ಸುಳ್ಯದ ಯುವಜನ ಸಂಯುಕ್ತ ಮಂಡಳಿ ಇದರ ನಿರ್ದೇಶಕರು ಹಾಗೂ ಪೂರ್ವಾಧ್ಯಕ್ಷರುಗಳು ಕುಟುಂಬ ಸಮ್ಮಿಲನ ಕಾರ್ಯಕ್ರಮದ ಮಂಡಳಿಯ ಯುವ ಸದನದಲ್ಲಿ ಜು.22 ರಂದು ನಡೆಯಿತು.
ಮಂಡಳಿಯ ಪೂರ್ವಾಧ್ಯಕ್ಷರಾದ ಹಾಗೂ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು.ಭಾಗೀರಥಿ ಮುರುಳ್ಯರವರು ಕಾರ್ಯಕ್ರಮವನ್ನು ಉದ್ಘಾಟಿಸಿ “ಕುಟುಂಬ ಜೀವನದ ಮಹತ್ವವನ್ನು ತಿಳಿಸಿ ಕೊಡಲು ಇಂಥ ಕಾರ್ಯಕ್ರಮಗಳು ಪೂರಕವಾಗಿವೆ.ಯುವಜನ ಸಂಯುಕ್ತ ಮಂಡಳಿಯವರೆಲ್ಲರು ಒಂದೇ ಮನೆಯವರಂತೆ ಇಂದು ಜೊತೆ ಸೇರಿರುವುದು ಸಂತಸ ತಂದಿದೆ” ಎಂದರು.
ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ತೇಜಸ್ವಿ ಕಡಪಳ,ಯುವ ಸೇವಾ ಸಂಸ್ಥೆಯ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ಮಂಡಳಿಯ ಗೌರವಾಧ್ಯಕ್ಷ ದಯಾನಂದ ಕೇರ್ಪಳ, ಕಾರ್ಯದರ್ಶಿ ಸಂಜಯ್ ನೆಟ್ಟಾರು ಉಪಸ್ಥಿತರಿದ್ದರು.
ದೀಪಕ್ ಕುತ್ತಮೊಟ್ಟೆ ಪ್ರಾಸ್ತಾವಿಕ ಮಾತುಗಳೊಂದಿಗೆ, ಸ್ವಾಗತಿಸಿದರು.
ತೇಜಸ್ವಿ ಕಡಪಳ ಧನ್ಯವಾದಗೈದರು.
ಕಾರ್ಯಕ್ರಮದ ಉಸ್ತುವಾರಿ ಹಾಗೂ ಮಂಡಳಿಯ ಕೋಶಾಧಿಕಾರಿ ಮುರಳಿ ನಳಿಯಾರು ಕಾರ್ಯಕ್ರಮ ನಿರೂಪಿಸಿದರು.
ಗಾಯಕ ಕೃಷ್ಣರಾಜ ಕೇರ್ಪಳ ಹಾಡು ಹಾಗೂ ವಿವಿಧ ಮೋಜಿನ ಆಟಗಳೊಂದಿಗೆ ಕುಟುಂಬ ಸಮ್ಮಿಲನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಕುಟುಂಬ ಜೀವನದ ಮಹತ್ವದ ಬಗ್ಗೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಕೆ.ಆರ್.ಗಂಗಾಧರ್ ರವರು ದಿಕ್ಸೂಚಿ ಮಾತುಗಳನ್ನಾಡಿದರು.
“ಕುಟುಂಬ ಜೀವನ ಅತಿ ಮಹತ್ವದ್ದು.ಸಂಬಂಧಗಳ ಅರಿವು ನಮಗಿರಬೇಕು.ಶುಭ ಸಮಾರಂಭಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ನಮ್ಮ ಪ್ರೀತಿ ಪಾತ್ರರೊಡನೆ ಬೆರೆಯಬೇಕು.ನಮಗೆ ನೈತಿಕ ಸ್ಥೈರ್ಯ ತುಂಬುವಲ್ಲಿ ಕುಟುಂಬದ ಪಾತ್ರ ದೊಡ್ಡದು. ಸಂಬಂಧಗಳು ಶಿಥಿಲಗೊಂಡರೆ ಬದುಕು ಕೂಡ ಜಟಿಲಗೊಳ್ಳುತ್ತದೆ.ಕುಟುಂಬ ಜೀವನದಿಂದ ದೂರವಾಗುತ್ತಿರುವ ಯುವ ಮನಸ್ಸುಗಳಿಗೆ ಕುಟುಂಬ ಸಮ್ಮಿಲನದಂಥ ಕಾರ್ಯಕ್ರಮಗಳು ದಿಕ್ಸೂಚಿಯಾಗಲಿ” ಎಂದು ಅವರು ಹೇಳಿದರು.
ಮಂಡಳಿಯ ನಿರ್ದೇಶಕರು ಹಾಗೂ ಪೂರ್ವಾಧ್ಯಕ್ಷರುಗಳು ತಮ್ಮ ಕುಟುಂಬದ ಸದಸ್ಯರೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಆಗಮಿಸಿದ ಕುಟುಂಬಗಳ ಪೈಕಿ ಒಂದು ಕುಟುಂಬಕ್ಕೆ ಅದೃಷ್ಟದ ಕುಟುಂಬ ಬಹುಮಾನ ನೀಡಿ ಗೌರವಿಸಲಾಯಿತು.ಮಂಡಳಿಯ ಪೂರ್ವಾಧ್ಯಕ್ಷರಾದ ದಿನೇಶ್ ಮಡಪ್ಪಾಡಿಯವರ ಕುಟುಂಬ ಈ ಗೌರವಕ್ಕೆ ಪಾತ್ರವಾಯಿತು.
ಆಗಮಿಸಿದ ಎಲ್ಲರಿಗೂ ಸಂಜೆಯ ಉಪಾಹಾರ ಹಾಗೂ ರಾತ್ರಿಯ ಭೋಜನದ ವ್ಯವಸ್ಥೆ ಮಾಡಲಾಗಿತ್ತು.