ಈ ಬಗ್ಗೆ ಸ್ಥಳೀಯ ಜನತೆಗೆ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ ನಗರ ಪಂಚಾಯತ್ ಕಾರ್ಯಾಲಯ
ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಕಲ್ಲುಮುಟ್ಲು ಸವೆಂ – 253 ಮತ್ತು 179 ರಲ್ಲಿ ಸುಳ್ಯ ನೀರು ಸರಬರಾಜು ಕೇಂದ್ರದ ಪರಿಸರದಲ್ಲಿ ಯಾವುದೇ ಮನೆಗಳ ಅಭಿವೃದ್ಧಿ ಕಾರ್ಯ ಮತ್ತು ಮರಗಳ ತೆರವು ಕಾರ್ಯ ಮಾಡದಂತೆ ಸುಳ್ಯ ನಗರ ಪಂಚಾಯತ್ ವತಿಯಿಂದ ಜುಲೈ 28 ರಂದು ಪ್ರಕಟಣೆಯ ಮೂಲಕ ಮಾಹಿತಿ ನೀಡಲಾಗಿದೆ.
ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಿಂದ ಆದೇಶ ಬಂದಿದ್ದು ‘ಕಲ್ಲುಮುಟ್ಲು ನೀರಿನ ಸ್ಥಾವರವಿರುವ ಕೇಂದ್ರದಿಂದ ನೀರನ್ನು ಸಂಪೂರ್ಣ ನಗರಕ್ಕೆ ಸರಬರಾಜು ಮಾಡಲಾಗುತ್ತಿದ್ದು ಸದ್ರಿ ಸ್ಥಳವು ಎತ್ತರದ ಪ್ರದೇಶದಲ್ಲಿದ್ದು,ಸುತ್ತಮುತ್ತ ಹಾಗೂ ಕೆಳಭಾಗದಲ್ಲಿನ ಭೂ ಮಾಲೀಕರು ತಮ್ಮ ಸ್ಥಳಗಳಲ್ಲಿ
ಕಟ್ಟಡಗಳನ್ನು ನಿರ್ಮಿಸುವ ಸಲುವಾಗಿ ಹಾಗೂ ವಿವಿಧ ಕಡೆಗಳಲ್ಲಿ ಅಭಿವೃದ್ಧಿ ಕಾರ್ಯಗಳಿಂದಾಗಿ ಸದ್ರಿ ಗುಡ್ಡ ಪ್ರದೇಶದ
ಭಾಗವನ್ನು ಸುತ್ತಲೂ ಕತ್ತರಿಸಿ ತೆಗೆಯುತ್ತಿರುವುದರಿಂದ ಹಾಗೂ ಅಲ್ಲಿನ ಮರಗಳನ್ನು ಕಡಿಯುತ್ತಿರುವುದರಿಂದ, ಮಳೆಗಾಲದಲ್ಲಿ ಎತ್ತರದಿಂದ ಕಡಿತ ಮಾಡಿದ ಪ್ರದೇಶದಲ್ಲಿ ಮಣ್ಣು ಜರಿದು ಬಂದು ಅಪಾಯದ ಮುನ್ಸೂಚನೆಯನ್ನು
ನೀಡುತ್ತಿದ್ದು,ಜುಲೈ ತಿಂಗಳಲ್ಲಿ ಬಂದಂತಹ ಮಳೆಯಿಂದಾಗಿ ಸದ್ರಿ ಸ್ಥಳವು ಸಂಪೂರ್ಣವಾಗಿ ಅಪಾಯಕ್ಕೆ ತುತ್ತಾಗಿದ್ದು ನೀರಿನ ಸ್ಥಾವರಗಳು ಕುಸಿಯುವ ಆತಂಕವನ್ನು ಉಂಟು ಮಾಡಿರುತ್ತದೆ.
ಈ ಬಗ್ಗೆ ಸಹಾಯಕ ಆಯುಕ್ತರು, ಪುತ್ತೂರು ಉಪವಿಭಾಗ ಇವರ ನಿರ್ದೇಶನದಂತೆ ಉಪ ನಿರ್ದೇಶಕರು,ಗಣಿ
ಮತ್ತು ಭೂ ವಿಜ್ಞಾನ ಇಲಾಖೆ, ಮಂಗಳೂರು,ಜಿಲ್ಲಾ ನಗರಾಭಿವೃದ್ಧಿ ಕೋಶ, ಮಂಗಳೂರು ಇದರ ಅಭಿಯಂತರರು,
ಹಾಗೂ ಪಂಚಾಯತ್ ಮುಖ್ಯಾಧಿಕಾರಿಗಳು ಮತ್ತು ಕೆ.ವಿ.ಜಿ ತಾಂತ್ರಿಕ ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥರು
ಜಂಟಿಯಾಗಿ ದಿನಾಂಕ 07-07-2011 ರಂದು ಸ್ಥಳ ತನಿಖೆ ನಡೆಸಿ ವರದಿ ನೀಡಿರುತ್ತಾರೆ.
ಆದ್ದರಿಂದ ಈ ಮೇಲಿನ ಅಂಶಗಳ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ವಿಪತ್ತುಗಳನ್ನು ನಿಯಂತ್ರಿಸುವ ಸಲುವಾಗಿ ನೀರು ಸರಬರಾಜು ಸ್ಥಾವರಗಳು ಇರುವ ಸ್ಥಳದ ಗುಡ್ಡದ ತಳಬಾಗದವರೆಗೆ ಅಥವಾ ಕನಿಷ್ಠ ಸದ್ರಿ ಸ್ಥಾವರಗಳನ್ನು ಕೇಂದ್ರವಾಗಿಟ್ಟುಕೊಂಡು ಸುತ್ತಲಿನ 150 ಮೀಟರ್ ಪ್ರದೇಶದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮುಂದಿನ ಆದೇಶದ ವರೆಗೆ ಮಾಡದಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ.