ಸಂಪಾಜೆ : ನಾಗರಿಕ ಹಿತರಕ್ಷಣಾ ಸಮಿತಿ ಮುಖಂಡರೊಂದಿಗೆ ಎಸ್.ಐ. ಮಾತುಕತೆ

0

ಮೌನ ಪ್ರತಿಭಟನೆ ವಾಪಸ್

ಸಂಪಾಜೆ ಗ್ರಾಮ ಪಂಚಾಯತ್ ಎದುರು ನಾಗರಿಕ ಹಿತರಕ್ಷಣಾ ಸಮಿತಿ ಮೌನ ಪ್ರತಿಭಟನೆ ಮಾಡುವುದಾಗಿ ಘೋಷಿಸಿದ್ದು, ಸ್ಥಳಕ್ಕೆ ಸುಳ್ಯ ಎಸ್.ಐ. ಈರಯ್ಯ ದೂಂತೂರು ಭೇಟಿ ನೀಡಿ ನಡೆಸಿದ ಮಾತುಕತೆ ಹಿನ್ನೆಲೆಯಲ್ಲಿ ವಾಪಾಸ್ ಪಡೆಯಲಾಗಿದೆ.

ಸಂಪಾಜೆಯ ಇಬ್ರಾಹಿಂ ಮಾಸ್ಟರ್ ರವರು ತಮ್ಮ ಮಗಳ ಹೆಸರಿಗೆ ದಾನಪತ್ರ ನೀಡಿದ ಜಾಗದ ಖಾತಾ ಬದಲಾವಣೆಗೆ ಅರ್ಜಿ ನೀಡಿದ ಬಳಿಕ ಅಗತ್ಯವಿರುವ ಎಲ್ಲಾ ದಾಖಲೆ ಪತ್ರ ನೀಡಿದ್ದರೂ ವಿಳಂಬ ಧೋರಣೆ ಮಾಡುತ್ತಿರುವುದಲ್ಲದೆ, ಇಬ್ರಾಹಿಂ ಮಾಸ್ಟರ್ ರವರು ಕ್ಷಮೆ ಕೇಳದೆ ಅವರ ಕಡತ ವಿಲೇ ಮಾಡುವುದಿಲ್ಲವೆಂದು ಹೇಳುವುದರ ಮೂಲಕ ಪಿ.ಡಿ.ಒ. ಸರಿತಾ ಓಲ್ಗಾ ಡಿಸೋಜರವರು ಪ್ರಜಾಪ್ರಭುತ್ವ ವಿರೋದಿ ಧೋರಣೆ ತೋರುತ್ತಿದ್ದಾರೆಂದು ಆರೋಪಿಸಿ ಇಂದು ಪಂಚಾಯತ್ ಎದುರು ಹಕ್ಕೊತ್ತಾಯ ಧರಣಿ ನಡೆಸಲು ಮೂಲಭೂತ ಸೌಕರ್ಯಗಳ ಹಿತರಕ್ಷಣಾ ವೇದಿಕೆ ನಿರ್ಧರಿಸಿತ್ತು. ಈ ಮಾಹಿತಿ ಪಡೆದ ಪೊಲೀಸ್ ಇಲಾಖೆ ಸಮಿತಿ ಮುಖಂಡರನ್ನು ಸಂಪರ್ಕಿಸಿ ಠಾಣೆಯಲ್ಲಿ ಮಾತುಕತೆ ನಡೆಸಲು ಬರುವಂತೆ ತಿಳಿಸಿದ್ದರು.

ಈ ಮಧ್ಯೆ ಇಂದು ಸಂಪಾಜೆ ಗ್ರಾ.ಪಂ., ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯೂ ನಡೆಯುತ್ತಿರುವ ಹಿನ್ನಲೆಯಲ್ಲಿ ಸಂಪಾಜೆಯಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ಇದೀಗ ಸುಳ್ಯ ಎಸ್.ಐ. ಈರಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದು, ಬೇಡಿಕೆ ಈಡೇರುವ ಭರವಸೆ ದೊರೆತ ಹಿನ್ನೆಲೆಯಲ್ಲಿ ಪ್ರತಿಭಟನೆ ವಾಪಾಸ್ ಪಡೆಯಲಾಗಿದೆ ಎಂದು ತಿಳಿದುಬಂದಿದೆ.