ಬಸ್ ನಿಲ್ದಾಣದಿಂದ ಬೈಕ್ ಕದ್ದು ಪರಾರಿಯಾಗುತ್ತಿದ್ದ ಕಳ್ಳ ಕಲ್ಲುಗುಂಡಿಯಲ್ಲಿ ಸೆರೆ

0


ಬೈಕ್ ಕಳಕೊಂಡವರೆದುರೇ ಸಾಗಿ ಸಿಕ್ಕಿ ಬಿದ್ದ ಭೂಪ


ಸುಳ್ಯ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬೈಕನ್ನು ಕಳ್ಳನೊಬ್ಬ ನಕಲಿ ಕೀಯ ಮೂಲಕ ಕದ್ದು ದಿನವಿಡೀ ತಿರುಗಿ ಮರುದಿನ, ಬೈಕ್ ಕಳಕೊಂಡವರೆದುರೇ ಸಾಗುತ್ತಿರುವಾಗ ಸಿಕ್ಕಿ ಬಿದ್ದು ಪೊಲೀಸರ ಅತಿಥಿಯಾದ ಘಟನೆ ವರದಿಯಾಗಿದೆ.


ಉಬರಡ್ಕದ ಕಾರ್ತಿಕ್ ಸುಳ್ಯಕೋಡಿ ಎಂಬವರು ಪುತ್ತೂರಿನಲ್ಲಿ ಕ್ಯಾಂಪ್ಕೋ ಉದ್ಯೋಗಿಯಾಗಿದ್ದು, ಅವರು ಜು. ೨೫ರಂದು ಸಂಜೆ ತನ್ನ ಡಿಸ್ಕವರಿ ಬೈಕ್‌ನ್ನು ಸುಳ್ಯ ಸರಕಾರಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿ ನೈಟ್‌ಡ್ಯೂಟಿಗೆ ಪುತ್ತೂರಿಗೆ ಹೋಗಿದ್ದರು. ಮರುದಿನ ಬೆಳಿಗ್ಗೆ ಅವರು ಪುತ್ತೂರಿನಿಂದ ಬಸ್‌ನಲ್ಲಿ ಹಿಂತಿರುಗಿ ಉಬರಡ್ಕಕ್ಕೆ ಹೋಗಲೆಂದು ಬೈಕ್ ಹತ್ತಿರ ಬಂದಾಗ ಬೈಕ್ ಇರಲಿಲ್ಲ. ಪೊಲೀಸರಿಗೆ ವಿಷಯ ತಿಳಿಸಿ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಕೆಂಪು ಜಾಕೆಟ್ ಮತ್ತು ಖಾಕಿ ಪ್ಯಾಂಟ್ ಧರಿಸಿದ ವ್ಯಕ್ತಿಯೊಬ್ಬ ಅಂದು ಮುಂಜಾನೆ ನಕಲಿ ಕೀ ಬಳಸಿ ಬೈಕ್ ಸ್ಟಾರ್ಟ್ ಮಾಡಿ ಕೊಂಡೊಯ್ಯುತ್ತಿರುವುದು ಕಂಡು ಬಂತು. ಮರುದಿನ ಜು. ೨೭ರಂದು ಬೆಳಿಗ್ಗೆ ಸುಮಾರು ೯.೩೦ರ ವೇಳೆಗೆ ಕಾರ್ತಿಕ್‌ರವರು ತನ್ನ ಚಿಕ್ಕಪ್ಪ ಮತ್ತು ಚಿಕ್ಕಮ್ಮರವರ ಜೊತೆ ಕಾರಲ್ಲಿ ಸುಳ್ಯದ ಕಡೆ ಬಂದರು. ಬೈಕ್ ಕಳವಾದ ಬಗ್ಗೆ ಕಲ್ಕುಡ ದೈವಸ್ಥಾನದಲ್ಲಿ ಹರಕೆ ಹೇಳಿಕೊಳ್ಳಬೇಕೆಂದು ತೆಂಗಿನಕಾಯಿಯೊಂದನ್ನು ಕೂಡಾ ಅವರು ತಂದಿದ್ದರು. ಅವರ ಕಾರು ಸುಳ್ಯ ಪರಿವಾರಕಾನದಲ್ಲಿ ಉಬರಡ್ಕ ರಸ್ತೆಯಿಂದ ಮುಖ್ಯರಸ್ತೆ ತಲುಪುವ ವೇಳೆಗೆ ಕೆಂಪು ಜಾಕೆಟ್ ಖಾಕಿ ಪ್ಯಾಂಟ್ ಧರಿಸಿದ ವ್ಯಕ್ತಿ ಡಿಸ್ಕವರಿ ಬೈಕಲ್ಲಿ ಸುಳ್ಯ ಕಡೆಯಿಂದ ಸಂಪಾಜೆ ಕಡೆಗೆ ಹೋಗುವುದು ಕಂಡಿತು. ಅದು ತನ್ನ ಬೈಕೆಂದು ಕಾರ್ತಿಕ್ ತಕ್ಷಣ ಗುರುತು ಹಿಡಿದರು. ಸಂಪಾಜೆ ಕಡೆಗೆ ಅದು ಹೋದುದರಿಂದ ಅದನ್ನು ಹೇಗಾದರೂ ನಿಲ್ಲಿಸಬೇಕೆಂದು ಚೆನ್ನಕೇಶವ ದೇವಸ್ಥಾನದಲ್ಲಿರುವ ತನ್ನ ಸಹೋದರ ದೀಪಕ್‌ರವರಿಗೆ ಫೋನ್ ಮಾಡಿದರು. ದೀಪಕ್ ಕೂಡಲೇ ನಿಕೇಶ್ ಉಬರಡ್ಕರಿಗೆ ವಿಷಯ ತಿಳಿಸಿದರು. ನಿಕೇಶ್‌ರವರು ಅರಂತೋಡಿನಲ್ಲಿದ್ದ ತನ್ನ ಹುಡುಗರಿಗೆ ತಿಳಿಸಿದಾಗ ಆ ಹುಡುಗರು ರಸ್ತೆಯಲ್ಲಿ ನಿಂತು ಈ ಬೈಕನ್ನು ಅಡ್ಡಗಟ್ಟಿದರು. ಆದರೆ ಅತೀವೇಗದಿಂದ ಬಂದ ಬೈಕ್ ಸವಾರ ರಸ್ತೆಗೆ ಬಂದು ನಿಲ್ಲಿಸಿದ ಯುವಕರನ್ನು ದಾಟಿ ಮುಂದಕ್ಕೆ ದೌಡಾಯಿಸಿದ ತಕ್ಷಣ ಆ ಯುವಕರು ಕಲ್ಲುಗುಂಡಿ ಪೊಲೀಸ್ ಹೊರ ಠಾಣೆಗೆ ವಿಷಯ ತಿಳಿಸಿ ಬೈಕಲ್ಲಿ ಬೆಂಬತ್ತಿದರು. ಕಾರ್ತಿಕ ಕೂಡಾ ಸುಳ್ಯದಿಂದ ಬೈಕನ್ನು ಬೆಂಬತ್ತಿ ಆ ಕಡೆಗೆ ಬಂದಿದ್ದರು.


ಕಲ್ಲುಗುಂಡಿಯಲ್ಲಿ ಸೆರೆ


ಕದಿಯಲ್ಪಟ್ಟ ಬೈಕ್‌ನೊಂದಿಗೆ ಕಳ್ಳ ಬರುತ್ತಿರುವ ವಿಷಯ ತಿಳಿದ ಕಲ್ಲುಗುಂಡಿ ಹೊರಠಾಣೆಯ ಪೊಲೀಸರು ಮತ್ತು ಗೃಹರಕ್ಷಕ ಸಿಬ್ಬಂದಿ ತಕ್ಷಣ ಬ್ಯಾರಿಕೇಡ್‌ಗಳನ್ನು ರಸ್ತೆಗೆ ಅಡ್ಡವಿರಿಸಿ ನಿಂತು ಆ ಬೈಕ್ ಕಳ್ಳನನ್ನು ಹಿಡಿದರು. ಆ ವೇಳೆಗೆ ಅರಂತೋಡಿನ ಯುವಕರು ಮತ್ತು ಕಾರ್ತಿಕ್ ಸುಳ್ಯಕೋಡಿ ಮತ್ತಿತರರು ಕಲ್ಲುಗುಂಡಿ ತಲುಪಿದರು. ಬೈಕ್ ಕಳ್ಳನನ್ನು ಹಿಡಿದು ವಿಚಾರಿಸಿದಾಗ ಆತ ಮೈಸೂರಿನಲ್ಲಿ ಮೆಡಿಕಲ್ ವಿದ್ಯಾರ್ಥಿ ಎಂದೂ, ಜು. ೨೬ರಂದು ಮುಂಜಾನೆ ಬೈಕ್ ಕದ್ದು ಕಾಸರಗೋಡು ಕಡೆಯಲ್ಲಿ ಇದ್ದ ತನ್ನ ಅಜ್ಜಿಯ ಮನೆಗೆ ಹೋಗಿ ಅಲ್ಲಿ ತಂಗಿ ಮೈಸೂರಿಗೆ ಹೋಗಲೆಂದು ಹಿಂತಿರುವಗಿ ಬರುತ್ತಿದ್ದನೆನ್ನಲಾಗಿದೆ. ಬೈಕ್ ಕದ್ದ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆಯೇ ಎಂದು ಪೊಲೀಸ್ ಮಾಹಿತಿ ಜಾಲಗಳನ್ನು ಪರಿಶೀಲಿಸಿ ಕೇಸು ದಾಖಲಾಗದ ಬಗ್ಗೆ ಖಚಿತಪಡಿಸಿಕೊಂಡು ಬಳಿಕ ಆತ ಸುಳ್ಯದ ಮೂಲಕ ಮೈಸೂರು ಕಡೆಗೆ ಪ್ರಯಾಣ ಬೆಳೆಸಿದ್ದನೆಂದೂ ಹೇಳಿದನೆನ್ನಲಾಗಿದೆ. ಬಳಿಕ ಪೊಲೀಸರು ನಿರಂಜನ ಎಂಬ ಹೆಸರಿನ ಆ ಯುವಕನನ್ನು ಸುಳ್ಯ ಪೊಲೀಸ್ ಠಾಣೆಗೆ ಕರೆತಂದರು. ಈಗ ವಿಚಾರಣೆ ನಡೆಯುತ್ತಿರುವುದಾಗಿ ತಿಳಿದು ಬಂದಿದೆ.