ಬಿಜೆಪಿ ಮುಖಂಡರಿಂದ ಪರಿಶಿಷ್ಟರ ಅವಹೇಳನ ; ಟಿ.ಎಂ.ಶಹೀದ್ ಖಂಡನೆ

0

ಮಾಜಿ ಗೃಹ ಸಚಿವ ಹಾಗೂ ಬಿಜೆಪಿ ಮುಖಂಡ ಅರಗ ಜ್ಞಾನೇಂದ್ರ ಅವರು ಎ.ಐ.ಸಿ.ಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರ ಬಣ್ಣದ ಬಗ್ಗೆ ಲೇವಡಿ ಮಾಡುವ ಮೂಲಕ ಪರಿಶಿಷ್ಟರನ್ನು ಅವಹೇಳನ ಮಾಡಿದ್ದಾರೆ. ಅವರ ಈ ಅನುಚಿತ ವರ್ತನೆಯನ್ನು ಖಂಡಿಸುವುದಾಗಿ ಕೆ.ಪಿ.ಸಿ.ಸಿ ವಕ್ತಾರ ಟಿ.ಎಂ.ಶಹೀದ್ ಹೇಳಿದ್ದಾರೆ.

ಇಂದು ಸುಳ್ಯದ ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೊಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು “ಬಿಜೆಪಿ ಯಾವ ಮನಸ್ಥಿತಿಯನ್ನು ಹೊಂದಿದೆ ಎಂದು ಜ್ಙಾನೇಂದ್ರರ ಮಾತುಗಳಿಂದ ತಿಳಿಯುತ್ತದೆ. ಮಣಿಪುರದಲ್ಲಿ ಜಾನಾಂಗೀಯ ಹಿಂಸೆ ನಡೆಯುತ್ತಿರುವುದಕ್ಕೆ ಆಡಳಿತ ಪಕ್ಷವೇ ಕಾರಣ. ಅಲ್ಲಿ ಶಾಂತಿ ಕಾಪಾಡಲು ಕೇಂದ್ರ ಮತ್ತು ಮಣಿಪುರ ರಾಜ್ಯ ಸರ್ಕಾರ ಸಂಪೂರ್ಣ ವಿಫಲಗೊಂಡಿದೆ. ಒಬ್ಬರ ವಿರುದ್ದ ಇನ್ನೊಬ್ಬರನ್ನು ಎತ್ತಿಕಟ್ಟಿ ಜನಾಂಗೀಯ ಹಿಂಸೆ ನಡೆಸಿ, ಭಾವನೆಗಳನ್ನು ಕೆರಳಿಸಿ, ಜನರ ಮತ ಪಡೆಯಬಹುದೆಂದು ಬಿಜೆಪಿಯವರು ಭಾವಿಸಿದ್ದಾರೆ. ಇದು ಇನ್ನು ಮುಂದೆ ಸಾಧ್ಯವಿಲ್ಲ, ಜನರು ಬುದ್ದಿವಂತರಾಗಿದ್ದಾರೆ. ಇವರ ಹುನ್ನಾರವನ್ನು ಅರ್ಥೈಸಿಕೊಳ್ಳುತ್ತಿದ್ದಾರೆ” ಎಂದು ಹೇಳಿದ ಶಹೀದ್ “ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರರ ನೇತೃತ್ವದಲ್ಲಿ ನುಡಿದಂತೆ ನಡೆಯುತ್ತಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ೨೦ ಸೀಟುಗಳನ್ನು ಕಾಂಗ್ರೆಸ್ ಗೆಲ್ಲುತ್ತದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ಲಾಟಿಂಗ್ ಸಮಸ್ಯೆ ನಿವಾರಣೆಗೆ ಪ್ರಯತ್ನ

ಸುಳ್ಯವೂ ಸೇರಿದಂತೆ ದ.ಕ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯಲ್ಲಿರುವ ಭೂಮಿ ಪ್ಲಾಟಿಂಗ್ ಸಮಸ್ಯೆಯನ್ನು ಸಚಿವರ ಮತ್ತು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಗಮನಕ್ಕೆ ತಂದು ಸುಳ್ಯಕ್ಕೆ ಸಚಿವರುಗಳನ್ನು ಕರೆಸಿ, ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸುವುದಾಗಿ ಭರವಸೆ ನೀಡಿದ ಟಿ.ಎಂ.ಶಹೀದ್, ರಾಜ್ಯದ ಇಂಧನ ಸಚಿವರ ಗಮನಕ್ಕೆ ತಂದು ಸುಳ್ಯದ ೧೧೦ ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ಅನುಷ್ಠಾನಕ್ಕೆ ಪ್ರಯತ್ನಿಸುತ್ತೇನೆ ಎಂದರು.

ಸುಳ್ಯದಲ್ಲಿ ವ್ಯಾಪಕ ಮಾದಕ ದ್ರವ್ಯದ ವ್ಯವಹಾರ ನಡೆಯುತ್ತಿದೆ ಎಂಬ ಮಾಹಿತಿ ಇದ್ದು ಈ ಬಗ್ಗೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಿದ್ದಿಕ್ ಕೊಕ್ಕೊ ಹಾಗೂ ನ.ಪಂ. ಸದಸ್ಯ ಶರೀಫ್ ಕಂಠಿ ಉಪಸ್ಥಿತರಿದ್ದರು.