ಸಂಪಾಜೆಯ ಮೂಲಭೂತ ಸೌಕರ್ಯಗಳ ಹಿತರಕ್ಷಣಾ ವೇದಿಕೆಯಿಂದ ಅಧಿಕಾರಿಗಳ ಮತ್ತು ಸಚಿವರುಗಳ ಭೇಟಿ

0


ಕನ್ವರ್ಷನ್ ಫ್ಲಾಟಿಂಗ್, ಸಾರ್ವಜನಿಕ ಸ್ಮಶಾನ, ಅಡಿಕೆ ಎಲೆ ಹಳದಿ ರೋಗ ಸಮಸ್ಯೆಗೆ ಸ್ಪಂದಿಸುವಂತೆ ಮನವಿ


ಫ್ಲಾಟಿಂಗ್ ಸಮಸ್ಯೆ, ಅರಣ್ಯ ಭೂಮಿ ಸಮಸ್ಯೆ, ಸಾರ್ವಜನಿಕ ಸ್ಮಶಾನ, ಅಡಿಕೆ ಹಳದಿರೋಗ, ಕೆಎಫ್‌ಡಿಸಿ ಕಾರ್ಮಿಕರ ಸಮಸ್ಯೆಗಳನ್ನು ಹಾಗೂ ಸಂಪಾಜೆ ಗ್ರಾಮದ ಮೂಲಭೂತ ಸಮಸ್ಯೆ ಪರಿಹರಿಸಬೇಕು, ಗ್ರಾಮದ ಸಮಗ್ರ ಅಭಿವೃದ್ಧಿಗೆ ರೂಪುರೇಷೆ ತಯಾರಿಸಬೇಕು ಎಂದು ಆಗ್ರಹಿಸಿ ಎಲ್ಲಾ ಅಧಿಕಾರಿಗಳು ಹಾಗೂ ಸಚಿವರು ಸೇರಿದಂತೆ ಎಲ್ಲಾ ಜನ ಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ. ಗ್ರಾಮದ ಸಮಸ್ಯೆ ಪರಿಹಾರಕ್ಕಾಗಿ ಹೋರಾಟವನ್ನು ಮುಂದುವರಿಸಲಾಗುವುದು ಎಂದು ಸಂಪಾಜೆ ಮೂಲಭೂತ ಸೌಕರ್ಯಗಳ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಕೆ.ಪಿ.ಜಾನಿ ಕಲ್ಲುಗುಂಡಿ ಮತ್ತು ಸೋಮಶೇಖರ ಕೊಯಿಂಗಾಜೆ ಹೇಳಿದ್ದಾರೆ.


ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಗ್ರಾಮ ಮಟ್ಟದಿಂದ ರಾಜ್ಯಮಟ್ಟದವರೆಗೆ ಮನವಿ ಸಲ್ಲಿಸಲಾಗಿದೆ. ಜಮೀನುಗಳ ದಾಖಲೆಗಳಿಗೆ ಸಂಬಂಧಿಸಿ ಕನ್ವರ್ಷನ್, ಪ್ಲಾಟಿಂಗ್, ನೈನ್ ಇಲವೆನ್, ೯೪ಸಿ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಬೇಕು. ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಗಳ ಜಂಟಿ ಸರ್ವೇ ನಡೆಸಿ ಪ್ಲಾಟಿಂಗ್ ಸಮಸ್ಯೆ ಪರಿಹರಿಸಬೇಕು, ಸಾರ್ವಜನಿಕ ಸ್ಮಶಾನದ ಅಭಾವ, ಅಡಿಕೆ ಎಲೆಹಳದಿರೋಗದಿಂದ ಸಮಸ್ಯೆಗೀಡಾದ ರೈತರು ಕೃಷಿಕೂಲಿ ಕಾರ್ಮಿಕರ ಸಮಸ್ಯೆ, ಕೆ.ಎಫ್.ಡಿ.ಸಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ನಿವೃತ್ತಿ ನಂತರದ ವಾಸಕ್ಕಾಗಿ ನಿವೇಶನ ಸಮಸ್ಯೆ ಪರಿಹರಿಸಬೇಕು

ಎಂದು ಒತ್ತಾಯಿಸಿ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳನ್ನು ಮತ್ತು ಕಂದಾಯ ಸಚಿವರಾದ ಕೃಷ್ಣಬೈರೇಗೌಡ, ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡುರಾವ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಜಮೀನಿನ ದಾಖಲೆಗಳ ಅವ್ಯವಸ್ಥೆ, ಹಲವು ಸಮಸ್ಯೆಗಳಿಗೆ ಕಂದಾಯ ಮತ್ತು ಅರಣ್ಯ ಇಲಾಖೆಗಳ ಸಮ್ಮುಖದಲ್ಲಿ ಗಡಿ ಗುರುತು ಆಗದಿರುವುದೇ ಆಗಿರುತ್ತದೆ. ಆದುದರಿಂದ ಆದಷ್ಟು ಬೇಗ ಅರಣ್ಯ ಮತ್ತು ಕಂದಾಯ ಇಲಾಖೆಗಳ ಉಪಸ್ಥಿತಿಯಲ್ಲಿ ಜಂಟಿ ಸರ್ವೇಗೆ ವ್ಯವಸ್ಥೆ ಮಾಡಬೇಕು ಎಂದು ಸಚಿವರಲ್ಲಿ ವಿವರಿಸಲಾಗಿದೆ. ತಾಲೂಕು ಮಟ್ಟದಲ್ಲಿ ಪೆಂಡಿಂಗ್ ಇರುವ ಪಡಿತರ ಚೀಟಿ ನೀಡದ ಸಮಸ್ಯೆಯಿಂದ ಸರಕಾರದ ಗ್ಯಾರಂಟಿ ಯೋಜನೆಗಳಿಂದ ಬಡ ಜನರು ವಂಚಿತರಾಗುತ್ತಿರುವ ಬಗ್ಗೆ ಸಚಿವರಾದ ಕೆ.ಹೆಚ್ ಮುನಿಯಪ್ಪ ಇವರಲ್ಲಿ ಮನವಿ ಸಲ್ಲಿಸಲಾಗಿದೆ ಎಂದರು.
ಸಂಪಾಜೆಯಲ್ಲಿ ಪ್ಲಾಟಿಂಗ್ ಆಗದೆ ದೊಡ್ಡ ಸಮಸ್ಯೆ ಆಗಿದೆ. ಏಕ ವ್ಯಕ್ತಿ ಪ್ಲಾಟಿಂಗ್ ಮಾಡಲು ಅವಕಾಶ ನೀಡಲು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಪ್ಲಾಟಿಂಗ್ ಮಾಡಲು ಜಿಲ್ಲಾಧಿಕಾರಿ ತಹಶೀಲ್ದಾರ್‌ಗೆ ಸೂಚಿಸಿದ್ದಾರೆ ಎಂದು ಹೇಳಿದರು. ಪ್ಲಾಟಿಂಗ್ ಸಮಸ್ಯೆ ಪರಿಹರಿಸಲು ಪೋಡಿ ಮುಕ್ತ ಗ್ರಾಮ ಮಾಡಿದ ಮಾದರಿಯಲ್ಲಿ ಗ್ರಾಮಗಳಲ್ಲಿ ಪ್ಲಾಟಿಂಗ್ ಮಾಡಬೇಕು. ಕಂದಾಯ ಸಚಿವರಿಗೆ ಈ ಬಗ್ಗೆ ಮನವಿ ಸಲ್ಲಿಸಲಾಗಿದೆ. ಕಂದಾಯ ಮತ್ತು ಅರಣ್ಯ ಇಲಾಖೆ ಸಚಿವರನ್ನೇ ಕರೆಸಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ನಡೆಸಲಾಗುತಿದೆ. ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ ಮಾಡಿ ಗಡಿ ಗುರುತು ಮಾಡಿ ಸಮಸ್ಯೆ ಪರಿಹರಿಸಬೇಕು ಎಂದು ಅವರು ಒತ್ತಾಯಿಸಿದರು.

’ತಾಲೂಕು ಮಟ್ಟಕ್ಕೆ ಭೇಟಿ ಮಾಡಿ ತಾಲೂಕು ಕಚೇರಿಗೆ ಭೇಟಿ ನೀಡಿ ಕಂದಾಯ ಇಲಾಖೆಯಲ್ಲಿ ಜನರಿಗೆ ಆಗುವ ಸಮಸ್ಯೆಯನ್ನು ಪರಿಶೀಲಿಸಬೇಕು ಎಂದು ಕಂದಾಯ ಸಚಿವರಲ್ಲಿ ಮನವಿ ಸಲ್ಲಿಸಿದ್ದೇವೆ. ವಿಲೇವಾರಿ ಆಗುವ ಕಡತಗಳನ್ನು ಕೂಡ ಇಲ್ಲಿ ಪೆಂಡಿಂಗ್ ಆಗುವ ಸ್ಥಿತಿ ಇದೆ ಎಂದು ಹೇಳಿದರು.
ಎಜ್ಯುಕೇಶನ್ ಲೋನ್‌ನಿಂದ ಬಡ ವಿದ್ಯಾರ್ಥಿಗಳನ್ನು ದೂರವಿಟ್ಟಿರುವುದರಿಂದ ಸಮಸ್ಯೆಯಾಗಿದೆ. ಇದು ಕೇಂದ್ರ ಸರಕಾರದ ಮಟ್ಟದಲ್ಲಿ ಆಗಿರುವ ಕಾನೂನು ಆಗಿರುವುದರಿಂದ ಮುಂಇದನ ದಿನಗಳಲ್ಲಿ ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು ಎಂದು ಹೇಳಿದರು.
ಮಹಮ್ಮದ್ ಕುಂಞಿ ಗೂನಡ್ಕ ಮಾತನಾಡಿ, ಸುದ್ದಿ ಬಿಡುಗಡೆಯ ಹೋರಾಟದ ಮೂಲಕ ಐವರ್ನಾಡಿನ ಆದಂರವರಿಗೆ ಹಕ್ಕುಪತ್ರ ಸಿಕ್ಕಿದೆ. ಆದಂರಂತಹ ಎಷ್ಟೋ ಪ್ರಕರಣಗಳು ಎಲ್ಲಾ ಗ್ರಾಮ ಗ್ರಾಮಗಳಲ್ಲಿ ಇದೆ. ಈ ಬಗ್ಗೆ ಕಂದಾಯ ಸಚಿವರಿಗೆ ಮನವರಿಕೆ ಮಾಡಲಾಗಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮೂಲಭೂತ ಸೌಕರ್ಯಗಳ ಹಿತರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಸಂತ ಪೆಲ್ತಡ್ಕ, ಯು.ಬಿ.ಚಕ್ರಪಾಣಿ, ಶೌವಾದ್ ಗೂನಡ್ಕ ಎ.ಕೆ.ಇಬ್ರಾಹಿಂ, ಟಿ.ಐ.ಲೂಕಾಸ್, ಜಿತೇಶ್ ಪೆಲ್ತಡ್ಕ ಉಪಸ್ಥಿತರಿದ್ದರು.