ರೇಬಿಸ್ ರೋಗದ ಉಚಿತ ಲಸಿಕೆ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ

0

ಸೆಪ್ಟೆಂಬರ್ ಪೂರ್ತಿ ಅಭಿಯಾನ ನಡೆಸಲು ನಿರ್ಧಾರ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸುಳ್ಯ ಇದರ ವತಿಯಿಂದ ಸೆ.2ರಂದು ಸುಳ್ಯದ ಪಶುಪಾಲನಾ ಇಲಾಖಾ ಕಚೇರಿಯಲ್ಲಿ ರೇಬಿಸ್ ರೋಗಕ್ಕೆ ಉಚಿತ ಲಸಿಕಾ‌ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಶಾಸಕಿ‌ ಭಾಗೀರಥಿ ಮುರುಳ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರಲ್ಲದೆ, ಇಲಾಖೆ ಸವಲತ್ತುಗಳನ್ನು ವಿತರಿಸಲಾಯಿತು.

ತಾಲೂಕಿನ 25 ಗ್ರಾಮ ಪಂಚಾಯತ್ ಗಳಲ್ಲಿ ಕಾರ್ಯನಿರ್ಚಹಿಸುವ ಪಶು ಸಖಿಯರಿಗೆ ಕಿಟ್ ವಿತರಣೆ ಮಾಡಲಾಯಿತು. ರಬ್ಬರ್ ಮ್ಯಾಟ್ ಗಳನ್ನು ಶೇ.50 ರ ಸಹಾಯಧನದಲ್ಲಿ 10 ಫಲಾನುಭವಿಗಳಿಗೆ ವಿತರಿಸಲಾಯಿತು.

ಬಳಿಕ ಮಾತನಾಡಿದ ಶಾಸಕಿ‌ ಭಾಗೀರಥಿಯವರು ರೈತರ ಎಲ್ಲಾ ಸಮಸ್ಯೆಗಳಿಗೆ ಇಲಾಖೆಯ ಅಧಿಕಾರಿಗಳು ಸೂಕ್ತ ಸಮಯದಲ್ಲಿ ಸ್ಪಂದಿಸಬೇಕು. ಎಲ್ಲಾ ಸಾಕು ಪ್ರಾಣಿಗಳ ರಕ್ಷಣೆ ಮಾಡುವ ಕಾರ್ಯವನ್ನು ಇಲಾಖೆ ಮಾಡುತಿದೆ. ಇಲಾಖೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕೊರತೆಯ ಬಗ್ಗೆ ಸರಕಾರದ ಗಮನಕ್ಕೆ ತಂದು ಪರಿಹರಿಸಲು ಪ್ರಯತ್ನ ನಡೆಸಲಾಗುವುದು ಎಂದು ಹೇಳಿದರು.

ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಮುಖ್ಯ ವೈದ್ಯಾಧಿಕಾರಿ ಡಾ.ನಿತಿನ್ ಪ್ರಭು ಪ್ರಾಸ್ತಾವಿಕ ಮಾತನಾಡಿದರು. ಪಶುವೈದ್ಯಾಧಿಕಾರಿಗಳಾದ ಡಾ.ನಾಗರಾಜ, ಡಾ. ವೆಂಕಟಾಚಲಪತಿ
ಡಾ.ಸೂರ್ಯನಾರಾಯಣ ಬಿ.ಕೆ, ಜಾನುವಾರು ಅಭಿವೃದ್ಧಿ ಅಧಿಕಾರಿ ಪುಷ್ಪರಾಜ್ ಕೆ ಮತ್ತಿತರರು ಉಪಸ್ಥಿತರಿದ್ದರು.

ರೇಬಿಸ್ ರೋಗಗಳಿಗೆ ಲಸಿಕಾ ಅಭಿಯಾನ ಸೆಪ್ಟೆಂಬರ್ ತಿಂಗಳು ಪೂರ್ತಿ ನಡೆಯಲಿದೆ. ತಾಲೂಕು ಪಶು ಆಸ್ಪತ್ರೆ ಹಾಗೂ ಪಶು ಇಲಾಖೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತದೆ.