ಬಸ್ ಸಂಚಾರ : ಹೊಸದಾಗಿ ನಾಲ್ಕು ಹೊಸ ರೂಟ್ ಆರಂಭಿಸಲು ಸುಳ್ಯ ಕಾಂಗ್ರೆಸ್ ನಿಯೋಗದಿಂದ ಉಸ್ತುವಾರಿ ಸಚಿವರಿಗೆ ಮನವಿ

0

ವಿದ್ಯಾರ್ಥಿ ನಿಲಯ ಸೇರ್ಪಡೆಗೆ ಆದಾಯ ಮಿತಿ ಹೆಚ್ಚಳಕ್ಕೂ, ಪ್ಲಾಟಿಂಗ್ ಸಮಸ್ಯೆ ನಿವಾರಣೆಗೂ ವಿನಂತಿ

ತಾಲೂಕಿನ ಸುಳ್ಯ ಕೆ.ಎಸ್.ಆರ್.ಟಿ.ಸಿ. ಡಿಪೋದಿಂದ ವಾರದ ಎಲ್ಲಾ ದಿನಗಳಲ್ಲಿ ಬಸ್ ಸಂಚಾರ ಮುಂದುವರಿಸುವಂತೆ ಮತ್ತು ಹೊಸದಾಗಿ ನಾಲ್ಕು ರೂಟ್‌ಗಳನ್ನು ಆರಂಭಿಸಬೇಕೆಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ನಿಯೋಗ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರಿಗೆ ಮನವಿ ಮಾಡಿಕೊಂಡಿದ್ದಾರೆ.

ತಾಲೂಕಿನ ಗ್ರಾಮಾಂತರ ಪ್ರದೇಶಗಳಿಗೆ ಬಸ್ ಸಂಚಾರವಿದ್ದು ಶಾಲಾ ರಜಾ ದಿನಗಳಲ್ಲಿ ಬಸ್ ಓಡಾಟವನ್ನು ನಿಲ್ಲಿಸುತ್ತಾರೆ. ಮಡಪ್ಪಾಡಿ, ಉಬರಡ್ಕ ಸಹಿತ ಇತರ ಗ್ರಾಮಗಳಲ್ಲಿ ಸರಕಾರಿ ಬಸ್ಸನ್ನೇ ಅವಲಂಬಿಸುತ್ತಿರುವ ಪ್ರಯಾಣಿಕರಿಗೆ ಇದರಿಂದಾಗಿ ತೊಂದರೆಯಾಗಿದೆ.
ಆದ್ದರಿಂದ ವಾರದ ಎಲ್ಲಾ ದಿನಗಳಲ್ಲಿ ಕೂಡಾ ಬಸ್ ಸಂಚಾರ ನಿಯಮಿತವಾಗಿ ಮುಂದುವರಿಸಬೇಕು.

ಅಲ್ಲದೆ ಸುಳ್ಯ ಡಿಪೋದಿಂದ ಮಡಪ್ಪಾಡಿಗೆ ೩೦ ಕಿ.ಮೀ. ದೂರವಿದ್ದು ಪ್ರತಿದಿನ ಸಂಜೆ ೬.೩೦ಕ್ಕೆ ಸುಳ್ಯದಿಂದ ಹೊರಟು ಮಡಪ್ಪಾಡಿಯಲ್ಲಿ ತಂಗಿ, ಮರುದಿನ ಬೆಳಗ್ಗೆ ೭.೩೦ ಕ್ಕೆ ಬಸ್ ಸಂಚಾರ ಆರಂಭಿಸಬೇಕು. 1980 ರಿಂದಲೇ ಇಲ್ಲಿ ವ್ಯವಸ್ಥೆ ಇತ್ತು.‌ ಆದರೆ ಕೊರೊನಾ ನಂತರ ಸ್ಥಗಿತಗೊಳಿಸಲಾಗಿದ್ದು ಅದನ್ನು ಪುನರಾರಂಭಿಸಬೇಕು.

ಸುಳ್ಯದಿಂದ ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದ ತನಕ ಹೊಸದಾಗಿ ಬಸ್ ಸಂಚಾರ ಆರಂಭಿಸಬೇಕು. ಸುಳ್ಯದಿಂದ ಪಂಜ ಮೂಲಕ ಬೆಳಗ್ಗೆ ೮.೩೦ ಕ್ಕೆ ಕಡಬಕ್ಕೆ ಮತ್ತು ಸಂಜೆ ೪ಕ್ಕೆ ಕಡಬ ದಿಂದ ಹೊರಟು ಪಂಜ ಮೂಲಕ ಸುಳ್ಯಕ್ಕೆ ಹೊಸದಾಗಿ ಬಸ್ ಸಂಚಾರ ಆರಂಭಿಸಬೇಕು. ಸುಳ್ಯದಿಂದ ಬೆಳಗ್ಗೆ ಗಂಟೆ ೮ಕ್ಕೆ ಮತ್ತು ಮಧ್ಯಾಹ್ನ ೧.೩೦ ಕ್ಕೆ ಸಂಜೆ ಗಂಟೆ ೫ಕ್ಕೆ ಸುಳ್ಯದಿಂದ ಬಡ್ಡಡ್ಕಕ್ಕೆ ಹೊಸದಾಗಿ ಎಂದು ಅವರು ಮನವಿಯಲ್ಲಿ ವಿನಂತಿಸಿದ್ದಾರೆ.

ಆದಾಯ‌ ಮಿತಿ‌ ಹೆಚ್ಚಿಸಿ
ಹಿಂದುಳಿದ ವರ್ಗದ ವತಿಯಿಂದ ನಡೆಸುತ್ತಿರುವ ವಿದ್ಯಾರ್ಥಿ ನಿಲಯಗಳಲ್ಲಿ ಮೆಟ್ರಿಕ್ ನಂತರದ ಸೇರ್ಪಡೆಗೆ ಕೆಟಗರಿ ೧ ಕ್ಕೆ ವಾರ್ಷಿಕ ಆದಾಯ ರೂ. ೨.೫ ಲಕ್ಷ ಮತ್ತು ಇತರರಿಗೆ ರೂ.೧ ಲಕ್ಷದ ಆದಾಯ ಮಿತಿ ನಿಗದಿ ಗೊಳಿಸಲಾಗಿದೆ. ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳ ಸೇರ್ಪಡೆಗೆ ಕೆಟಗರಿ ೧ ಕ್ಕೆ ರೂ.೧ ಲಕ್ಷ ಮತ್ತು ಇತರರಿಗೆ ರೂ.೪೪,೫೦೦ ಮಿತಿ ನಿಗದಿ ಗೊಳಿಸಿರುತ್ತದೆ. ಈ ತಾರತಮ್ಯವನ್ನು ಹೋಗಲಾಡಿಸಿ ಮೆಟ್ರಿಕ್ ನಂತರದ ಆದಾಯ ಮಿತಿಯಂತೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೂ ಆದಾಯ ಮಿತಿಯನ್ನು ಹೆಚ್ಚಿಸಿ ಅವರ ವಿದ್ಯಾರ್ಜನೆಗೆ ಸಹಕರಿಸುವಂತೆ ಮನವಿ ಯಲ್ಲಿ ವಿನಂತಿಸಲಾಗಿದೆ.

ಪ್ಲಾಟಿಂಗ್ ಸಮಸ್ಯೆ‌ ನಿವಾರಿಸಿ
ತಾಲೂಕಿನೆಲ್ಲೆಡೆ ಪ್ಲಾಟಿಂಗ್ ಸಮಸ್ಯೆ ಇದ್ದು, ಕಡತ ವಿಲೇ ಆಗದೆ ಹಲವು ಬಾಕಿ ಇದ್ದು ಆ ಸಮಸ್ಯೆಯನ್ನು‌ ನಿವಾರಿಸಬೇಕು ಎಂದು ವಿನಂತಿಸಲಾಗಿದೆ.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ್, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪಿ.ಎಸ್. ಗಂಗಾಧರ್, ಪ್ರಮುಖರಾದ ಸದಾನಂದ ಮಾವಜಿ, ಸಿದ್ದೀಕ್ ಕೊಕ್ಕೊ, ಲಕ್ಷ್ಮಣ ಬೊಳ್ಳಾಜೆ ಮೊದಲಾದವರು ಇದ್ದರು.