ಲಸಿಗೆ ಹಾಕಿಸಿಕೊಳ್ಳಲು ಡಾ.ನಿತೀನ್ ಪ್ರಭು ಮಾಹಿತಿ
ಇತ್ತೀಚೆಗೆ ಮಂಗಳೂರು ಕಡಬ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಫಿಲೈನ್ ಪ್ಯಾನ್ ಲೊಕೋಪಿನಿಯ (Feline Panleukopenia) ಎಂಬ ಮಾರಕ ಕಾಯಿಲೆ ನೂರಕ್ಕೂ ಹೆಚ್ಚು ಬೆಕ್ಕುಗಳನ್ನು ಬಲಿ ತೆಗೆದುಕೊಂಡಿರುವ ಬಗ್ಗೆ ಹಲವಾರು ಆನ್ಲೈನ್ ಪತ್ರಿಕೆಗಳಲ್ಲಿ ವರದಿಯಾಗಿರುವುದು ಮುದ್ದು ಪ್ರಾಣಿಯಾದ ಬೆಕ್ಕುಗಳ ಮಾಲಕರಿಗೆ ತಲೆ ನೋವಾಗಿದೆ
ಫಿಲೈನ್ ಪ್ಯಾನ್ ಲೊಕೋಪಿನಿಯ ಎನ್ನುವುದು ಒಂದು ಫಿಲೈನ್ ಪಾರ್ವೋ ವೈರಸ್ ಎಂಬ ವೈರಸ್ ನಿಂದ ಉಂಟಾಗುವ ಕಾಯಿಲೆಯಾಗಿದ್ದು ಇದು ರೋಗಗ್ರಸ್ತ ಬೆಕ್ಕುಗಳಲ್ಲಿ ರಕ್ತದಲ್ಲಿರುವ ಬಿಳಿ ರಕ್ತ ಕಣಗಳನ್ನು ಕಡಿಮೆಗೊಳಿಸಿ ಬಿಳಿ ರಕ್ತ ಕಣಗಳ ಉತ್ಪಾದನೆಯನ್ನು ಗಣನೀಯವಾಗಿ ಕುಗ್ಗಿಸಿ ದೇಹದ ರೋಗನಿರೋಧಕ ಶಕ್ತಿಯನ್ನು ನಿಷ್ಕ್ರಿಯಗೊಳಿಸಿ ಬೆಕ್ಕುಗಳಲ್ಲಿ ಸಾವನ್ನು ತರುವ ರೋಗವಾಗಿರುತ್ತದೆ.
ಈ ರೋಗದ ಬಗ್ಗೆ ವಿವರಿಸುತ್ತಾ ಸುಳ್ಯದ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ. ನಿತಿನ್ ಪ್ರಭು ರವರು “ಈ ರೋಗವು ಅತ್ಯಂತ ಸಾಂಕ್ರಾಮಿಕವೂ ಮಾರಣಾಂತಿಕವೂ ಆದ ಬೆಕ್ಕುಗಳಿಗೆ ಮಾತ್ರ ಸಂಬಂಧಿಸಿದ ಕಾಯಿಲೆಯಾಗಿದ್ದು ಇದು ಫಿಲೈನ್ ಪಾರ್ವೋ ವೈರಸ್ ಎಂಬ ಒಂದು ವೈರಸ್ ನಿಂದ ಬರುವಂತಹ ರೋಗವಾಗಿರುತ್ತದೆ. ಈ ರೋಗವು ಯಾವುದೇ ಕಾರಣಕ್ಕೂ ಮನುಷ್ಯರಲ್ಲಿ ರೋಗವನ್ನುಂಟು ಮಾಡಲಾರದು. ಈ ವೈರಸ್ ಬೆಕ್ಕುಗಳ ದೇಹದಲ್ಲಿ ಅತ್ಯಂತ ವೇಗವಾಗಿ ಸಂತಾನಾಭಿವೃದ್ಧಿ ಹೊಂದುವ ಜೀವಕೋಶಗಳಾದ ಅಸ್ತಿಮಜ್ಜೆಯ, ಕರುಳಿನ ಒಳಪದರದ ಮತ್ತು ಯಕೃತ್ತಿನ ಜೀವಕೋಶಗಳಲ್ಲಿ ಬೆಳವಣಿಗೆ ಹೊಂದಿ ಆ ಜೀವಕೋಶಗಳನ್ನು ಕೊಲ್ಲುವುದರಿಂದ ದೇಹದಲ್ಲಿ ಬಿಳಿ ರಕ್ತ ಕಣಗಳ ಉತ್ಪಾದನೆ ಕಡಿಮೆಗೊಂಡು ರೋಗನಿರೋಧಕ ಶಕ್ತಿ ಕುಂಠಿತಗೊಳ್ಳುತ್ತದೆ. ಆದ್ದರಿಂದ ಶೇಕಡ 90ರಷ್ಟು ರೋಗಪೀಡಿತ ಬೆಕ್ಕುಗಳು ಸಾವನ್ನಪ್ಪುತ್ತವೆ. ಬೆಕ್ಕುಗಳಿಗೆ ಈ ರೋಗದ ವಿರುದ್ಧ ಕ್ಲಪ್ತ ಸಮಯದಲ್ಲಿ ಲಸಿಕೆ ಹಾಕಿಸುವುದೊಂದೇ ಈ ರೋಗವನ್ನು ತಡೆಯಲು ಇರುವ ಸೂತ್ರ. ಈ ರೋಗನಿರೋಧಕ ಲಸಿಕೆ ಸರ್ಕಾರದಿಂದ ಉಚಿತವಾಗಿ ಸರಬರಾಜು ಆಗುವುದಿಲ್ಲ ಜಾನುವಾರು ಮಾಲೀಕರು ಈ ರೋಗದ ಲಸಿಕೆಯ ದರವನ್ನು ತಾವೇ ಭರಿಸಬೇಕಾಗುತ್ತದೆ” ಎಂದಿದ್ದಾರೆ.
ಈ ವೈರಸ್ ವಿಶ್ವವ್ಯಾಪಿಯಾಗಿದ್ದು ಬೆಕ್ಕಿನ ಗೂಡುಗಳಲ್ಲಿ ಪೆಟ್ ಶಾಪ್ ಗಳಲ್ಲಿ ಮತ್ತು ಬೆಕ್ಕುಗಳು ಒಂದುಗೂಡುವ ಪ್ರದೇಶಗಳಲ್ಲಿ ಬಹಳ ಬೇಗ ಪ್ರಸರಣಗೊಳ್ಳುತ್ತದೆ. ಸಾಮಾನ್ಯವಾಗಿ ಈ ರೋಗವು 3-5 ತಿಂಗಳ ವಯೋಮಾನದ ಬೆಕ್ಕುಗಳಲ್ಲಿ ಅತ್ಯಂತ ಮಾರಣಾಧಿಕವಾಗಿದ್ದು, ಎಲ್ಲಾ ವಯಸ್ಸಿನ ಬೆಕ್ಕುಗಳಲ್ಲಿ ಕಂಡುಬರುತ್ತದೆ. ರೋಗಪೀಡಿತ ಬೆಕ್ಕುಗಳು ತಮ್ಮ ಮಲ, ಮೂತ್ರ, ಸಿಂಬಳ ಮತ್ತು ಮೂಗಿನಿಂದ ಬರುವ ಶ್ರಾವಗಳ ಮೂಲಕ ವೈರಾಣುವನ್ನು ಪರಿಸರಕ್ಕೆ ಚೆಲ್ಲುತ್ತವೆ. ಈ ವೈರಾಣು ಅತ್ಯಂತ ಸ್ಥಿರವಾಗಿದ್ದು ಪರಿಸರದಲ್ಲಿ ವರ್ಷಗಟ್ಟಲೆ ಯಾವುದೇ ಹಾನಿಯಾಗದೆ ಇರಬಲ್ಲದು. ಆದ್ದರಿಂದ ಲಸಿಕೆಗೆ ಒಳಪಡದಿರುವ ಆರೋಗ್ಯವಂತ ಬೆಕ್ಕುಗಳು ರೋಗಪೀಡಿತ ಬೆಕ್ಕುಗಳ ಸಂಪರ್ಕಕ್ಕೆ ಬರದಿದ್ದರೂ ಈ ರೋಗವನ್ನು ಪಡೆದುಕೊಳ್ಳಬಲ್ಲವು. ಬೆಕ್ಕುಗಳು ಮಲಗುವ ಹಾಸಿಗೆ, ಬೆಕ್ಕಿನ ಗೂಡು, ಆಹಾರದ ಬಟ್ಟಲುಗಳು ಮತ್ತು ಬೆಕ್ಕುಗಳನ್ನು ಮುಟ್ಟುವ ವ್ಯಕ್ತಿಗಳ ಕೈಯಿಂದ ಹಾಗೂ ಅವರ ಬಟ್ಟೆಗಳಿಂದಲೂ ಕೂಡ ಈ ರೋಗಾಣುಗಳು ಆರೋಗ್ಯವಂತ ಬೆಕ್ಕಿಗೆ ಹರಡಬಲ್ಲದು. ಆದ್ದರಿಂದ ರೋಗಗ್ರಸ್ತ ಬೆಕ್ಕನ್ನು ಸಾಧ್ಯವಾದಷ್ಟು ಆರೋಗ್ಯವಂತ ಬೆಕ್ಕುಗಳ ಸಂಪರ್ಕಕ್ಕೆ ಬರದಂತೆ ನೋಡಿಕೊಳ್ಳುವುದು ರೋಗ ತಡೆಗಟ್ಟುವಲ್ಲಿ ಪ್ರಮುಖ ಹೆಜ್ಜೆಯಾಗಿದೆ.
ಸಾಮಾನ್ಯವಾಗಿ ಈ ರೋಗ ಬಂದಂತಹ ಬೆಕ್ಕುಗಳು ಪ್ರಥಮವಾಗಿ ಖಿನ್ನತೆ, ಹಸಿವನ್ನು ಕಳೆದುಕೊಳ್ಳುವುದು, ಜ್ವರ, ಜಡವಾಗಿ ಬಿದ್ದುಕೊಳ್ಳುವುದು, ಅತಿಯಾದ ವಾಂತಿ, ವಿಪರೀತವಾದ ಭೇದಿ, ಮೂಗಿನಿಂದ ಅತಿಯಾದ ದ್ರವ ಸ್ರವಿಸುವುದು ಇಂತಹ ಲಕ್ಷಣಗಳನ್ನು ತೋರಿಸುತ್ತವೆ ಮತ್ತು ನಿರ್ಜಲೀಕರಣಕ್ಕೆ ಒಳಗಾಗುತ್ತವೆ. ನೀರು ಕುಡಿಯಬೇಕೆನಿಸಿದರು ಕುಡಿಯಲಾರವು. ಕೆಲವೊಮ್ಮೆ ಬಿಟ್ಟು ಬಿಟ್ಟು ಬರುವ ಜ್ವರ ಮತ್ತು ಮಾರಣಾಂತಿಕ ಸಂದರ್ಭಗಳಲ್ಲಿ ದೇಹದ ಉಷ್ಣಾಂಶ ಸಾಮಾನ್ಯಕ್ಕಿಂತ ಕೆಳಗಿಳಿಯುವುದು ಕಂಡುಬರುತ್ತದೆ. ಬೆಕ್ಕಿನ ಮರಿಗಳಲ್ಲಿ ಈ ರೋಗವು ಮೆದುಳು ಮತ್ತು ಕಣ್ಣನ್ನು ಕೂಡ ಹಾನಿಗೊಳಿಸುತ್ತದೆ.
8 ವಾರಕ್ಕಿಂತ ಸಣ್ಣಪ್ರಾಯದ ಬೆಕ್ಕಿನ ಮರಿಗಳು ಸಾಮಾನ್ಯವಾಗಿ ಎಷ್ಟೇ ತೀವ್ರ ನಿಗಾ ವಹಿಸಿ ಚಿಕಿತ್ಸೆ ನೀಡಿದರು ಚಿಕಿತ್ಸೆ ಫಲಕಾರಿಯಾಗುವುದಿಲ್ಲ. ಒಂದುವರೆ ವರ್ಷಕ್ಕಿಂತ ಜಾಸ್ತಿ ಪ್ರಾಯದ ಬೆಕ್ಕುಗಳು ಉತ್ತಮ ಚಿಕಿತ್ಸೆ ದೊರೆತರೆ ರೋಗದಿಂದ ಗುಣಮುಖವಾಗುವ ಸಾಧ್ಯತೆಗಳು ಇರುತ್ತವೆ. ಈ ರೋಗವನ್ನುಂಟು ಮಾಡುವ ವೈರಾಣುಗಳನ್ನು ಕೊಲ್ಲಲು ಯಾವುದೇ ಸೂಕ್ತವಾದ ಔಷಧಿ ಇಲ್ಲದಿರುವುದರಿಂದ ರೋಗಗ್ರಸ್ತ ಪ್ರಾಣಿಯ ರೋಗ ಲಕ್ಷಣಗಳಿಗನುಗುಣವಾಗಿ ಚಿಕಿತ್ಸೆ ನೀಡಬೇಕಾಗುತ್ತದೆ ಆದರೂ ಶೇಕಡ 90ರಷ್ಟು ರೋಗಪೀಡಿತ ಬೆಕ್ಕುಗಳು ಸಾವನ್ನಪ್ಪುತ್ತವೆ.
ರೋಗವನ್ನು ತಡೆಗಟ್ಟುವ ಮಾರ್ಗ
ಬೆಕ್ಕುಗಳಿಗೆ ಈ ರೋಗದ ವಿರುದ್ಧ ಲಸಿಕೆ ಹಾಕುವುದು ಒಂದೇ ಈ ರೋಗವನ್ನು ತಡೆಯಲು ಇರುವ ಮಾರ್ಗವಾಗಿದ್ದು, ಬೆಕ್ಕಿನ ಮರಿಗಳು ತಮ್ಮ 6-8ನೇ ವಾರ ವಯೋಮಾನದೊಳಗಾಗಿ ತಮ್ಮ ಮೊದಲ ಸುತ್ತಿನ ಲಸಿಕೆಯನ್ನು ಪಡೆದುಕೊಳ್ಳಬೇಕಾಗುತ್ತದೆ ನಂತರ ಬೂಸ್ಟರ್ ಲಸಿಕೆಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ದೊಡ್ಡ ವಯಸ್ಸಿನ ಬೆಕ್ಕುಗಳಲ್ಲಿ ಅವುಗಳ ವಯೋಮಾನಕ್ಕೆ ಅನುಗುಣವಾಗಿ ಲಸಿಕೆ ಡೋಸ್ ಗಳನ್ನು ನಿರ್ಧರಿಸಬೇಕಾಗುತ್ತದೆ.
ಈ ರೋಗಾಣು ಸಾಮಾನ್ಯವಾಗಿ ನಾವು ಮನೆಗಳಲ್ಲಿ ಬಳಸುವ ನಂಜುನಾಶಕ ಡಿಟರ್ಜೆಂಟ್ ಮತ್ತು ಕ್ರಿಮಿನಾಶಕಗಳಿಂದಲೂ ಕೂಡ ನಾಶ ಗೊಳ್ಳುವುದಿಲ್ಲ ಆದ್ದರಿಂದ ಈ ರೋಗಾಣು ಹರಡದಂತೆ ನೋಡಿಕೊಳ್ಳುವುದು ಮತ್ತು ಬೆಕ್ಕುಗಳಿಗೆ ಕಾಲಕಾಲಕ್ಕೆ ರೋಗನಿರೋಧಕ ಲಸಿಕೆಗಳನ್ನು ಹಾಕಿಸಿಕೊಳ್ಳುವುದು ಬಹಳ ಸೂಕ್ತ