ಗುರುನಮನ

0

ಗುರುಗಳ ಮಾತು ಪ್ರೇರಣೆಯಾಯಿತು
ಸತ್ಯನಾರಾಯಣ ಕುಡುಂಬಿಲ

ಬಹುಶಃ ಹೈಸ್ಕೂಲಿನ ಶಿಕ್ಷಕರು ಅತೀ ಹೆಚ್ಚು ನೆನಪಿನಲ್ಲಿ ಉಳಿಯುತ್ತಾರೆ ಎಂದು ನನ್ನ ಭಾವನೆ. ಎಲ್ಲಾ ಶಿಕ್ಷಕರು ಪ್ರಿಯರೇ..೧೯೮೭-೯೦ರ ತನಕ ನಾನು ಸುಳ್ಯದ ಚೊಕ್ಕಾಡಿ ಹೈಸ್ಕೂಲಿನ ವಿದ್ಯಾರ್ಥಿ. ಅಗತ್ಯಕ್ಕಿಂತ ಹೆಚ್ಚಿನ ಬಡತನ. ನಮಗೆ ಸಮಾಜ ವಿಜ್ಞಾನ ಕಲಿಸಲು ಒಬ್ರು ಮೇಷ್ಟು ಇದ್ದರು. ಬಹಳ ಶಿಸ್ತು ಹಾಗೆಯೇ ಪಕ್ಕಾ ಕಲಿಕೆಯ ಪಾಠ. ವೋಣಿಯಡ್ಕ ಸುಬ್ರಾಯ ಮೇಷ್ಟ್ರು. ಅವರ ಪಾಠ ಪ್ರಾರಂಭ ಎಂದರೆ ಏನೋ ಭಯ. ಕ್ಲಾಸಿನ ಉದ್ದಗಲಕ್ಕೆ ನಡೆದು ಹಿಂದಿನ ದಿನದ ಪಾಠ ಮೆಲುಕು ಹಾಕಿಸಿ, ಯಾರಿಗೆ ಪ್ರಶ್ನೆ ಕೇಳುತ್ತಾರೆ ಎಂದೇ ತಿಳಿಯದು.

ನಾನು ಕ್ಲಾಸಿನ ಅತೀ ಕುಳ್ಳರಲ್ಲಿ ಎರಡನೆಯವ. ಪ್ರತೀ ಸಾರಿ ವಾರ್ಷಿಕ ಸ್ಪರ್ಧೆಗಳು ಬಂದರೆಂದರೆ ನಾನು ತಲೆತಗ್ಗಿಸಿ ತಪ್ಪಿಸೋ ಪ್ರಯತ್ನ ಮಾಡುತ್ತಿದ್ದೆ. ಆದರೆ ಸುಬ್ರಾಯ ಮೇಷ್ಟ್ರೋ..ನನ್ನನ್ನು ತಪ್ಪದೇ ಭಾಷಣ ಸ್ಪರ್ಧೆಗೆ ಸೇರಿಸೋರು. ಸರಿ.. ಅನಿವಾರ್ಯವಾಗಿ ಸ್ಟೇಜಿಗೆ ಹತ್ತಿ ಗಡಗಡ ನಡುಗಿ ಕಣ್ಣೀರಿಟ್ಟು, ಪೇಪರಲ್ಲಿ ಬರೆದುದನ್ನ ಅರೆಬರೆ ತೊದಲಿ ಬರುತ್ತಿದ್ದೆ. ಮೂರೂ ವರ್ಷವೂ ಇದೇ ಪ್ರಸಂಗ. ಆದರೆ ಇಂದು ವೇದಿಕೆ ಏರಿ ಎರಡಕ್ಷರವನ್ನ ಧೈರ್ಯವಾಗಿ ಸಭಿಕರ ಮುಂದೆ ಹೇಳುತ್ತೇನೆಂದರೆ ಅದಕ್ಕೆ ನಮ್ಮ ಸುಬ್ರಾಯ ಮೇಷ್ಟ್ರೇ ಸ್ಪೂರ್ತಿ.

ಎಸ್ ಎಸ್ ಎಲ್ ಸಿ ಪರೀಕ್ಷೆ ಸಮಯ. ನಾವೆಲ್ಲಾ ಶಾಲೆಯಲ್ಲಿ ಗ್ರೂಪ್ ಸ್ಟಡಿ. ಮಧ್ಯಾಹ್ನದ ಸಮಯದಲ್ಲಿ ಮೇಷ್ಟ್ರುಗಳೆಲ್ಲಾ ಊಟಕ್ಕೆ ಹೋಗಿರುವಾಗ ನಾನು ಒಂದರ ಮೇಲೊಂದರಂತೆ ಪೇರಿಸಿಟ್ಟ ಎರಡು ಡೆಸ್ಕುಗಳ ಮೇಲೆ ಚೇರ್ ಮೇಲೆ ಕುಳಿತು ಓದುತ್ತಿದ್ದೆ. ಆವಾಗಲೇ ಸುಬ್ರಾಯ ಮೇಷ್ಟ್ರು ಬರಬೇಕೇ? ಛೇಂಬರಿಗೆ ಕರೆದರು. ನನ್ನ ಪರಿಸ್ಥಿತಿ ಹೇಳತೀರದು. ಬೆನ್ನು ಹುಡಿಯಾದಂತೆ ಎಂದು ಭಾವಿಸಿದೆ. ಆದರೆ ಮೇಷ್ಟ್ರು ಕರೆದು “ಅಲ್ಲೆಲ್ಲಾ ಹತ್ತಿ ಕೆಳಗೆ ಬಿದ್ದು ಕೈಕಾಲು ಮುರ್ಕೊಂಡ್ರೆ ಏನ್ಮಾಡ್ತೀಯ? ಡೆಸ್ಕ್ ಮೇಲೆ ಹತ್ತಿ ಎತ್ತರಕ್ಕೆ ಏರೋದು ಅಲ್ಲ. ಚೆನ್ನಾಗಿ ಕಲಿತು ಒಳ್ಳೆಯವನಾಗಿ ಎತ್ತರಕ್ಕೆ ಏರಬೇಕು” ಅಂದ್ರು. ಮರೆಯಲಾಗದ ಪಾಠ.

೧೦ನೇ ತರಗತಿ ಮುಗಿದ ನಂತರ ನನ್ನನ್ನು ಕರೆದು ಔxಜಿoಡಿಜ ಜiಛಿಣioಟಿಚಿಡಿಥಿ ನೀಡಿದ್ರಲ್ಲಾ.. ಅದಂತೂ ಮರೆಯಲಾಗದು. ಇಂದಿಗೂ ನನ್ನ ಬಳಿ ಜೋಪಾನವಾಗಿದೆ. ಸುಬ್ರಾಯ ವೋಣಿಯಡ್ಕ ಮೇಷ್ಟ್ರಿಗೆ ಎಂದೂ ಋಣಿ.

ಸತ್ಯನಾರಾಯಣ ಕುಡುಂಬಿಲ
ಕುಕ್ಕುಜಡ್ಕ