ನೈತಿಕ ಪೋಲೀಸ್ ಗಿರಿಯ ಆರೋಪ
ಪೋಲೀಸ್ ಕೇಸು ದಾಖಲು
ಅನ್ಯಕೋಮಿನ ಮಹಿಳೆಯನ್ನು ಕಾರಲ್ಲಿ ಕರೆದೊಯ್ಯುತ್ತಿದ್ದನೆಂಬ ಕಾರಣಕ್ಕಾಗಿ ಕಾರಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಕೆಲ ಯುವಕರು ತಡೆದು ಹಲ್ಲೆ ನಡೆಸಿದ್ದಾರೆನ್ನಲಾದ ಘಟನೆ ವರದಿಯಾಗಿದ್ದು, ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.
ಅರಂತೋಡು ಕಡೆ ಟ್ಯಾಪಿಂಗ್ ಕೆಲಸ ವಹಿಸಿಕೊಂಡು ಮಾಡುತ್ತಿದ್ದ ವ್ಯಕ್ತಿ ಅನ್ಯಕೋಮಿನ ಮಹಿಳೆಯೊಬ್ಬರನ್ನು ತನ್ನ ಕಾರಲ್ಲಿ ಸುತ್ತಾಡಿಸುತ್ತಿದ್ದಾನೆಂದು ಕೆಲವು ಯುವಕರು ಅನುಮಾನದಿಂದ ಹಿಂಬಾಲಿಸುತ್ತಿದ್ದರೆನ್ನಲಾಗಿದೆ.
ಇಂದು ಸಂಜೆ ಆತ ಮಹಿಳೆಯನ್ನು ಸುಳ್ಯಕ್ಕೆ ಬಿಟ್ಟು ತೊಡಿಕಾನ ಕಡೆಗೆ ಬರುತ್ತಿದ್ದಾನೆಂಬ ಮಾಹಿತಿ ದೊರೆತ ಸಂಘಟನೆಯ ಕೆಲವು ಯುವಕರು ಅಡ್ಯಡ್ಕ ಸಮೀಪ ಕಾರನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿದರೆಂದೂ, ಸುಳ್ಯದಿಂದ ಬಂದ ಸಂಘಟನೆಯ ಇಬ್ಬರು ಯುವಕರು ಆ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದರೆಂದೂ ತಿಳಿದುಬಂದಿದೆ.
ಹಲ್ಲೆಯಿಂದ ಗಾಯಗೊಂಡ ವ್ಯಕ್ತಿ ಸುಳ್ಯಕ್ಕೆ ಬಂದು ದೂರು ನೀಡಿದ್ದು ಪೋಲೀಸರು ಪ್ರಕರಣ ದಾಖಲಿಸಿದ್ದಾರೆ.
ಬಿ.ಜೆ.ಪಿ. ಮುಖಂಡ ಹರೀಶ್ ಕಂಜಿಪಿಲಿ, ಸಂತೋಷ್ ಕುತ್ತಮೊಟ್ಟೆ, ಸೋಮಶೇಖರ ಪೈಕ, ಹರೀಶ್ ಉಬರಡ್ಕ ಮತ್ತಿತರರು ಠಾಣೆಗೆ ಹೋಗಿದ್ದು ಪೋಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆಂದು ಗೊತ್ತಾಗಿದೆ.