ಆ.14ರೊಳಗೆ ನೀಡದಿದ್ದರೆ ಪ್ರತಿಭಟನೆ ನಡೆಸಲು ಸಮಾಲೋಚನಾ ಸಭೆಯಲ್ಲಿ ನಿರ್ಧಾರ
ಶತಮಾನದ ಇತಿಹಾಸವಿರುವ ಮತ್ತು 90ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿಧ್ಯಾಭ್ಯಾಸ ಮಾಡುವ ಕೊಯಿಕುಳಿ ಹಿ.ಪ್ರಾ ಶಾಲೆಯಲ್ಲಿದ್ದ ಇಬ್ಬರು ಖಾಯಂ ಶಿಕ್ಷಕರನ್ನು ವರ್ಗಾವಣೆ ಮಾಡಿ ಶೂನ್ಯ ಶಿಕ್ಷಕರ ಶಾಲೆಯಾಗಿರುವುದರಿಂದ ಶಾಲೆಗೆ ಖಾಯಂ ಶಿಕ್ಷಕರನ್ನು ಕೊಡಬೇಕೆಂದು ಆಗ್ರಹಿಸುವ ಸಲುವಾಗಿ ಶಾಲಾಭಿವೃದ್ಧಿ ಸಮಿತಿ ವತಿಯಿಂದ ಶಾಲಾ ಪೋಷಕರ, ಹಳೆ ವಿದ್ಯಾರ್ಥಿಗಳ ಮತ್ತು ಊರವರ ಸಭೆ ಇಂದು ನಡೆಯಿತು.
ವೇದಿಕೆಯಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ ಶೀಲಾವತಿ ಮಾಧವ, ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಶಶಿಧರ ಎಂ.ಜೆ., ನಗರ ಪಂಚಾಯತ್ ಸದಸ್ಯ ಬಾಲಕೃಷ್ಣ ರೈ ದುಗ್ಗಲಡ್ಕ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಾಲಕೃಷ್ಣ ನಾಯರ್ ನೀರಬಿದಿರೆ, ಮಿತ್ರ ಯುವಕ ಮಂಡಲ ಕೊಯಿಕುಳಿ ಇದರ ಅಧ್ಯಕ್ಷ ಚೇತನ ಕಲ್ಮಡ್ಕ ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಶಿಧರ ಎಂ.ಜೆ.ಯವರು ಶಾಲೆಗೆ ಖಾಯಂ ಶಿಕ್ಷಕರನ್ನು ನೀಡಬೇಕೆಂದು ನಾವು ಈಗಾಗಲೇ ಬಿಇಒ ಕಚೇರಿಗೆ ಮನವಿ ನೀಡಿದ್ದೇವೆ. ವರ್ಗಾವಣೆಗೊಂಡಿರುವ ಮುಖ್ಯ ಶಿಕ್ಷಕರನ್ನು ವಾರದಲ್ಲಿ ಮೂರು ದಿನ ಹಾಗೂ ಸಹಶಿಕ್ಷಕಿಯನ್ನು ವಾರಪೂರ್ತಿ ಡೆಪ್ಯುಟೇಶನ್ ನೆಲೆಯಲ್ಲಿ ನೇಮಿಸಿದ್ದಾರೆ. ಆದರೆ ನಮ್ಮ ಬೇಡಿಕೆ ಓರ್ವ ಖಾಯಂ ಶಿಕ್ಷಕನನ್ನು ನಮ್ಮ ಶಾಲೆಗೆ ಕೊಡಬೇಕೆಂದು. ಇಷ್ಟು ಮಕ್ಕಳು ವಿದ್ಯಾಭ್ಯಾಸ ಮಾಡುವ ಶಾಲೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಆದರಿಂದ ಖಾಯಂ ಶಿಕ್ಷಕರನ್ನು ನೇಮಿಸುವಂತೆ ನಾವು ಆಗ್ರಹಿಸಬೇಕು ಎಂದು ಹೇಳಿದರು.
ಶಾಲೆಯಲ್ಲಿ ಶಿಕ್ಷಕರ ಕೊರತೆ ಇದ್ದರೂ ವರ್ಗಾವಣೆ ಪಡೆದುಕೊಂಡು ಹೋಗುವುದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತದೆ ಎಂದು ಬಾಲಕೃಷ್ಣ ನಾಯರ್ ಹೇಳಿದರು.
ಈ ಬಗ್ಗೆ ಚರ್ಚೆ ನಡೆದು ಊರವರು ಅಭಿಪ್ರಾಯ ವ್ಯಕ್ತಪಡಿಸಿದರು. ಶತಮಾನೋತ್ಸವ ಸಮಿತಿ ಸಂಚಾಲಕ ಕೆ.ಟಿ.ವಿಶ್ವನಾಥ ಮಾತನಾಡಿ ಈಗಾಗಲೇ ವರ್ಗಾವಣೆಗೊಂಡಿರುವ ಶಿಕ್ಷಕರನ್ನು ಡೆಪ್ಯುಟೇಶನ್ ನೆಲೆಯಲ್ಲಿ ಶಾಲೆಗೆ ಬರುವಂತೆ ಆದೇಶ ಮಾಡಿರುವುದರಿಂದ ತಕ್ಷಣ ಪ್ರತಿಭಟನೆಗೆ ಮುಂದಾಗುವುದು ಬೇಡ. ಶಿಕ್ಷಕರನ್ನು ಕೊಡಲು ಇಲಾಖೆಗೆ ಸಮಯ ನಿಗದಿ ಪಡಿಸಿ ಮುಂದಿನ ತೀರ್ಮಾನ ಮಾಡೋಣ ಎಂದು ಹೇಳಿದರು.
ಬಳಿಕ ಆ.14ರೊಳಗೆ ಓರ್ವ ಖಾಯಂ ಶಿಕ್ಷಕರನ್ನು ನೀಡಬೇಕು ಮತ್ತು ಅತಿಥಿ ಶಿಕ್ಷಕರ ನೇಮಕವಾದಲ್ಲಿ ಇಬ್ಬರು ಶಿಕ್ಷಕರನ್ನು ಕೊಡಬೇಕೆಂದು ಶಿಕ್ಷಣ ಸಚಿವರಿಗೆ, ಉಸ್ತುವಾರಿ ಸಚಿವರಿಗೆ, ಶಾಸಕರಿಗೆ,ಡಿಡಿಪಿಐ, ಬಿಇಒರವರಿಗೆ ಮನವಿ ನೀಡುವುದು. ಆ.14ರೊಳಗೆ ನೀಡದಿದ್ದಲ್ಲಿ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿಪ್ರಮುಖರಾದ ಇಬ್ರಾಹಿಂ ನೀರಬಿದಿರೆ, ಮಾಧವ ಗೌಡ ದುಗ್ಗಲಡ್ಕ, ರಾಮಕೃಷ್ಣ ಭಟ್, ನಾರಾಯಣ ಟೈಲರ್, ಭವಾನಿಶಂಕರ ಕಲ್ಮಡ್ಕ, ದಿನೇಶ್ ಕೊಯಿಕುಳಿ, ಶ್ರೀಮತಿ ಶೈಲಜ ನೀರಬಿದಿರೆ, ಶ್ರೀಮತಿ ಗಾಯತ್ರಿ, ಮೋಹನ ಶಕ್ತಿಗುಡ್ಡೆ, ಕೆ.ಟಿ.ಭಾಗೀಶ್,ಬಶೀರ್ ನೀರಬಿದಿರೆ,ರಾಮಚಂದ್ರ ಕೊಯಿಕುಳಿ, ಶ್ರೀಮತಿ ಕಮಲಾಕ್ಷಿ ಕಲ್ಲಗದ್ದೆ, ಜನಾರ್ದನ ನೀರಬಿದಿರೆ ,ರಮೇಶ್ ನೀರಬಿದಿರೆ ಮೊದಲಾದವರು ಉಪಸ್ಥಿತರಿದ್ದರು.
ಎಸ್.ಡಿ.ಎಂ.ಸಿ.ಅಧ್ಯಕ್ಷೆ ಶೀಲಾವತಿ ಮಾಧವ ಸ್ವಾಗತಿಸಿ, ಬಾಲಕೃಷ್ಣ ನಾಯರ್ ವಂದಿಸಿದರು.