ಸೆರಗೊಡ್ಡಿ ನ್ಯಾಯದ ಭಿಕ್ಷೆ ಬೇಡಿದಾಗ ಭಾವುಕರಾದ ಸೇರಿದ್ದ ಸಹಸ್ರಾರು ಮಂದಿ
ಪ್ರತಿಭಟನಾ ಸಭೆಯನ್ನು ದಿ.ಸೌಜನ್ಯಳ ತಾಯಿ ಕುಸುಮಾವತಿ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ತಮ್ಮ ಮಗಳ ಮೇಲೆ ನಡೆದಿರುವ ಅತ್ಯಾಚಾರ ಮತ್ತು ಕೊಲೆಯ ಕ್ಷಣವನ್ನು ನೆನೆದು ಗದ್ಗತಿಗಾಗಿ ಮಾತು ಆರಂಭಿಸಿದ ಕುಸುಮಾವತಿ ಅವರು ನನ್ನ ಮಗಳ ಪ್ರಾಣ ಹೋಗುವ ಸಂದರ್ಭ ಆ ಮಗು ಅಮ್ಮ ಎಂದು ಎಷ್ಟು ಬಾರಿ ನನ್ನನ್ನು ಕರೆದಿರಬಹುದು. ಆ ಪ್ರಾಣ ಹೋಗುವ ಸಂದರ್ಭದಲ್ಲಿ ಎಷ್ಟು ವೇದನೆಯನ್ನು ಅನುಭವಿಸಿರಬಹುದು. ನನ್ನ ಮಗಳನ್ನು ಕೊಂದವರಿಗೆ ಅವಳನ್ನು ತಿನ್ನಬಹುದಿತ್ತಲ್ಲವೇ? ಯಾಕಾಗಿ ಅವಳನ್ನು ಅಲ್ಲಿ ಅರ್ಧ ಬಿಟ್ಟು ಹೋಗಿದ್ದಾರೆ ಎಂದು ಕಣ್ಣೀರು ಹಾಕುತ್ತಾ ಮಗಳನ್ನು ನೆನೆದು ನ್ಯಾಯದ ಭಿಕ್ಷೆಯನ್ನು ಬೇಡಿದರು.
ಈ ಸಂದರ್ಭದಲ್ಲಿ ಪ್ರತಿಭಟನಾ ಕಾರರನ್ನು ಉದ್ದೇಶಿಸಿ ಮಾತನಾಡಿ ತನ್ನ ಸೆರಗನ್ನು ಹೊಟ್ಟಿ ಕೇಳುತ್ತಿದ್ದೇನೆ ನನ್ನ ಮಗಳಿಗೆ ನ್ಯಾಯ ಕೊಡಿಸಿ ಎಂದು ಅತ್ತಾಗ ಸಾವಿರಾರು ಮಂದಿ ಕಣ್ಣೀರು ಹಾಕಿದ ಕ್ಷಣ ಮನಕಲಕುವಂತಿತ್ತು.
ವೇದಿಕೆಯಲ್ಲಿ ಸೌಜನ್ಯಳ ಇಬ್ಬರು ಸಹೋದರಿಯರು ಹಾಗೂ ತಂದೆ, ಸೌಜನ್ಯ ಹೋರಾಟ ಸಮಿತಿಯ ಸಂಚಾಲಕ ಎಸ್ ಟಿ ವಸಂತ, ಅಜಿತ್ ಐವರ್ನಾಡು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಸರಸ್ವತಿ ಕಾಮತ್, ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರ ಕೊಲ್ಚಾರ್ ಮೊದಲಾದವರು ಉಪಸ್ಥಿತರಿದ್ದರು.
ಸಭೆಯ ಕೊನೆಯಲ್ಲಿ ವೇದಿಕೆಗೆ ಆಗಮಿಸಿದ ಉಪತಹಶೀಲ್ದಾರ್ ಮಂಜುನಾಥ್ ರವರ ಮೂಲಕ ಸರ್ಕಾರಕ್ಕೆ ಪ್ರಕರಣದ ಮರುತನಿಖೆಗೆ ಆಗ್ರಹಿಸಿ ಮನವಿಯನ್ನು ಸಲ್ಲಿಸಲಾಯಿತು.