ಸದಸ್ಯ ಸ್ಥಾನಗಳಿದ್ದು, ಬಿಜೆಪಿ 7 ಹಾಗೂ ಕಾಂಗ್ರೆಸ್ ಒಂದು ಸದಸ್ಯರು ಆಯ್ಕೆಯಾಗಿದ್ದಾರೆ.
ಪ್ರಸ್ತುತ ಅಧ್ಯಕ್ಷ ಸ್ಥಾನವು ಸಾಮಾನ್ಯ ಸ್ಥಾನಕ್ಕೆ ಮೀಸಲಾತಿ ನಿಗದಿಯಾಗಿದ್ದು, ಎಲ್ಲಾ ಸದಸ್ಯರಿಗೂ ಅಧ್ಯಕ್ಷರಾಗುವ ಅವಕಾಶವಿದೆ.
ಈ ಹಿನ್ನೆಲೆಯಲ್ಲಿ ಬಿಜೆಪಿ ಶಕ್ತಿಕೇಂದ್ರದ ಸಭೆಯು ಇತ್ತೀಚೆಗೆ ನಡೆದಾಗ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾಗಿರುವ ಕುಮಾರ ಚಿದ್ಕಾರ್ ಹಾಗೂ ಮಾಜಿ ಗ್ರಾ.ಪಂ. ಅಧ್ಯಕ್ಷ ದಿ. ಬಾಲಚಂದ್ರ ಕಳಗಿ ಅವರ ಪತ್ನಿ ಗ್ರಾ.ಪಂ. ಹಾಲಿ ಸದಸ್ಯೆ ಶ್ರೀಮತಿ ರಮಾದೇವಿ ಕಳಗಿ ಅವರಿಬ್ಬರು ಹೆಸರು ಅಧ್ಯಕ್ಷತೆಗೆ ಪ್ರಸ್ತಾಪಗೊಂಡಿತೆನ್ನಲಾಗಿದೆ.
ಶ್ರೀಮತಿ ರಮಾದೇವಿ ಕಳಗಿ ಅವರು ಅಧ್ಯಕ್ಷರಾಗಬೇಕೆಂದು ಐದು ಮಂದಿ ಗ್ರಾ.ಪಂ. ಸದಸ್ಯರು ತಮ್ಮ ಅಭಿಪ್ರಾಯದ ವ್ಯಕ್ತಪಡಿಸಿದರೆಂದೂ , ಅನುಭವದ ಆಧಾರದಲ್ಲಿ ಮಾಜಿ ಅಧ್ಯಕ್ಷ ಕುಮಾರ ಚಿದ್ಕಾರ್ ಅವರು ಅಧ್ಯಕ್ಷರಾಗಬೇಕೆಂದು ಎರಡು ಮಂದಿ ಗ್ರಾ.ಪಂ. ಸದಸ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದೆನ್ನಲಾಗಿದೆ.
ಈ ಸಂದರ್ಭದಲ್ಲಿ ಅಧ್ಯಕ್ಷರ ಆಯ್ಕೆಯಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರಿಗೆ ಅಧ್ಯಕ್ಷರ ಆಯ್ಕೆ ಮಾಡುವಂತೆ ಜವಾಬ್ದಾರಿ ವಹಿಸಲಾಯಿತೆಂದು ತಿಳಿದುಬಂದಿದೆ.
ಸಭೆಯಲ್ಲಿ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಹಾಗೂ ಗ್ರಾ.ಪಂ. ಸದಸ್ಯ ಸುಂದರ ಚಿಟ್ಟಿಕಾನ, ಬಿಜೆಪಿ ತಾಲೂಕು ಸಮಿತಿ ಸದಸ್ಯ ಒ.ಆರ್. ಮಾಯಿಲಪ್ಪ, ಜಿಲ್ಲಾ ಸಮಿತಿ ಸದಸ್ಯ ರಾಜಾರಾಮ ಕಳಗಿ, ಬಿಜೆಪಿ ನಾಯಕರುಗಳಾದ ರಮಾನಂದ ಬಾಳೆಕಜೆ, ಜಗದೀಶ್ ಕೆದಂಬಾಡಿ, ಯಶವಂತ ಡಿ.ಡಿ. ಹೊನ್ನಪ್ಪ ಕಾಸ್ಪಾಡಿ, ರಾಮಕೃಷ್ಣ ಕೆ.ಬಿ. ಮತ್ತಿತರರು ಸೇರಿದಂತೆ ಬಿಜೆಪಿ ಗ್ರಾ.ಪಂ. ಸದಸ್ಯರುಗಳು ಉಪಸ್ಥಿತರಿದ್ದರು.