ಸುಳ್ಯ ಲಯನ್ಸ್ ಕ್ಲಬ್ ನಿಂದ ಕೊಡಿಯಾಲಬೈಲ್ ಶಾಲೆ ದತ್ತು ಸ್ವೀಕಾರ

0

ಅಡಿಕೆ ತೋಟ, ತೆಂಗು, ಹಣ್ಣಿನ ತೋಟ ನಿರ್ಮಾಣ

ಆ.28 ರಂದು ಕಾರ್ಯ ಆರಂಭ

ಸುಳ್ಯ ಲಯನ್ಸ್ ಕ್ಲಬ್ ವತಿಯಿಂದ ಸುಳ್ಯ ಕೊಡಿಯಾಲಬೈಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಸ್ವೀಕರಿಸಿ, ಶಾಲೆಯ ಸ್ಥಳದಲ್ಲಿ ತೆಂಗು, ಅಡಿಕೆ ತೋಟ ಮತ್ತು ಹಣ್ಣಿನ ತೋಟವನ್ನು ರಚನೆ ಮಾಡಲಾಗುವುದು. ಆ.28ರಂದು ಈ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ ” ಎಂದು ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್‌ ತಿಳಿಸಿದ್ದಾರೆ.
ಸುಳ್ಯ ಪ್ರೆಸ್‌ ಕ್ಲಬ್‌ನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಯೋಜನೆಯ ವಿವರ ನೀಡಿದ ಅವರು ” 50 ವರ್ಷ ಪೂರೈಸಿದ ಸುಳ್ಯ ಲಯನ್ಸ್ ಕ್ಲಬ್ ಅನೇಕ ಜನಪರ ಸಮಾಜ ಸೇವಾ ಕಾರ್ಯಕ್ರಮಗಳೊಂದಿಗೆ ಜನಮಾನಸದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಈ ವರ್ಷ 51ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಲಯನ್ಸ್ ಸಂಸ್ಥೆ ಹೊಸ ಯೋಜನೆ ರೂಪಿಸುವ ದೃಷ್ಟಿಯಿಂದ ಸರಕಾರಿ ಶಾಲೆಯೊಂದನ್ನು ದತ್ತು ಪಡೆದು ಅದರ ಅಭಿವೃದ್ಧಿಗೆ ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ಸುಳ್ಯ ಕೊಡಿಯಾಲಬೈಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಆಯ್ಕೆ ಮಾಡಿ ಆ ಶಾಲೆಗೆ ಲಭ್ಯವಿರುವ 2.30 ಎಕ್ರೆ ಸ್ಥಳದಲ್ಲಿ 300 ಅಡಿಕೆ ಸಸಿ ಹಾಗೂ 10 ತೆಂಗಿನ ಗಿಡಗಳನ್ನು ನೆಟ್ಟು 4 ವರ್ಷಗಳ ಕಾಲ ಪೋಷಣೆ ಮಾಡಿ ಶಾಲಾಭಿವೃದ್ಧಿ ಸಮಿತಿಗೆ ಹಸ್ತಾಂತರ ಮಾಡಲಾಗುವುದು. ನೆಲ ಸಮತಟ್ಟು ಕಾರ್ಯ ಮತ್ತು ನೀರಿನ ಸಂಪರ್ಕಕ್ಕೆ ಸ್ಪ್ರಿಂಕ್ಲರ್ ಅಳವಡಿಸಲಾಗಿದೆ. ಆ.28 ರಂದು ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು” ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಚಾಲನೆ ನೀಡುವರು. ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ ಕೆ. ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಟನಿ ಎಸ್. ಮರಿಯಪ್ಪ ಮತ್ತು ಲಯನ್ಸ್ ಮುಖ್ಯ ಜಿಲ್ಲಾ ಗ್ಲೋಬಲ್ ಸರ್ವಿಸ್ ಬ್ಯಾಂಕಿನ ಕೋ ಆರ್ಡಿನೇಟರ್ ಜಗದೀಶ ಎಡಪಡಿತ್ತಾಯ ಮುಖ್ಯ ಅತಿಥಿಗಳಾಗಿ ಆಗಮಿಸಲಿರುವರು.
ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ ಸೂಂತೋಡು, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ ಬಿ.ಇ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಕೆ.ಎಂ.ರಮೇಶ, ಲಯನ್ ಪ್ರಾಂತ್ಯ VII ರ ಪ್ರಾಂತೀಯ ಅಧ್ಯಕ್ಷೆ ರೇಣುಕಾ ಸದಾನಂದ ಜಾಕೆ, ಮಧುಸೂದನ್ ಕಸ್ತೂರಿ ನರ್ಸರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಚಂದ್ರಕಲಾ ಉಪಸ್ಥಿತರಿರುವರು.

ಗ್ರಾಮ ಪಂಚಾಯತ್ ಉಬರಡ್ಕ, ಶಾಲಾ ಅಭಿವೃದ್ಧಿ ಸಮಿತಿ ಮತ್ತು ಪೋಷಕ ಸಮಿತಿ, ಶಿಕ್ಷಣ ಇಲಾಖೆ, ತೋಟಗಾರಿಕೆ ಇಲಾಖೆ, ವಿಷ್ಣು ಯುವಕ ಮಂಡಲ, ವರಲಕ್ಷ್ಮಿ ಯುವತಿ ಮಂಡಲ, ಹಳೆ ವಿದ್ಯಾರ್ಥಿ ಸಂಘ, ಸ್ಥಳೀಯ ವಿಷ್ಣುಮೂರ್ತಿ ಒತ್ತೆಕೋಲ ಸಮಿತಿ, ಮಹಮ್ಮಾಯಿ ಸಂಘ ಮತ್ತು ಇತರ ಸಂಘ ಸಂಸ್ಥೆಗಳು, ಇವರು ಪೂರ್ಣ ಸಹಕಾರ ನೀಡಿದ್ದಾರೆ ಎಂದರು.

ಶಾಲೆಗೆ ನಿರಂತರ ಆದಾಯ ಕಲ್ಪಿಸುವುದು. ಒಂದು ಮಾದರಿ ಸರಕಾರಿ ಶಾಲೆಯನ್ನು ರೂಪಿಸುವುದು ನಮ್ಮ ಉದ್ದೇಶವಾಗಿದೆ. ತಾಲೂಕಿನ ಅನೇಕ ಸರಕಾರಿ ಶಾಲೆಗಳಿಗೆ ಸ್ಥಳ ಲಭ್ಯವಿದ್ದು, ಇಂತಹ ಯೋಜನೆಗಳನ್ನು ಸಾರ್ವಜನಿಕರು ಸ್ಥಳೀಯ ಸಂಘ, ಸಂಸ್ಥೆಗಳು ಕೈಗೊಳ್ಳಲು ಪ್ರೇರಣೆಯಾಗಬಹುದು. ಜೊತೆಗೆ ಮಕ್ಕಳಲ್ಲಿಯೂ ಕೃಷಿ ಆಸಕ್ತಿ ಮೂಡಲು ಸಹಕಾರಿಯಾಗುತ್ತದೆ ಎಂದು ವೀರಪ್ಪ ಗೌಡರು ಹೇಳಿದರು.
ಯೋಜನಾ ನಿರ್ದೇಶಕ ಹರೀಶ್ ಉಬರಡ್ಕ ಮಾತನಾಡಿ, ಶಾಲೆಗೆ ಇರುವ ಎರಡೂವರೆ ಎಕ್ರೆ ಜಾಗದಲ್ಲಿ ಒಂದು ಎಕ್ರೆಯಲ್ಲಿ ಅಡಿಕೆ ತೋಟ ಮಾಡುತ್ತಿದ್ದೇವೆ. ಸುಮಾರು ಮುಕ್ಕಾಲು ಎಕ್ರೆ ಜಾಗದಲ್ಲಿ ವಿವಿಧ ರೀತಿಯ ಹಣ್ಣಿನ ತೋಟ ರಚನೆಯ ಯೋಜನೆ ಇದೆ. ನಾಲ್ಕು ವರ್ಷದ ಬಳಿಕ ತೋಟ ನಿರ್ವಹಣೆಗೆ ಹಳೆವಿದ್ಯಾರ್ಥಿಗಳನ್ನೊಳಗೊಂಡ ಸಮಿತಿ ರಚಿಸುವ ಚಿಂತನೆಯೂ ಇದೆ” ಎಂದರು.
ಲಯನ್ ಪ್ರಾಂತೀಯ ಅಧ್ಯಕ್ಷೆ ರೇಣುಕಾ ಸದಾನಂದರು ಮಾತನಾಡಿ, ವೀರಪ್ಪ ಗೌಡರ ಅಧ್ಯಕ್ಷತೆಯಲ್ಲಿ ಕ್ಲಬ್ ಅತ್ಯತ್ತಮ ಯೋಜನೆಗಳನ್ನು ರೂಪಿಸುತ್ತಿದೆ ಎಂದರು.
ಲಯನ್ಸ್ ಕ್ಲಬ್ ಕಾರ್ಯದರ್ಶಿ ದೊಡ್ಡಣ್ಣ ಬರೆಮೇಲು, ಕೋಶಾಧಿಕಾರಿ ಕಿರಣ್ ನೀರ್ಪಾಡಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಸುದ್ದಿಗೋಷ್ಠಿಯಲ್ಲಿ ಲಯನ್ಸ್ ಕ್ಲಬ್‌ ಕಾರ್ಯದರ್ಶಿ ದೊಡ್ಡಣ್ಣ ಬರಮೇಲು, ಕೋಶಾಧಿಕಾರಿ ಕಿರಣ್ ನೀರ್ಪಾಡಿ, ಪ್ರಾಂತೀಯ ಅಧ್ಯಕ್ಷೆ ರೇಣುಕಾ ಸದಾನಂದ ಜಾಕೆ, ಯೋಜನಾ ನಿರ್ದೇಶಕ ಹರೀಶ್ ಉಬರಡ್ಕ ಉಪಸ್ಥಿತರಿದ್ದರು.