ಶಾಂತಿನಗರದ ಬಾಲಕ ಶ್ರೀಜಿತ್ ಮೃತಪಟ್ಟ ಘಟನೆ: ಪುತ್ತೂರಿನಲ್ಲಿ ದಲಿತ್ ಸೇವಾ ಸಮಿತಿ ಪ್ರತಿಭಟನೆ

0

ಮೃತ ಯುವಕನ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಲು, ವೈದ್ಯರನ್ನು ಸೇವೆಯಿಂದ ವಜಾಗೊಳಿಸಲು ಆಗ್ರಹ

ಹೊಟ್ಟೆ ನೋವಿನ ಅನಾರೋಗ್ಯದಿಂದ ಪುತ್ತೂರು ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಳ್ಯ ಶಾಂತಿನಗರ ನಿವಾಸಿ ಶ್ರೀಜಿತ್ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣವೆಂದು ಆರೋಪಿಸಿ ವೈದ್ಯರನ್ನು ತಕ್ಷಣ ಬಂಧಿಸಬೇಕು ಮತ್ತು ನೊಂದ ಕುಟುಂಬಕ್ಕೆ ಸರಕಾರ ರೂ.25ಲಕ್ಷ ಪರಿಹಾರ ಕೊಡಿಸಬೇಕೆಂದು ಆಗ್ರಹಿಸಿ ದ.ಕ.ದಲಿತ್ ಸೇವಾ ಸಮಿತಿಯಿಂದ ಪುತ್ತೂರು ಕಿಲ್ಲೇ ಮೈದಾನದ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಪ್ರತಿಭಟನೆ ನಡೆಯಿತು.

ಪ್ರತಿಭಟನಾ ಸಭೆಯಲ್ಲಿ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕ ಅಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು ಮಾತನಾಡಿ ’11 ದಿನಗಳ ಹಿಂದೆ ಪುತ್ತೂರು ಚೇತನಾ ಆಸ್ಪತ್ರೆಯಲ್ಲಿ ಹೊಟ್ಟೆನೋವೆಂದು ದಾಖಲಾದ ಸುಳ್ಯ ತಾಲೂಕಿನ ಶ್ರೀಜಿತ್ ಎಂಬ ಯುವಕನಿಗೆ ಸರ್ಜರಿ ಮಾಡಿದ ಸಮಯದಲ್ಲಿ ವೆಂಟಿಲೇಟರ್ ಇಲ್ಲದೆ ಬೇರೆ ಆಸ್ಪತ್ರೆಗೆ ಕಳುಹಿಸಿಕೊಡುವ ಸಮಯದಲ್ಲಿ ಶ್ರೀಜಿತ್ ಮೃತಪಟ್ಟಿದ್ದರು. ಈ ಕುರಿತು ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ಧ ಯುವಕನ ಚಿಕ್ಕಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ. ಬಡ ಯುವಕ ಎಂದು ಗೊತ್ತಿದ್ದರೂ ಆಸ್ಪತ್ರೆಯ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿ ಯುವಕನ ಸಾವಿಗೆ ಕಾರಣವಾಗಿದೆ.ಈ ನಿಟ್ಟಿನಲ್ಲಿ ಆಡಳಿತ ಮಂಡಳಿಯ ವಿರುದ್ಧ ಯುವಕನ ಚಿಕ್ಕಪ್ಪ ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಮಾಡಬೇಕು ಮತ್ತು ಸರಿಯಾದ ದಿಕ್ಕಿನಲ್ಲಿ ತನಿಖೆ ಮಾಡಬೇಕೆಂದು ಆಗ್ರಹಿಸಿದರು. ಒಂದು ಕಡೆ ಆರೋಗ್ಯ ಇಲಾಖೆಯವರು ತನಿಖೆ ಮಾಡುತ್ತಿದ್ದಾರೆಂಬ ಮಾಹಿತಿ ಬಂದಿದೆ.ಈ ನಡುವೆ ನಾವು ಯುವಕನ ಕುಟುಂಬಕ್ಕೆ ರೂ. 25ಲಕ್ಷ ಪರಿಹಾರ ಕೇಳಿ ತಹಶೀಲ್ದಾರ್‌ಗೆ ಮನವಿ ಮಾಡಿದ್ದೇವೆ. ತಹಶೀಲ್ದಾರ್ ಅದನ್ನು ಸಹಾಯಕ ಆಯುಕ್ತರಿಗೆ ಕಳುಹಿಸಿದ್ದಾರೆ. ಆದಷ್ಟು ಬೇಗ ಪೊಲೀಸ್ ಇಲಾಖೆ,ಆರೋಗ್ಯ ಇಲಾಖೆ, ನ್ಯಾಯಾಂಗ ಇಲಾಖೆ ಯುವಕನ ಸಾವಿಗೆ ಸೂಕ್ತ ನ್ಯಾಯ ಒದಗಿಸುವಂತೆ ಅವರು ಒತ್ತಾಯಿಸಿದರು.

ಮಾದಿಗ ಸಮಾಜದ ರಾಜ್ಯ ಸಮಿತಿಯ ಖಜಾಂಚಿ ಮುನಿರಾಜು ಅವರು ಮಾತನಾಡಿ ಆಸ್ಪತ್ರೆಯಿಂದ ಸಾರ್ವಜನಿಕರಿಗೆ ಆದ ಅನ್ಯಾಯ ಶ್ರೀಜಿತ್ ಅವರ ಸಾವಿನಲ್ಲಿ ಕೊನೆಯಾಗಬೇಕು.ಇಲ್ಲವಾದಲ್ಲಿ ಮುಂದಿನ ದಿನ ರಾಜ್ಯದ ಮೂಲೆ ಮೂಲೆಗೂ ಪ್ರತಿಭಟನೆಯ ಕಾವು ಏರಲಿದೆ. ಬೆಂಗಳೂರಿನಲ್ಲೂ ಪ್ರತಿಭಟನೆ ಮಾಡಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುಂದರ ಪಾಟಾಜೆ, ದಲಿತ್ ಸೇವಾ ಸಮಿತಿ ತಾಲೂಕು ಸಮಿತಿ ಅಧ್ಯಕ್ಷ ಬಿ.ಕೆ.ಅಣ್ಣಪ್ಪ ಕಾರೆಕ್ಕಾಡು ಅವರು ಪ್ರತಿಭಟನೆಯಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಠಾಣೆಯ ಪಿಎಸ್ಐ ರಾಮ ನಾಯಕ್ ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿ ಮೇಲಧಿಕಾರಿಗಳ ಗಮನಕ್ಕೆ ಈ ವಿಷಯವನ್ನು ತಿಳಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಪ್ರತಿಭಟನಾ ಸಂದರ್ಭದಲ್ಲಿ ಮೃತ ಶ್ರೀಜಿತ್ ಅವರ ಚಿಕ್ಕಪ್ಪ ಚಂದ್ರಶೇಖರ್,ಸಂಬಂಧಿ ಸುಮತಿ ಬೆಟ್ಟಂಪಾಡಿ, ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಚಂದ್ರಶೇಖರ್,ಜಿಲ್ಲಾ ಸಮಿತಿಯ ಲೋಕೇಶ್ ತೆಂಕಿಲ,ತಾಲೂಕು ಸಮಿತಿ ಅಧ್ಯಕ್ಷ ಅಣ್ಣಪ್ಪ ಕಾರೆಕ್ಕಾಡು, ಸಂಘಟನೆಯ ಮುಖಂಡರುಗಳು, ಕಾರ್ಯಕರ್ತರು,ಮಾದಿಗ ಸಮಾಜದ ಬಾಂಧವರು ಉಪಸ್ಥಿತರಿದ್ದರು.