ಕಸ್ತೂರಿ ರಂಗನ್ ವರದಿ ಬಗ್ಗೆ ಮತ್ತೆ ಗಿಮಿಕ್ ಆರಂಭಿಸಿರುವ ಬಿ.ಜೆ.ಪಿ.
ರಾಜ್ಯ ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಗೆ ಆ.30 ರಂದು ಚಾಲನೆ- ಸುಳ್ಯದಲ್ಲೂ ಫಲಾನುಭವಿಗಳ ಸಭೆ
ಪತ್ರಿಕಾಗೋಷ್ಠಿಯಲ್ಲಿ ಎಂ.ವೆಂಕಪ್ಪ ಗೌಡರಿಂದ ವಿವರಣೆ
ಕಾಂಗ್ರೆಸ್ ನಾಯಕ ಎಂ.ವೆಂಕಪ್ಪ ಗೌಡರು ಮತ್ತು ನ.ಪಂ. ಕಾಂಗ್ರೆಸ್ ಸದಸ್ಯರು ಹಾಗೂ ಮುಖಂಡರು ಇಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಆ.30 ರಂದು ಗೃಹಲಕ್ಷ್ಮಿ ಯೋಜನೆ ಆರಂಭಗೊಳ್ಳುವ ಬಗ್ಗೆ, ಚಂದ್ರನ ಮೇಲೆ ಚಂದ್ರಯಾನ 3 ಯಶಸ್ವಿಯಾಗಿ ಲ್ಯಾಂಡಿಂಗ್ ಆಗಿರುವ ಬಗ್ಗೆ ಸಂತೋಷ ವ್ಯಕ್ತಪಡಿಸಿದರಲ್ಲದೆ, ಕಸ್ತೂರಿ ರಂಗನ್ ಯೋಜನೆ ಮತ್ತೆ ಜಾರಿಯಾಗುತ್ತದೆಂದು ಗುಲ್ಲೆಬ್ಬಿಸಿ ಬಿ.ಜೆ.ಪಿ.ಯವರು ಜನರಲ್ಲಿ ಭಯ ಹುಟ್ಟಿಸಿ ಲೋಕಸಭಾ ಚುನಾವಣೆಯಲ್ಲಿ ಏನಾದರೂ ಲಾಭವಾಗುತ್ತದೋ ಎಂದು ಕಾಯುತ್ತಿದ್ದಾರೆ ಎಂದು ತೀವ್ರ ಟೀಕಾ ಪ್ರಹಾರ ನಡೆಸಿದರು.
ಗೃಹಲಕ್ಷ್ಮಿ ಯೋಜನೆಗೆ ರಾಜ್ಯದ ಉದ್ಯಮ ಒಂದು ಕೋಟಿಗೂ ಅಧಿಕ ಮಂದಿ ಅರ್ಜಿ ಹಾಕಿದ್ದಾರೆ. ನಮ್ಮ ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು 3715 ಪಡಿತರ ಚೀಟಿಗಳಿವೆ. ಅವರಲ್ಲಿ 2699 ಮಂದಿ ಗೃಹಲಕ್ಷ್ಮಿ ಗೆ ಅರ್ಜಿ ಹಾಕಿದ್ದಾರೆ. ಗ್ರಾಮಾಂತರ ಸುಳ್ಯ ತಾಲೂಕಲ್ಲಿ ಒಟ್ಟು 23918 ಪಡಿತರ ಚೀಟಿಗಳಿವೆ. ಅವರಲ್ಲಿ 18890 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಕೆಲವು ತಾಂತ್ರಿಕ ಕಾರಣಗಳಿಗಾಗಿ ಅಥವಾ ಕೆಲವರು ಅರ್ಜಿ ಹಾಕದೆ ಇರುವುದರಿಂದ 6046 ಪಡಿತರ ಚೀಟಿದಾರರು ಅರ್ಜಿ ಹಾಕಲಾಗಿಲ್ಲ. ಆಗಸ್ಟ್ 30 ರಂದು ಈ ಐತಿಹಾಸಿಕ ಯೋಜನೆ ಜಾರಿಯಾಗಲಿದ್ದು, ಮೈಸೂರಿನಲ್ಲಿ ಲೋಕಾರ್ಪಣೆಗೊಳ್ಳುವುದು. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ತಾಲೂಕು ಕೇಂದ್ರಗಳಲ್ಲಿ, ನಗರ ಪಂಚಾಯತ್, ಗ್ರಾಮ ಪಂಚಾಯತ್ ಗಳಲ್ಲಿ ಈ ಕಾರ್ಯಕ್ರಮದ ನೇರಪ್ರಸಾರ ಇರುತ್ತದೆ. ಜತೆಗೆ ಮುಖ್ಯಮಂತ್ರಿಗಳೊಂದಿಗೆ ಸಂವಾದವೂ ಇರುತ್ತದೆ. ಸುಳ್ಯ ನಗರದಲ್ಲಿ ಲಯನ್ಸ್ ಸಭಾಂಗಣದಲ್ಲಿ ಹಾಗೂ ನ.ಪಂ.ಕಾರ್ಯಾಲಯದ ಸಭಾಂಗಣದಲ್ಲಿ ಫಲಾನುಭವಿಗಳ ಸಮಾವೇಶ ಇರುತ್ತದೆ. ಸಂಪೂರ್ಣ ಸರಕಾರಿ ಕಾರ್ಯಕ್ರಮವಾದ ಇದರಲ್ಲಿ ಶಾಸಕರಾದ ಭಾಗೀರಥಿಯವರು ಭಾಗವಹಿಸಿ ಚಾಲನೆ ನೀಡಲಿದ್ದಾರೆ. ಎಲ್ಲ ಫಲಾನುಭವಿಗಳು ಬರಬೇಕು. ಮಧ್ಯಾಹ್ನ ಸರಳವಾದ ಊಟದ ವ್ಯವಸ್ಥೆ ಇರುತ್ತದೆ. ಅರ್ಜಿ ಕೊಡಲಾಗದಿದ್ದವರಿಂದ ಹೊಸ ಅರ್ಜಿಗಳನ್ನು ಸ್ವೀಕರಿಸುವ ವ್ಯವಸ್ಥೆಯೂ ಇರುತ್ತದೆ ಎಂದು ವೆಂಕಪ್ಪ ಗೌಡರು ಹೇಳಿದರು.
ಕಸ್ತೂರಿ ರಂಗನ್ ವರದಿ
ಕಸ್ತೂರಿ ರಂಗನ್ ವರದಿಯನ್ನು ಜಾರಿಮಾಡಲಾಗುತ್ತದೆ ಎಂದು ಬಿ.ಜೆ.ಪಿ.ಯವರು ಮತ್ತೆ ಗುಲ್ಲೆಬ್ಬಿಸತೊಡಗಿದ್ದಾರೆ. ಈ ವರದಿ ಜಾರಿಗೊಳ್ಳದಂತೆ ಮಾಡಲು ಕೇಂದ್ರ ಸರಕಾರಕ್ಕೆ ಮಾತ್ರ ಸಾಧ್ಯ. ಕಳೆದ ಬಾರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವಿರುವಾಗಲೂ ಈಗಿನಂತೆಯೇ ಗುಲ್ಲೆಬ್ಬಿಸಿದ್ದರು. ಆಗಿನ ಅರಣ್ಯ ಸಚಿವ ರಮಾನಾಥ ರೈಯವರು ಆಗಿನ ಸರಕಾರಕ್ಕೆ ಮನವರಿಕೆ ಮಾಡಿದ ಪರಿಣಾಮ ಸರಕಾರ ಆ ವರದಿ ಜಾರಿ ಮಾಡದಂತೆ ಕೇಂದ್ರ ಸರಕಾರಕ್ಕೆ ಆಕ್ಷೇಪ ಸಲ್ಲಿಸಿದೆ. ಅದು ಈಗ ಕೇಂದ್ರ ಸರಕಾರದ ಅಂಗಳದಲ್ಲಿದೆ. ಈಗ ಬಿ.ಜೆ.ಪಿ.ಯವರು ಚುನಾವಣೆಯ ದೃಷ್ಟಿಯಿಂದ ಮತ್ತೆ ಅಪಪ್ರಚಾರ ಆರಂಭಿಸಿದ್ದಾರೆ. ಸಂಸದ ನಳಿನ್ ಕಟೀಲ್ ಮೂಲಕ ಕೇಂದ್ರ ಸರಕಾರಕ್ಕೆ ಒತ್ತಡ ಹಾಕಿ ಆ ವರದಿ ಜಾರಿ ಮಾಡದಂತೆ ಬಿ.ಜೆ.ಪಿ.ಯವರು ತಡೆಯಬಹುದು ಎಂದು ಅವರು ಹೇಳಿದರು.
ಚಂದ್ರಯಾನ ಯಶಸ್ವಿ
ಇಸ್ರೊ ಸಂಸ್ಥೆಯವರು ಚಂದ್ರಯಾನ 3 ಯನ್ನು ಯಶಸ್ವಿಗೊಳಿಸಿರುವುದು ಭಾರತೀಯರೆಲ್ಲರಿಗೂ ಹೆಮ್ಮೆ ತರುವ ಕಾರ್ಯ. ಅದಕ್ಕಾಗಿ ಇಸ್ರೋ ವಿಜ್ಞಾನಿಗಳನ್ನು, ತಂತ್ರಜ್ಞರನ್ನು ನಾವೆಲ್ಲ ಅಭಿನಂದಿಸುತ್ತೇವೆ. 1969 ರಲ್ಲಿ ಇಸ್ರೊ ಸ್ಥಾಪನೆಯಾದಂದಿನಿಂದಲೂ ನಮ್ಮ ವಿಜ್ಞಾನಿಗಳು ಇಂತಹ ಹಲವಾರು ಯಶಸ್ವೀ ಬಾಹ್ಯಾಕಾಶ ಮೈಲುಗಲ್ಲುಗಳನ್ನು ಸ್ಥಾಪಿಸುತ್ತಲೇ ಬಂದಿದ್ದಾರೆ” ಎಂದು ವೆಂಕಪ್ಪ ಗೌಡರು ಶ್ಲಾಘಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಗೋಕುಲದಾಸ್, ನ.ಪಂ.ವಿಪಕ್ಷ ನಾಯಕ ಬಾಲಕೃಷ್ಣ ಕೊಡೆಂಕಿರಿ, ನ.ಪಂ.ಸದಸ್ಯ ಡೇವಿಡ್ ಧೀರ ಕ್ರಾಸ್ತ, ಶಶಿಧರ್ ಎಂ.ಜೆ., ಭವಾನಿಶಂಕರ ಕಲ್ಮಡ್ಕ, ಸತ್ಯಕುಮಾರ್ ಆಡಿಂಜ ಉಪಸ್ಥಿತರಿದ್ದರು.