ಹತ್ತನೆಯ ವರ್ಷದ ಸಂಸ್ಮರಣಾ ಅಕ್ಷರ ನಮನ
✍️ ಟಿ. ನಾರಾಯಣ ಭಟ್
ಆಹಾರದ ಜೊತೆ ಹಸಿವು, ಬದುಕಿನ ಜೊತೆ ನೆಮ್ಮದಿ, ಶ್ರೀಮಂತಿಕೆ ಜೊತೆ ಧರ್ಮ ಇದ್ದರೆ ಬದುಕಿಗೊಂದು ನೆಲೆ ಬೆಲೆ ಇದೆ. ಅಮರ ಸುಳ್ಯದ ಶಿಲ್ಪಿ, ಚಿಂತನ ಚಿಲುಮೆ, ನೇಗಿಲ ಯೋಗಿ, ಜ್ಞಾನ ಯೋಗಿ, ಕರ್ಮಯೋಗಿ, ದಣಿವರಿಯದ ನಾಯಕ, ಕನಸುಗಾರ, ಕ್ರಾಂತಿ ಪುರುಷ, ಮೊಗೆ ಮೊಗೆದು ಕೈಗಿಟ್ಟ ದಾನಿ, ಇನ್ನೂ ಹತ್ತು ಹಲವು ವಿಶೇಷಣಗಳಿಗೆ ಒಪ್ಪುವ ಮಹಾನ್ ವ್ಯಕ್ತಿತ್ವ, ಅಧ್ಯಯನ ಯೋಗ್ಯ ವ್ಯಕ್ತಿತ್ವ, ಡಾ.ಕುರುಂಜಿ ವೆಂಕಟರಮಣ ಗೌಡರದು. ಕೆ ವಿ ಜಿ ಎಂದೇ ಪರಿಚಿತರು.
ಈ ಜಗತ್ತೇ ವಿಸ್ಮಯ. ಎಲ್ಲೆಲ್ಲಿ ಏನೇನು ಅಮೂಲ್ಯ ಸಂಪತ್ತು ಹುದುಗಿದೆ ಎಂದು ಎಲ್ಲ ಕಂಡವರಿಲ್ಲ. ಕಿಂಡಿಯೊಳಗಿಂದ ಒಂದಷ್ಟು ಕಂಡು ಎಲ್ಲ ಕಂಡೆವು ಎಂದು ಬೊಬ್ಬಿರಿವ ಭ್ರಮೆ ನಮ್ಮದು. ಹಾಗೆಯೇ ಈ ವಸುಂಧರೆಯ ಒಡಲಲ್ಲಿ ಹುಟ್ಟಿ, ಸಾವಿಗೆ ಶರಣಾದವರಿಗೆ ಲೆಕ್ಕವಿಲ್ಲ. ಇವರಲ್ಲಿ ಕೆಲವರು ಅವರವರ ಕಾಲಕ್ಕೆ ಋಣ ತೀರಿಸಿ ಸಾವು ಕಂಡರೆ, ಎಲ್ಲವನ್ನು ಹೀರಿ ಬಿಟ್ಟು ಹೋದವರಿಗೆ ಲೆಕ್ಕವಿಲ್ಲ, ಲೆಕ್ಕವಿಟ್ಟವರು ಯಾರೂ ಇಲ್ಲ. ಸಮಾಜಕ್ಕೆ ಬಿಟ್ಟು ಹೋದ ಹೆಜ್ಜೆ ಗುರುತುಗಳ ಒಂದಷ್ಟು ತಿಳಿದು ನೆನೆಯುವವರು ಕೆಲವರು. ನೆನೆಯದವರು ಅನೇಕ. ನೆನೆಯುವುದು ನಮ್ಮ ಸಂಸ್ಕೃತಿ. ನೆನಯಬೇಕಾದವರ ಹುಳುಕು ಹುಡುಕುವುದು ವಿಕೃತಿ. ನಮ್ಮ ಮಕ್ಕಳಿಗೆ ಯುವಕರಿಗೆ ತುಂಬ ಬೇಕಿರುವುದು ಸಂಸ್ಕೃತಿ. ತಿಳಿ ಹೇಳುವುದು ನಮ್ಮ ಧರ್ಮ.
ಕುರುಂಜಿಯವರು ಅಧ್ಯಯನ ಯೋಗ್ಯರೆಂದು ಬರೆದೆನಲ್ಲ….. ಹೌದು…… ದಿಟ. ನೇಗಿಲು ಹಿಡಿದು ಬಿತ್ತಿದ ಕೈ. ಹುಲ್ಲು ಸೊಪ್ಪು ಹೊತ್ತ ಶಿರ. ಬರಿಗಾಲಲ್ಲಿ ನಡೆದಾಡಿದ, ಬಡತನವೇ ಬಾಲ್ಯದ ಬದುಕಲ್ಲಿ ಬೆಂಬಿಡದೆ ಕಾಡುತ್ತಿದ್ದ ಮಹಾಲಿಂಗ ಮಾಸ್ತರರು ತನ್ನ ಏಳು ಮಕ್ಕಳ ಹೊಟ್ಟೆ ಹೊರೆದು ನೂರಾರು ಮಕ್ಕಳಿಗೆ ಅಕ್ಷರ ಕಲಿಸಿದ ನಿಜ ಗುರು. ಮಮತೆಯ ಮಾತೆಯ ಹೆಸರು ಲಕ್ಷ್ಮೀ ಎಂದಾಗಿತ್ತು. ಆಶಯ ಹೊತ್ತ ಹೆಸರು ಅದು. ಬಾಲ್ಯದಲ್ಲಿ ಧನ ಧಾನ್ಯಗಳಿಗೆ ಲಕ್ಷ್ಮೀ ಕೃಪಾಕಟಾಕ್ಷ ಒಲಿಯದೆ ಹೋದರು, ಹೊತ್ತು ಹೆತ್ತ ತಾಯಿ ಮಮತೆ, ತಾಯಿ ನೀಡಿದ ಸಂಸ್ಕಾರ, ಶ್ರಮವರಿಯದೆ ದುಡಿದ ಕೆವಿಜಿಯವರ ಬಾಳಲ್ಲಿ, ತಾಯಿ ಲಕ್ಷ್ಮಿಯ ಕಣ್ಣ ಮುಂದೆ ಆ ದೇವಿ ಒಲಿದು ಬಂದಳು. ಇದು ನೇಗಿಲ ಯೋಗಿಗೆ ಸಿಕ್ಕ ರಸಗವಳ.
ಬೆಳೆವ ಸಿರಿ,ಬೆಳೆವ ಪರಿ ಎಳೆವೆಯಲ್ಲೇ ಹಿರಿಯರ ಅರಿವಿಗೆ ಬಂದಿತ್ತಂತೆ. ತಾನು ಜನಿಸಿದ ನೆಲದ ಆದರ್ಶ ಗುರು ಗಡಣದ ಅಚ್ಚ ಕನ್ನಡದ ಸರಕಾರಿ ಶಾಲೆಯಲ್ಲಿ1934ರ ಬ್ರಿಟಿಷ್ ಕಾಲದಲ್ಲಿ ಮೊದಲ ಹೆಜ್ಜೆ ಇಟ್ಟರು. ತುಂಬಿದ್ದ ಮಕ್ಕಳ ನಡುವೆ ನಾಟಕದಲ್ಲಿ ಸವ್ಯಸಾಚಿ ಅರ್ಜುನನ ಪಾತ್ರ ನಿರ್ವಹಿಸಿ, ಮುಂದೆಯೂ ಸವ್ಯಸಾಚಿಯಂತೆ ಬದುಕಿದ ಮಹಿಮಾನ್ವಿತ. ಎತ್ತರ ಜಿಗಿತ ಇವರ ನೆಚ್ಚಿನ ಕ್ರೀಡೆ. ಬದುಕಲ್ಲು ಬಹು ಎತ್ತರಕ್ಕೆ ಜಿಗಿದ ಬಹುಮಾನ್ಯರು ಇವರು. ತನ್ನ 14ನೇ ವಯಸ್ಸಲ್ಲೇ ಧಣಿಯ ಜಾಗದಲ್ಲಿ ಸೊಂಟಕ್ಕೆ ಕೈ ಏರಿಸಿ ಮುಂದಿನ ಕೃಷಿ ಭೂಮಿ ಕೊಡುವಿರೋ ಎಂದರಂತೆ. ಬಾಲಕನ ದುಡಿಮೆ ಕಂಡು ಕೈಮುಷ್ಟಿಯಷ್ಟು ಕಾಸಿಗೆ, ಹರಸಿ ಕೊಟ್ಟೇಬಿಟ್ಟರು ತುದಿಯಡ್ಕ ವರ ಹಸ್ತದ ಧಣಿಗಳು. ಇವೆಲ್ಲ ಸಣ್ಣ ಸಂಗತಿಗಳಂತೆ ಕಂಡರೂ ಕೆ ವಿ ಜಿ ಯವರ ಭೀಮ ಹೆಜ್ಜೆಗೆ ಭದ್ರ ಬುನಾದಿಯಾಯಿತು.
ಮಹಾನ್ ದಾರ್ಶನಿಕರ ಕಣ್ಣಲ್ಲಿ ವಿಶ್ವವನ್ನು ಇಣುಕುವ ಚಿಂತಕ ಮಹಾಶಯ ಇವರು. ಹೆಚ್ಚು ಕಲಿತವರಿಗೆ ಬದುಕು ಸಾಧಿಸಲು ಒಂದೇ ದಾರಿಯಾದರೆ, ಜೀವನ ಶಿಕ್ಷಣ ಪಡೆದವರಿಗೆ ಹತ್ತಾರು ದಾರಿಗಳಿವೆಯಂತೆ. ಹೆಚ್ಚು ಕಲಿತವರಲ್ಲದೆ ಹೋದರು ಹೆಚ್ಚು ಕಲಿತವರು ಸಾಧಿಸದಷ್ಟು ಸಾಧನೆ ಮೆರೆದ ಕನಸುಗಾರ ಕೆ ವಿ ಜಿ ಅವರ ವಯೋ ಸಹಜ ಆರೋಗ್ಯ ಕ್ಷೀಣಿಸುತ್ತಿದ್ದಂತೆ ಪೇಜಾವರ ಶ್ರೀ ವಿಶ್ವೇಶತೀರ್ಥರ ಆಣತಿ ಮೇರೆಗೆ ಭೇಟಿಗೆಂದು ಹೋಗಿದ್ದೆ. ತನ್ನ ಸಂಸ್ಥೆಗಳ ಮತ್ತಷ್ಟು ಕಟ್ಟುವ ಕನಸು ಕಾಣುತ್ತಿದ್ದ ಕೆ ವಿ ಜಿ ಯವರಲ್ಲಿ ಒಂದು ಮಾತು ಕೇಳಿದ್ದು ನೆನಪಿದೆ. ತಾವು ವೈದ್ಯರಲ್ಲದೆ ಹೋದರು ವೈದ್ಯಕೀಯ ಕಾಲೇಜು ಕಟ್ಟುವ ಕನಸು ಹೇಗೆ ಮೂಡಿತು ಎಂದೆ . “ನಾನು ವೈದ್ಯನಾಗಿರುತ್ತಿದ್ದರೆ ಅಷ್ಟರಲ್ಲೇ ಇರುತ್ತಿದ್ದೆ. ಅದು ಬೇಡ….. ನೀನು ವೈದ್ಯಕೀಯ ಕಾಲೇಜು ನಿರ್ಮಿಸಿ ನೂರಾರು ವೈದ್ಯರ ಸೃಷ್ಟಿಕರ್ತನಾಗು ಎಂದು ಹಣೆಯಲ್ಲಿ ದೇವರು ಬರೆದಿಟ್ಟರು. ಹಾಗೆ ಇದೆಲ್ಲ ಸಾಧ್ಯವಾಯಿತು”. ಎಂತಹ ಮಾರ್ಮಿಕ ನುಡಿ ಕೇಳಿ ದಂಗಾಗಿ ಹೋದೆ.
ಕುರಿಂಜಿ, ಬೆಟ್ಟದಲ್ಲಿ ಅರಳುವ ಹೂ. 12 ವರ್ಷಕ್ಕೊಮ್ಮೆ ಹೂವರಳಿ ಮಹಾಮೇಳ ನಡೆಯುವುದಂತೆ. ಸಾವಿಲ್ಲದ ಈ ಗಿಡ ಅದು ಬೆಳೆಯುವ ನಾಡಲ್ಲೇ ಇವರು ಜನಿಸಿರಬೇಕು. ನುಡಿಯಲ್ಲಿ ಕುರಿಂಜಿ ಹೋಗಿ ಕುರುಂಜಿ ಆಗಿರಬಹುದು ಎಂಬ ನಂಬಿಕೆ ಅಲ್ಲಿನವರದು. ಅದೇ ಹೆಸರು ವೆಂಕಟರಮಣ ಗೌಡರ ಹೆಸರೊಂದಿಗೆ ಗುರುತಾಯಿತು, ಹೆಗ್ಗುರುತಾಯ್ತು. ಮನುಜನಿಗೆ ಸಾವು ನಿಶ್ಚಿತ, ಆತನ ಮಹಾನ್ ಕಾರ್ಯಗಳಿಗೆ ಅಳಿವಿಲ್ಲ ಸಾವಿಲ್ಲ. ಈ ಜನ ಸೇವಕ ಕುರುಂಜಿ ಎಂದೇ ಮನೆ ಮಾತಾದರು. ಇಂದು ದೇಶ ಗುರುತಿಸುವ ಹೆಸರು ಕುರುಂಜಿ. ಅಲ್ಲಿ ಕಲಿತ ಲಕ್ಷ ಲಕ್ಷ ಮಕ್ಕಳ ಮನದಲ್ಲಿ ಮೂಡಿರುವ ದೃಢನಾಮ ಕುರುಂಜಿ. ಒಬ್ಬರ ಸಾಧನೆ ಒಂದು ಹೆಸರನ್ನು ಚಿರಸ್ಥಾಯಿಗೊಳಿಸಿತು. ಅಚ್ಚರಿಯ ಸಂಗತಿ. ಕೆ ವಿ ಜಿ ಯವರು ಹೇಳಿದಂತೆ ಇದು ಹಣೆಬರಹ ಇದನ್ನು ಅಳಿಸುವವರಾರು. ಬೆಳೆಯ ಬೇಕೆಂದರೆ ಬೆಳೆದೇ ಹೋಗುವುದು. ವೆಂಕಟರಮಣ ಗೌಡರು ನಿಮಿತ್ತ ಮಾತ್ರ. ಆ ಪುಣ್ಯ ಜೀವಿಯ ನೆನೆಯದೆ ಹೋದರೆ ಫಲ ಉಣ್ಣುವ ಮಂದಿ ಜಡ ಜೀವಗಳೇ ಸರಿ… ಇರಲಿ ಇದು ಮನದ ಮೊಗ್ಗು, ಮೊಗ್ಗರಳಲಿ.
ಸ್ವಂತಕ್ಕೆ ಸಂಪಾದಿಸುವುದು ಸಹಜ, ಅದರಿಂದ ಹಂಚುವುದು ಧರ್ಮ. ನನ್ನಲ್ಲಿ ಹಣ ಮುದ್ರಿಸುವ ಯಂತ್ರವಿಲ್ಲ, ಹರಿದು ಬರುವ ಧನರಾಶಿ ಇಲ್ಲ, ಏನಿದ್ದರೂ ಸುಳ್ಯದ ಮಡಿಲಲ್ಲಿ ಬೆಳೆದ ಫಲ. ಮಣ್ಣಲ್ಲಿ ಮಣ್ಣಾಗುವ ನಾವು, ಮಣ್ಣು ಹಿಂಡಿ ಬೆವರು ಸುರಿಸಿ,ಮಳೆ ಬಿಸಿಲಿಗೆ ಮೈಯೊಡ್ಡಿ ಗಳಿಸಿದ ಭೂಮಿ ತಾಯಿಯ ಸಂಪತ್ತು, ಅದರಲ್ಲಿ ಉಂಡು , ಮಿಕ್ಕ ಫಲವನ್ನು ಹಂಚುವೆವು. ಯಾರಿಗೂ ಹೊನ್ನು ನೀಡಿ ಶ್ರೀಮಂತರಾಗುವುದು ಅಷ್ಟಕ್ಕಷ್ಟೇ. ಮುಂದಿನ ಜನಾಂಗಕ್ಕೆ ನೀಡುವ ದೊಡ್ಡ ನಿಧಿ ಎಂದರೆ ಅದು ಶಿಕ್ಷಣ. ಅದೇ ಅರಿವು ಶಿಕ್ಷಣ ಸಂಸ್ಥೆ ಕಟ್ಟಲು ಪ್ರೇರೇಪಿಸಿತು ಅನ್ನುತ್ತಾರೆ .
ಕುರುಂಜಿ ಭಾಗ್ ಬೋಳುಗುಡ್ಡೆಯಂತಿತ್ತು. ಕಲ್ಲು ಮುಳ್ಳುಗಳ ಮಣ್ಣಾಗಿತ್ತು. ಇಂದು ಕಲ್ಲರಳಿ ಹೂವಾಗಿದೆ. ದೇಶದಾದ್ಯಂತ ಮಕ್ಕಳು ಇಲ್ಲಿ ಕಲಿಯುವರು.ಅವರೆಲ್ಲರ ಬದುಕಲ್ಲಿ ಸುಳ್ಯ ಚಿರಸ್ಥಾಯಿಯಾಗಿದೆ. ಇಲ್ಲಿ ಅರಳಿದ ವಿದ್ಯಾ ಕುಸುಮಗಳು 35ಕ್ಕಿಂತಲೂ ಹೆಚ್ಚು. ಶಿಶು ಶಿಕ್ಷಣದಿಂದ ವೈದ್ಯ ಶಿಕ್ಷಣದವರೆಗೂ, ಕನ್ನಡ ಶಾಲೆಗಳಿಂದ ಆಂಗ್ಲ ಶಾಲೆಯವರೆಗೂ, ಕೆಜಿ ತರಗತಿಯಿಂದ ಪಿಜಿ ತರಗತಿಯವರೆಗೂ, ದಂತ ವೈದ್ಯಕೀಯ, ಕಾನೂನು ವಿದ್ಯಾಲಯ, ಇಂಜಿನಿಯರಿಂಗ್,ನರ್ಸಿಂಗ್ ಆಯುರ್ವೇದ ಕಾಲೇಜುಗಳಿವೆ. ಐ ಟಿ ಐ ಪಾಲಿಟೆಕ್ನಿಕ್ ತೆರೆದು ಉದ್ಯೋಗ ಕಟ್ಟಿಕೊಳ್ಳಲು ಅನುವು ಮಾಡಿದರು. ಬೆಂಗಳೂರು ಮಹಾನಗರದಲ್ಲೂ ವಿದ್ಯಾಸಂಸ್ಥೆಗಳ ಸ್ಥಾಪಿಸಿದ ಸಾಹಸಿಗರು. ಮಲೆನಾಡಲ್ಲಿ ಕಾಡುವ ಮುದುಡಿ ಕೂರಿಸುವ ಕಾಯಿಲೆಗಳು ಅನೇಕ. ಚಿಕಿತ್ಸೆಗಾಗಿ ಅಲೆಯದಿರುವಂತೆ ಸಾವಿರ ಹಾಸಿಗೆಗಳ ಆಸ್ಪತ್ರೆ ತೆರೆದರು. ಸಂಚಾರಿ ಆಸ್ಪತ್ರೆ ಹುಟ್ಟು ಹಾಕಿದರು. ತನಗೆಂದು ಬಗೆದವರಲ್ಲ ಊರ ಜನತೆಗಾಗಿ ಅರ್ಪಿಸಿದವರು. ತಾಲೂಕು ಹೊರ ತಾಲೂಕುಗಳ ಶಿಕ್ಷಣ ಸಂಸ್ಥೆಗಳಿಗೂ ಮೂಲಭೂತ ಸೌಕರ್ಯ, ಆರ್ಥಿಕ ಸಹಾಯ ಇವುಗಳಿಗೆಲ್ಲ ಮೊಗೆದು ನೀಡಿದ ಬೆಲೆಯು ಕೋಟಿಗಳಲ್ಲಿ ತಿಳಿಸುವುದು ಹುಡುಗಾಟವಾದೀತು. ಅದರ ಬೆಲೆ ಕಟ್ಟಲಾಗದು. ತಾಲೂಕು ಕೇಂದ್ರದ ಪ್ರಗತಿಗೆ ಏನೇನು ಇರಬೇಕು ಅವೆಲ್ಲವುಗಳ ಹಿಂದೆ ಬಂಡೆಕಲ್ಲಿನಂತೆ ನಿಂತು ನೆರವಾದರು. ಸರಕಾರಿ ಕಚೇರಿ, ದೇವಾಲಯ, ವಿದ್ಯಾಲಯ, ಬಸ್ಸು- ಬಸ್ ಸ್ಟ್ಯಾಂಡ್ ಎನಿತೆನಿತು ಬಗೆಯ ಅಗತ್ಯ ಸಾಕಾರಗೊಳಿಸಿದ ಉದಾರಿಯಾದರು. ಮಡಿಕೇರಿ, ಮಂಗಳೂರು, ಸುಬ್ರಹ್ಮಣ್ಯ ರಸ್ತೆಯ ಪಯಣಿಗರ ಕಣ್ಣ ಹುಬ್ಬೇರುವಂತೆ ದುಡಿದರು. ಸುಳ್ಯದ ಪ್ರಗತಿ ಕಂಡು ಎಲ್ಲರೂ ಅಚ್ಚರಿಗೊಂಡರು.
ಕುರಂಜಿಯವರು ಕಾಲೇಜು ಮೆಟ್ಟಿಲು ಹತ್ತಿದವರಲ್ಲ. ಕಾಲೇಜು ಕಲಿತವರು ಮಾತ್ರ ಸಾಧಕರಾಗ ಬಲ್ಲರೆಂಬ ಭ್ರಮಾ ಲೋಕದಲ್ಲಿ ನಾವಿರುವೆವು. ಈ ಮೇರು ಸಾಧಕರು ಬಯಲು ವಿಶ್ವವಿದ್ಯಾನಿಲಯದಿಂದಲೇ ಬದುಕು ಕಟ್ಟಿಕೊಂಡು ಯಾವುದೇ ಶಿಕ್ಷಣ ತಜ್ಞ, ಆರ್ಥಿಕ ತಜ್ಞ, ನಿರ್ಮಾಣ ತಜ್ಞ, ವೈದ್ಯ ತಜ್ಞರಿಗೂ ಸರಿಸಾಟಿ ಇಲ್ಲದ ತಜ್ಞರಾಗಿ ಮೆರೆದರು. ಕಲೆ ಸಾಹಿತ್ಯ, ಸಂಸ್ಕೃತಿಯ ಪೋಷಕರೆನಿಸಿದರು. ಕಾಯಕವೇ ಕೈಲಾಸವೆಂದು ಬಗೆದರು. ಸಪ್ತ ವ್ಯಸನಗಳಿಂದ ದೂರವಿದ್ದು, ಅಷ್ಟ ಗುಣಗಳ ಮೈಗೂಡಿಸಿ ಆದರ್ಶತೆಯ ಪ್ರತಿರೂಪವಾದರೂ. ಉಡುವ ವಸ್ತ್ರ ಅಷ್ಟೊಂದು ಅಚ್ಚುಕಟ್ಟು, ಶುಭ್ರ. ಕರೆದವರ ಬಳಿ ಹೋಗಿ ಸ್ಫೂರ್ತಿ ನೀಡುವ,ಬೆನ್ನು ತಟ್ಟುವ, ಸ್ಫೂರ್ತಿದಾತ, ಅಕ್ಷಯ ಪಾತ್ರೆ. ದುಡಿದ ಹೊನ್ನು ರಾಶಿ ಹಾಕಿದವರಲ್ಲ. ಐಷಾರಾಮಿ ಬದುಕು ಇವರದಲ್ಲ. 18- 20 ಗಂಟೆ ದುಡಿದರು ದಣಿವಿಲ್ಲ. ಮಗುವಿನ ಮನಸ್ಸು, ಮನಮೆಚ್ಚುವ ಮಾತು, ಎತ್ತರದ ನಿಲುವು, ಆ… ನಗೆ ಮಿಂಚು ಇನ್ನು ಕಣ್ಣ ಮಂದಿದೆ. ಕಾಣುವ ಕಣ್ಣ ಸೆಳೆತ ಚೇತೋಹಾರಿ. ಋಷಿತುಲ್ಯ ಬದುಕು. ದುಡಿಮೆಯಲ್ಲೇ ತಾದಾತ್ಮ್ಯ .
ಕುರುಂಜಿಯವರ ದುಡಿಮೆ ಸುಳ್ಯದ ಬರಡು ನಾಡನ್ನು ಬಂಗಾರವಾಗಿಸಿತು. ಎಲ್ಲಿಯವರೋ ಎಲ್ಲ ಸುಳ್ಯದಲ್ಲಿರುವರು. ಎಲ್ಲಿಂದಲೋ ಇಲ್ಲಿಗೆ ಹಣ ಹರಿದು ಬರುವುದು. ಬಂದುದೆಲ್ಲವ,ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬ ದಾಸವಾಣಿಯಂತೆ ಸುರಿದೇ ಬಿಟ್ಟರು. ಅಷ್ಟೊಂದು ಜನ ನಡೆದಾಡಲು ವಿದ್ಯಾಸಂಸ್ಥೆಗಳು ಮೂಲ ಕಾರಣ. ಊರವರು ಅನೇಕ ಬಗೆಯಲ್ಲಿ ಅನ್ನದ ದಾರಿ ಕಟ್ಟಿಕೊಂಡವರು ಇಲ್ಲಿರುವರು. ದೂರ ದೂರ ಸಾಗಿ ವಿದ್ಯೆಗಾಗಿ ಅಲೆಯುವುದು, ಕೆಲಸ ಅರಸುವುದು ಊರ ಯುವಕ ಯುವತಿಯರಿಗೆ ತಪ್ಪಿತು. ಸಹಸ್ರ- ಸಹಸ್ರ ಮಂದಿ ಇಲ್ಲಿ ದುಡಿಯುವರು. ಅವರಿಗೆ ಬೇಕು ಬೇಕೆನಿಸುವ ಅಗತ್ಯವಸ್ತುಗಳ ಒದಗಿಸಲು ನೂರಾರು ತರಹದ ವ್ಯಾಪಾರ ವಹಿವಾಟು ನಡೆದೇ ಇದೆ. ಅದೆಷ್ಟೋ ಜನ ಅದರಿಂದ ಬದುಕು ಸಾಗಿಸುವರು. ಕೋಟ್ಯಂತರ ರೂಪಾಯಿಗಳ ವಿನಿಮಯ ಇಲ್ಲಿದೆ. ಗ್ರಾಮೀಣಾಭಿವೃದ್ಧಿ ಇಲ್ಲಿ ಸಾಕಾರಗೊಂಡಿತು. ಸುಳ್ಯದ ಜನತೆ ಮರೆಯದ ಮಾಣಿಕ್ಯ ಕುರುಂಜಿ . ಅನ್ನ -ಉಸಿರು- ಬದುಕು ನೆನೆದರೆ ಎಲ್ಲವೂ ಕುರುಂಜಿಯವರ ಕೊಡುಗೆ. ಮಣ್ಣಿನ ಬೆಳೆಯ ಹೊನ್ನು ಸುಳ್ಯದ ಮಣ್ಣಿಗೆ ಸಂದಿದೆ. ಅಲ್ಲೇ ಹುಟ್ಟಿ,ಅಲ್ಲೇ ಮೆರೆದು ಹೊಸ ಲೋಕವನ್ನೇ ಸೃಷ್ಟಿಸಿದ ಈ ಮಾಂತ್ರಿಕನ ಬದುಕು ಸುಳ್ಯದ ಸಂಪತ್ತಾಯಿತು. ಹೀಗೆ ಸಾರಿ ಹೇಳುವ ಸಾವಿರ ನಿದರ್ಶನಗಳಿವೆ.
ಕುರಂಜಿಯವರ ಪತ್ನಿ ಜಾನಕಿ ಸೌಜನ್ಯತೆಯ ಆಗರ. ಮನೆಗೆ ಬಂದವರಿಗೆ ಆತಿಥ್ಯ ನೀಡಿ ಗೃಹಲಕ್ಷ್ಮಿಯಂತೆ ಶೋಭಿಸಿದವರು. ಸಹನೆ ಮುಪ್ಪರಿಗೊಂಡಾಕೆ. ಸಿಟ್ಟು ಸಿಡುಕಿಲ್ಲದೆ ಮನೆ ಬೆಳಗಿದವರು. ಅವರ ಹಿರಿಯ ಮಗ ಡಾ. ಕೆ ವಿ ಚಿದಾನಂದ, ಪತ್ನಿ ಶೋಭಾ. ಕಿರಿಯ ಮಗ ಡಾ. ರೇಣುಕಾ ಪ್ರಸಾದ್, ಪತ್ನಿ, ಡಾ. ಜ್ಯೋತಿ ಆರ್ ಪ್ರಸಾದ್ ವೈದ್ಯೆ. ಮಗಳು ಗೋವರ್ಧೀನಿ. ಪತಿ ಡಾ.ಜಯಕುಮಾರ್ ಹೃದ್ರೋಗ ತಜ್ಞರು. ಅವರು ಈಗಿಲ್ಲ.
ಸ್ವಾತಿ ಮುತ್ತಿನ ಕೋಟಿ ಕೋಟಿ ಹನಿಗಳಲ್ಲಿ ಒಂದು ಹನಿ ಮುತ್ತಾಗುವುದಂತೆ. ಹಾಗೆಯೇ ಜಗದ ಬೆಳಕು ಕಂಡವರೆಲ್ಲ ಮುತ್ತುಗಳಾಗುವುದಿಲ್ಲ. ಕುರಂಜಿ ಅವರು ಸುಳ್ಯದ ಮುತ್ತು- ರತ್ನ. ಶ್ರೀಯುತರ ಸೇವೆಗೆ ಸಂದ ಪ್ರಶಸ್ತಿ ಪುರಸ್ಕಾರಗಳು ನೂರಾರು. ಸಮಾಜದಿಂದ ಸರಕಾರದಿಂದ ಸಂಘ-ಸಂಸ್ಥೆಗಳಿಂದ ಬಂದಿರುವ ಮಾನ -ಸನ್ಮಾನಗಳಿಗೆ ಲೆಕ್ಕವಿಟ್ಟವರಾರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗೌರವ ಡಾಕ್ಟರೇಟ್,ವಿದ್ಯಾರತ್ನ ಪ್ರಶಸ್ತಿ, ವಿಕಾಸರತ್ನ ಪ್ರಶಸ್ತಿ, ಶ್ರೀ ಶ್ರೀ ವಿಶ್ವೇಶ ತೀರ್ಥರಿಂದ ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ, ಬಾಲಗಂಗಾಧರನಾಥ ಶ್ರೀಗಳಿಂದ ಚುಂಚ ಶ್ರೀ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಮುಡಿಗೇರಿವೆ.
ಪೇಜಾವರ ಶ್ರೀ ಶ್ರೀ ವಿಶ್ವೇಶ ತೀರ್ಥರ ಅಪೇಕ್ಷೆಯಂತೆ ಹಲವು ಬಾರಿ ಕುರುಂಜಿಯವರ ಬಳಿ ಹೋಗುವ ಅವಕಾಶ ನನ್ನ ಪಾಲಿಗೆ ಪರಮಭಾಗ್ಯವೆನಿಸಿತು. ನಿಮಿಷ ತಡವಾದರೂ ಮನೆಯಲ್ಲಿ ಅವರನ್ನು ಕಾಣಲು ಆಗದು. ಕಾಲೇಜು, ತೋಟ, ಕಾಮಗಾರಿ ಎಲ್ಲೋ ಎಲ್ಲೋ ಹುಡುಕಬೇಕಿತ್ತು. ಇಂತಹ ಮಹನೀಯರ ಒಡನಾಟ ಸಿಗುವುದು ವಿರಳಾತಿವಿರಳ. ನಮ್ಮೊಂದಿಗೆ ಇಲ್ಲದೆ ದಶವರ್ಷಗಳು ಉರಳಿದರು ಅವರ ಚಿತ್ರ ಕಣ್ಣಲ್ಲಿ ಮರೆಯಾಗಿಲ್ಲ. ಮರೆಯಾಗುವುದು ಇಲ್ಲ. 7. 8. 2013 ಇವರ ದೇಹಾಂತ್ಯವಾಯಿತು.
ಟಿ ನಾರಾಯಣ ಭಟ್ ರಾಮಕುಂಜ.
ರಾಜ್ಯ,ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರು.
ವಿಶ್ವೇಶ ತೀರ್ಥರ ಬದುಕಿನ ಚಿತ್ರಣವುಳ್ಳ ನಾಲ್ಕಾರು ಕೃತಿಗಳ ಹಾಗೂ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕ 40 ಕೃತಿಗಳ ಲೇಖಕರು.