ಇಂದು ವರಮಹಾಲಕ್ಷ್ಮಿ ಹಬ್ಬ…

0

ನೀವೂ ಪೂಜೆಯನ್ನು ಆಚರಿಸಿ, ಲಕ್ಷ್ಮಿ ಕೃಪಾಕಟಾಕ್ಷಕ್ಕೆ ಪಾತ್ರರಾಗಿ

ಹಬ್ಬ ಎಂದರೆ ಮನೆಯ ಮಹಿಳೆಯರಲ್ಲಿ ಅದೇನೋ ಒಂದು ರೀತಿಯ ಸಂತಸ. ಅದರಲ್ಲೂ ವರಮಹಾಲಕ್ಷ್ಮಿ ಹಬ್ಬವೆಂದರೆ, ಅತ್ಯಂತ ಸಂತೋಷ ಏಕಂದರೆ, ಬೇಡಿದ ವರವನ್ನು ನೀಡುತ್ತಾಳೆ ಎನ್ನುವ ಕಾರಣದಿಂದ ಮಹಿಳೆಯರಿಗೆ ಈ ಹಬ್ಬ ವಿಶೇಷ.

ಪುರುಷರು ಕೂಡ ಈ ವ್ರತವನ್ನು ಮಾಡಬಹುದು. ಅದರಲ್ಲೂ ದಂಪತಿ ಸಮೇತ ವರಮಹಾಲಕ್ಷ್ಮಿ ಪೂಜೆ ಮಾಡುವುದು ಉತ್ತಮ. ನೀವು ಆಪೀಸ್‌ಗಳಲ್ಲಿ, ಕೆಲಸ ಮಾಡುವ ಸ್ಥಳದಲ್ಲಿ, ವ್ಯಾಪಾರ, ಉದ್ಯೋಗದ ಸ್ಥಳದಲ್ಲಿ ಎಲ್ಲಿ ಬೇಕಾದರೂ ವರಮಹಾಲಕ್ಷ್ಮಿ ಪೂಜೆಯನ್ನು ಮಾಡಬಹುದು.


ಪುರಾಣದ ಕಥೆಯ ಪ್ರಕಾರ ಒಮ್ಮೆ ಕೈಲಾಸ ಪರ್ವತದಲ್ಲಿ ಸಭೆ ನಡೆಯುತ್ತಿರುತ್ತದೆ. ಆ ಸಂದರ್ಭದಲ್ಲಿ ಪಾರ್ವತಿ ದೇವಿಯು ಶಿವನನ್ನು ಕುರಿತು ಮಹಿಳೆಯರು ಯಾವುದಾದರೂ ವ್ರತವನ್ನು ಆಚರಿಸುವುದರಿಂದ ಅವರಿಗೆ ಅಭಿಷ್ಠೆ ಸಿದ್ಧಿ ಪ್ರಾಪ್ತವಾಗುತ್ತದೆಯೇ..? ಸುಮಂಗಲಿ ಭಾಗ್ಯ ಸಿಗುತ್ತದೆಯೇ..? ಎಂದು ಪ್ರಶ್ನೆಯನ್ನು ಕೇಳುತ್ತಾಳೆ. ಆಗ ಶಿವನು ಪಾರ್ವತಿಯನ್ನು ಕುರಿತು.. ಮಹಿಳೆಯರಿಗೆ ಅಭಿಷ್ಠೆಯನ್ನು ನೀಡುವ ಒಂದು ವ್ರತವಿದೆ. ಆ ವ್ರತವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದಲ್ಲಿ ಎರಡನೇ ಶುಕ್ರವಾರ ಅಥವಾ ಪೌರ್ಣಮಿಗೆ ಮೊದಲು ಬರುವ ಶುಕ್ರವಾರದಂದು ಆಚರಿಸಬೇಕು. ಈ ವ್ರತದಿಂದ ಸೌಭಾಗ್ಯ, ಸುಮಂಗಲ್ಯ ಯೋಗವನ್ನು ಬಯಸುವ ಸ್ತ್ರೀಯರು ಈ ವ್ರತವನ್ನು ಆಚರಿಸಿದರೆ ಉತ್ತಮ ಹಾಗೂ ನಿಶ್ಚಿತ ಫಲ ದೊರೆಯುತ್ತದೆ ಎಂದು ಶಿವನು ಉತ್ತರಿಸಿದನು.


ವರಮಹಾಲಕ್ಷ್ಮಿ ವ್ರತದಂದು 4 ವಸ್ತುಗಳನ್ನು ಮನೆಗೆ ತಂದರೆ ಆಗ ಪಾರ್ವತಿಯು ಮತ್ತೆ ಶಿವನನ್ನು ಕುರಿತು, ಈ ವ್ರತವನ್ನು ಆಚರಿಸಿ, ಸಂತೋಷವನ್ನು ಪಡೆದ ವ್ಯಕ್ತಿ ಇದ್ದಾರೆಯೇ ಎಂದು ಕೇಳುತ್ತಾಳೆ. ಆಗ ಶಿವನು ಚಾರುಮತಿ ಎನ್ನುವ ಸಂಪನ್ನ ಗುಣವುಳ್ಳ ಮಹಿಳೆಯ ಬಗ್ಗೆ ಹೇಳುತ್ತಾನೆ. ಒಮ್ಮೆ ಚಾರುಮತಿಯ ಕನಸಿನಲ್ಲಿ ಲಕ್ಷ್ಮಿ ದೇವಿಯು ಕಾಣಿಸಿಕೊಂಡು ನಿನಗೆ ಶುಭವನ್ನುಂಟು ಮಾಡಲು ವರಮಹಾಲಕ್ಷ್ಮಿ ಎನ್ನುವ ನಾನು ಬಂದಿದ್ದೇನೆ. ಶ್ರಾವಣ ಮಾಸದಲ್ಲಿ ಹುಣ್ಣಿಮೆಗೆ ಮುಂದೆ ಬರುವ ಶುಕ್ರವಾರ ನನ್ನನ್ನು ಆರಾಧಿಸು, ನಿನ್ನ ಇಷ್ಟಾರ್ಥಗಳೆಲ್ಲಾ ಈಡೇರುತ್ತದೆ ಎಂದು ಹೇಳಿದಳು. ಚಾರುಮತಿಯು ಈ ವ್ರತವನ್ನು ಆಚರಿಸಿ ಫಲವನ್ನು ಪಡೆದುಕೊಂಡಳು.

ಆಗಸ್ಟ್‌ 25 ರಂದು ಆಚರಿಸಲಾಗುವ ವರಮಹಾಲಕ್ಷ್ಮಿ ಹಬ್ಬದ ಪೂಜೆಗಾಗಿ ನಾವು ಹಿಂದಿನ ದಿನದಿಂದಲೇ ತಯಾರಿ ಮಾಡಿಕೊಳ್ಳಬಹುದು. ಅಂದರೆ, ಪೂಜೆಗಾಗಿ ನಾವು ಮಂಟಪ ತಯಾರಿ ಮಾಡಿಕೊಳ್ಳುವುದು, ಮಣೆ ತಯಾರಿ ಮಾಡುವುದು, ಲಕ್ಷ್ಮಿ ಅಲಂಕಾರ, ಕಲಶ ಸ್ಥಾಪನೆ ಮಾಡಬಹುದು.
ವರಮಹಾಲಕ್ಷ್ಮಿ ಹಬ್ಬದ ದಿನದಂದೇ ಇವುಗಳನ್ನೆಲ್ಲಾ ಮಾಡಬೇಕು.
ಹೊಸ ಬಟ್ಟೆಯನ್ನು ಧರಿಸಬೇಕೆಂದಿಲ್ಲ. ಕಲಶಕ್ಕೆ ಮಾತ್ರ ಹೊಸ ಬಟ್ಟೆಯನ್ನು ತಂದು ಅಲಂಕಾರ ಮಾಡಬೇಕೂ. ಪೂಜೆ ಮಾಡುವವರು ಒಗೆದ, ಶುದ್ಧವಾದ ಕಾರ್ಪಾಸ ವಸ್ತ್ರ ಅಂದರೆ, ಹತ್ತಿಯ ಬಟ್ಟೆಯನ್ನು ಧರಿಸಿ ಪೂಜೆಯನ್ನು ಮಾಡಬೇಕು.

ಕಲಶವನ್ನು ನೀರು, ಅಕ್ಕಿ ಮತ್ತು ಒಣ ಹಣ್ಣುಗಳಂತಹ ನೈವೇದ್ಯಗಳಿಂದ ತುಂಬಿಸಿ. ಕಲಶದೊಳಗೆ ನೀವು ಇವುಗಳನ್ನು ಹೊರತು ಪಡಿಸಿ ವೀಳ್ಯದೆಲೆಗಳು, ಅಡಿಕೆ, ನಾಣ್ಯಗಳು ಮತ್ತು ಖರ್ಜೂರ, ಬಳೆಗಳು, ಬಾಚಣಿಗೆ ಅಥವಾ ಲಕ್ಷ್ಮಿ ದೇವಿಗೆ ಪ್ರಿಯವಾದ ಯಾವುದೆ ರೀತಿಯ ವಸ್ತುಗಳನ್ನು ಕೂಡ ಹಾಕಬಹುದು.


ಕಲಶದ ಮೇಲ್ಭಾಗದಲ್ಲಿ 5 ಮಾವಿನ ಎಲೆಗಳನ್ನಿಟ್ಟು ಕಲಶದ ಬಾಯಿಯನ್ನು ಮುಚ್ಚಿ. ಈ ಮಾವಿನ ಎಲೆಗಳ ತುದಿಯು ನೆಲದತ್ತ ಮುಖ ಮಾಡಿರಬೇಕು. ಅಂದರೆ, ಕಲಶದ ಕೆಳ ಭಾಗದತ್ತ ಮುಖ ಮಾಡಿರಬೇಕು. ಈ 5 ಮಾವಿನ ಎಲೆಗಳು 5 ಇಂದ್ರಿಯಗಳನ್ನು ಪ್ರತಿನಿಧಿಸುತ್ತದೆ.

ಮಾವಿನ ಎಲೆಗಳಿಂದ ಕಲಶದ ಬಾಯಿಯನ್ನು ಮುಚ್ಚಿದ ನಂತರ, ಮಾವಿನ ಎಲೆಗಳ ಮೇಲೆ ತೆಂಗಿನಕಾಯಿಯನ್ನು ಇರಿಸಿ. ತೆಂಗಿನಕಾಯಿಯ ಜುಟ್ಟಿರುವ ಭಾಗ ಮೇಲಕ್ಕೆ ಮುಖ ಮಾಡಿರಬೇಕು. ತೆಂಗಿನಕಾಯಿಯನ್ನು ಹಿಂದೂ ಸಂಸ್ಕೃತಿಗಳಲ್ಲಿ ಅತ್ಯಂತ ಪರಿಶುದ್ಧ ಫಲ ಎಂದು ಪರಿಗಣಿಸಲಾಗುತ್ತದೆ ಮತ್ತು ಲಕ್ಷ್ಮಿ ದೇವಿಗೆ ಪ್ರಿಯವಾದ ಫಲ ಕೂಡ ಇದಾಗಿದೆ.
ತೆಂಗಿನಕಾಯಿಯ ಮೇಲೆ ಅರಿಶಿನದ ಪೇಸ್ಟ್‌ನಿಂದ ಲಕ್ಷ್ಮಿಯ ಮುಖವನ್ನು ಬಿಡಿಸಿ. ಅರಿಶಿನವನ್ನು ಭಾರತೀಯ ಸಂಸ್ಕೃತಿಯಲ್ಲಿ ಪವಿತ್ರವೆಂದು ಪರಿಗಣಿಸುತ್ತಾರೆ. ಅರಿಶಿನವನ್ನು ತೆಂಗಿನಕಾಯಿಗೆ ಹಚ್ಚಿದ ನಂತರ ಆ ತೆಂಗಿನಕಾಯಿಗೆ ದಾರದ ಸಹಾಯದಿಂದ ಲಕ್ಷ್ಮಿ ದೇವಿಯ ಮುಖವಾಡವನ್ನು ಕಟ್ಟಿ. ನೀವು ಬೆಳ್ಳಿಯ ಲಕ್ಷ್ಮಿ ಮುಖವಾಡವನ್ನು ಅಥವಾ ಲಕ್ಷ್ಮಿ ದೇವಿಯ ಚಿತ್ರವಿರುವ ನಾಣ್ಯವನ್ನು ಕೂಡ ಇದಕ್ಕೆ ಬಳಸಬಹುದು.
ಕಲಶದ ಬಾಯಿಗೆ ತಂತಿ ಅಥವಾ ಕೋಲನ್ನು ಬಿಗಿಯಾಗಿ ಕಟ್ಟಿ. ಕೋಲಿನ ತುದಿಗಳು ಹೊರಕ್ಕೆ ಚಾಚುವಂತೆ ಕೋಲು ಕಲಶಕ್ಕಿಂತ ಹೆಚ್ಚು ಅಗಲ ಅಥವಾ ಉದ್ದವಾಗಿರಬೇಕು.

ಕೆಂಪು ಅಥವಾ ಹಸಿರು ಬಣ್ಣದ ರೇಷ್ಮೆ ಸೀರೆಯನ್ನು ಆರಿಸಿ. ಲಕ್ಷ್ಮಿಯು ಸೌಭಾಗ್ಯಯುತ ಮಹಿಳೆಯರನ್ನು ಪ್ರತಿನಿಧಿಸುವುದರಿಂದ, ಮದುವೆಯ ಸಾಮಾನ್ಯ ಬಣ್ಣಗಳಾದ ಕೆಂಪು ಅಥವಾ ಹಸಿರು ಬಣ್ಣದ ಸೀರೆಯನ್ನು ಪೂಜೆಗಾಗಿ ಆಯ್ದುಕೊಳ್ಳಿ. ನಂತರ ನೆರಿಗೆಗಳನ್ನು ಮಾಡಿ ಕಲಶಕ್ಕೆ ಸೀರೆಯನ್ನು ಉಡಿಸಿ.
ಲಕ್ಷ್ಮಿ ದೇವಿಯ ಕೊರಳಿಗೆ ಮಂಗಳ ಸೂತ್ರವನ್ನು ಹಾಕಿ. ಇದು ಲಕ್ಷ್ಮಿ ಮತ್ತು ಅವಳ ಪತಿ ವಿಷ್ಣುವಿನಂತೆಯೇ ಪುರುಷ ಮತ್ತು ಸ್ತ್ರೀ ನಡುವಿನ ಒಕ್ಕೂಟವನ್ನು ಸಂಕೇತಿಸುತ್ತದೆ.
ವಿಗ್ರಹವನ್ನು ಚಿನ್ನದ ಆಭರಣಗಳಿಂದ ಅಲಂಕರಿಸಿ. ಆರಾಧನೆಯ ಸಂಕೇತವಾಗಿ ಕಲಶದ ಸುತ್ತಲೂ ಹೂವಿನ ಮಾಲೆಗಳನ್ನು ಹೊದಿಸಿ. ಮಲ್ಲಿಗೆ, ಗುಲಾಬಿಗಳು ಅಥವಾ ಲಿಲ್ಲಿಗಳಂತಹ ಸುಂದರವಾದ ಪರಿಮಳವನ್ನು ಹೊಂದಿರುವ ಹೂವುಗಳನ್ನು ಅಲಂಕಾರಕ್ಕೆ ಆಯ್ದುಕೊಳ್ಳಿ. ಲಕ್ಷ್ಮಿ ದೇವಿಯು ಕಮಲದ ಹೂವುಗಳನ್ನು ಹೆಚ್ಚಾಗಿ ಇಷ್ಟಪಡುವುದರಿಂದ ಪೂಜೆಯಲ್ಲಿ ಈ ಹೂವನ್ನು ಬಳಸಿ.

ವರಮಹಾಲಕ್ಷ್ಮಿ ದೇವಿಗೆ ಪ್ರಿಯವಾದ ನೈವೇದ್ಯವನ್ನು ಇಂದು ದೇವಿಗೆ ಅರ್ಪಿಸಬೇಕು.
ಹೆಸರು ಬೇಳೆ ಮತ್ತು ಪಾನಕ ಇದನ್ನು ದೇವಿಗೆ ಅರ್ಪಿಸಬೇಕು. ನಂತರ ಆಕೆಗೆ ಹೋಳಿಗೆ, ಲಡ್ಡು, ಕಡಬು, ಬೆಲ್ಲ ಮತ್ತು ಸಕ್ಕರೆ ಮಿಶ್ರಿತವಾದ ಖಾದ್ಯ, ಹರಿದ್ರಾನ್ನವನ್ನು ನೈವೇದ್ಯವಾಗಿ ನೀಡಬೇಕು. ಹಾಗೂ ವರ ಲಕ್ಷ್ಮಿಯನ್ನು ವಿಸರ್ಜನೆ ಮಾಡುವಾಗ ನೀವು ವಿಶೇಷವಾಗಿ ದಧ್ಯಾನ್ನವನ್ನು ಅಂದರೆ ಮೊಸರವನ್ನು ನೈವೇದ್ಯವನ್ನು ಮಾಡಿ ದೇವಿಯನ್ನು ಬೀಳ್ಕೊಡಬೇಕು.
ಈ ದಿನ ಲಕ್ಷ್ಮಿ ದೇವಿಯ ಆಶೀರ್ವಾದಕ್ಕಾಗಿ ವರಮಹಾಲಕ್ಷ್ಮಿ ವ್ರತವನ್ನು ಮಾಡಿದರೆ, ಇನ್ನು ಕೆಲವರು ಕೇವಲ ಪೂಜೆಯನ್ನು ಮಾತ್ರ ಮಾಡುತ್ತಾರೆ. ಕಲಶಕ್ಕೆ ಸೀರೆ ಉಡಿಸಿ ಅಲಂಕಾರ ಮಾಡಿ, ತುಪ್ಪದ ದೀಪವನ್ನು ಅಥವಾ ಎಳ್ಳೆಣ್ಣೆಯ ದೀಪವನ್ನು ಬೆಳಗಿ, ನೈವೇದ್ಯವನ್ನು ಅರ್ಪಿಸಿ, ದೇವಿಯ ಮುಂದೆ ನಾಣ್ಯ ಅಥವಾ ನೋಟುಗಳನ್ನು, ಚಿನ್ನ – ಬೆಳ್ಳಿಯನ್ನಿಟ್ಟು ಪೂಜೆ ಮಾಡುವ ಪದ್ಧತಿಯಿದ್ದರೆ ಈ ರೀತಿಯಲ್ಲೇ ಪೂಜೆ ಮಾಡಬಹುದು.

ಕಲಶವನ್ನಿಟ್ಟು ವ್ರತ ಮಾಡುವುದಾದರೆ ಆ ವ್ರತವನ್ನು ವಿಧಿ – ವಿಧಾನಗಳ ಪ್ರಕಾರ, ನಿಯಮಾನುಸಾರ ಮಾಡಬೇಕು. ಹಾಗೂ ಲಕ್ಷ್ಮಿ ಅಷ್ಟೋತ್ತರ ಶತನಾಮಾವಳಿಯನ್ನು ಪಠಿಸಿ, ದೇವಿಗೆ ಹೂವಿನಾರ್ಚನೆ ಮತ್ತು ಕುಂಕುಮಾರ್ಚನೆ ಮಾಡಿ ಬಳಿಕ ವಿಶೇಷವಾಗಿ ತಾಯಿಗೆ ಧೂಪ-ದೀಪದಿಂದ ಮಂಗಳಾರತಿಯನ್ನು ಮಾಡಿ ಪೂಜೆಯಲ್ಲಿ ದೇವಿಗೆ ಅರ್ಪಿಸಿದ ಅರಿಶಿನ, ಕುಂಕುಮವನ್ನು ನೀವೂ ಇಟ್ಟುಕೊಂಡು, ಮನೆಗೆ ಈ ದಿನ ಮುತ್ತೈದೆಯರನ್ನು ಆಹ್ವಾನಿಸಿ ಅವರಿಂದ ಆಶೀರ್ವಾದವನ್ನು ತೆಗೆದುಕೊಳ್ಳಬೇಕು. ಮನೆಗೆ ಆಹ್ವಾನಿಸಿದ ಮುತ್ತೈದೆಯರಿಗೆ ನಿಮ್ಮ ಶಕ್ತಿಯನುಸಾರ ಸೌಭಾಗ್ಯದ ಸಂಕೇತವಾದ ಬಳೆ, ಅರಿಶಿನ, ಕುಂಕುಮ, ಬ್ಲೌಸ್‌ ಪೀಸ್‌, ಸೀರೆಯನ್ನು ನೀಡಿ ಗೌರವಿಸಿ, ಬಳಿಕೆ ದೇವಿಗೆ ಅರ್ಪಿಸಿದ ನೈವೇದ್ಯವನ್ನು ಇವರಿಗೂ ಪ್ರಸಾದದ ರೂಪದಲ್ಲಿ ನೀಡಬಹುದು.

ನಮಸ್ತೇಸ್ತು ಮಹಾಮಾಯೇ ಶ್ರೀ ಪೀಠೇ ಸುರಪೂಜಿತೇ ಶಂಖಚಕ್ರಗದಾಹಸ್ತೇ ಮಹಾಲಕ್ಷ್ಮೀ ನಮೋಸ್ತುತೇ | ಶ್ರಾವಣ ಮಾಸದ ಶುಭ ಶುಕ್ರವಾರ ಲಕ್ಷ್ಮೀ ದೇವಿಯ ಕೃಪಾಕಟಾಕ್ಷ ನಮ್ಮೆಲ್ಲರ ಮೇಲೆ ಬೀಳಲಿ..

ಸರ್ವರಿಗೂ ಸುದ್ದಿ ಬಳಗದ ವತಿಯಿಂದ ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು..