ಚಿನ್ನದಂತಾ ಚೀನಪ್ಪ ಮೇಷ್ಟ್ರು

0

ಡಾ|| ಮುರಲೀ ಮೋಹನ್ ಚೂಂತಾರು

MDS,DNB,MOSRCSEd(U.K), FPFA, M.B.A

1983 ರಿಂದ 1986ರವರೆಗೆ ನಾನು ಸುಳ್ಯ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ಳಾರೆ (ಈಗ ಕರ್ನಾಟಕ ಪಬ್ಲಿಕ್ ಸ್ಕೂಲ್) ಯಲ್ಲಿ 4 ರಿಂದ 7ರವರೆಗೆ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ ಸಮಯ. ನಮ್ಮ ಬೆಳ್ಳಾರೆಯಲ್ಲಿ ಆಗ ಇದ್ದದ್ದು ಅದೊಂದೇ ಸರಕಾರಿ ಸ್ಕೂಲ್. ಈಗಿನಂತೆ ಹತ್ತಾರು ಖಾಸಗಿ ಶಾಲೆಗಳಿರಲಿಲ್ಲ. ಕ್ಲಾಸ್ ತುಂಬಾ ಮಕ್ಕಳಿಂದ ಗಿಜಿಗುಡುತ್ತಿತ್ತು. ಆಗ ನಮಗೆ ದೈಹಿಕ ಶಿಕ್ಷಕರಾಗಿ ಇದ್ದವರು ಪಂಜದ ಸಮೀಪದ ಕಾಣಿಕೆ ಎಂಬಲ್ಲಿನ ಶ್ರೀ ಚೀನಪ್ಪ ಗೌಡ ಎಂಬ ಚಿನ್ನದಂತಾ ಮನಸ್ಸಿನ ಮೇಷ್ಟ್ರು. ಮೃದು ಮಾತಿನ, ನಗು ಮೊಗದ ಸದಾ ಲವಲವಿಕೆಯ ಜೀವನ ಪ್ರೀತಿಯ ಅವರು ನಮಗೆಲ್ಲರಿಗೂ ಸದಾ ಕಾಲ ಸ್ಪೂರ್ತಿ ತುಂಬುತ್ತಿದ್ದರು. ಖೋ ಖೋ, ಕಬ್ಬಡಿಯಲ್ಲಿ ಅವರ ಕೆಳಗೆ ಚೆನ್ನಾಗಿ ಪಳಗಿ ಜಿಲ್ಲಾ ಮಟ್ಟದಲ್ಲೂ ಪ್ರಶಸ್ತಿ ಪಡೆದಿದ್ದೆವು. ಬರೀ ಪಾಠದಿಂದ ಮಕ್ಕಳ ಪರಿಪೂರ್ಣ ಬೆಳವಣಿಗೆ ಸಾಧ್ಯವಿಲ್ಲ. ದೈಹಿಕ ಚಟುವಟಿಕೆಯಿಂದ ಕೂಡಿದ ಆಟೋಟ ಕೂಡಾ ಮಾನಸಿಕ ಬೆಳವಣಿಗೆಗೆ ಪೂರಕ ಎಂದು ಮುಖ್ಯ ಶಿಕ್ಷಕರಿಗೆ ಮನವರಿಕೆ ಮಾಡಿ ನಮ್ಮೆಲ್ಲರನ್ನೂ ಆಟೋಟಗಳಿಗೆ ಪಾಲ್ಗೊಳ್ಳಲು ಹುರಿದುಂಬಿಸುತ್ತಿದ್ದರು.

ದೈಹಿಕ ತರಬೇತಿಯ ಡ್ರಿಲ್ಸ ಗಳ ಸಮಯದಲ್ಲಿ ತಪ್ಪು ಮಾಡಿದಾಗ ಇಡೀ ಮೈದಾನದ ಸುತ್ತ ಹತ್ತು ರೌಂಡ್ ಓಡಿಸಿ ನಮ್ಮನ್ನ ಪಳಗಿಸುತ್ತಿದ್ದರು. ಆ ಶಿಕ್ಷೆ ಯಿಂದಲೇ ನಾವಿಂದು ಉಸಿರಾಡುತ್ತಿದ್ದೇವೆ ಎಂದರೆ ತಪ್ಪಾಗಲಾರದು . ಈಗಲೂ ನನ್ನ ಬಳಿ ಅಂದು ಸಂಪಾದಿಸಿದ ಖೋ ಖೋ ಮತ್ತು ಕಬಡ್ಡಿಯ ಫಲಕಗಳು ಮತ್ತು ಸರ್ಟಿಫಿಕೇಟು ಭದ್ರವಾಗಿ ಇದೆ. ಆಟೋಟಗಳಲ್ಲಿ ಸ್ಪರ್ಧಿಸುವಾಗ ನೂರಾರು ಬಾರಿ ಬಿದ್ದು ಮಣ್ಣಲ್ಲಿ ಹೊರಳಾಡಿ, ನರಳಾಡಿ ಸಂತಸಪಟ್ಟಿದ್ದೆವು. ನಮ್ಮ ಜೊತೆಗೆ ನಮ್ಮ ಚೀನ್ನಪ್ಪ ಮೇಷ್ಟ್ರು ಕೂಡಾ ಮಕ್ಕಳಾಗಿ ನಲಿದಿದ್ದರು.ಒಂದು ರೀತಿಯಲ್ಲಿ ನಾವೇ ನಿಜವಾದ ಮಣ್ಣಿನ ಮಕ್ಕಳೇ ಎಂದರೂ ತಪ್ಪಲ್ಲ.

ಯಾಕೆಂದರೆ ಬೆಳಿಗ್ಗೆ ಶುಭ್ರ ಬಟ್ಟೆಯಲ್ಲಿ ಶಾಲೆಗೆ ಬಂದು ಸಂಜೆ ಮನೆ ತಲುಪುವಾಗ ಕಂದುಬಣ್ಣದ ಅಂಗಿಯಾಗಿ ಬದಲಾಗಿ ಅಮ್ಮನಿಂದ ಕಿವಿ ಹಿಂಡಿಸಿಕೊಂಡ ದಿನಗಳನ್ನು ಈಗಲೂ ನೆನೆದರೆ ರೋಮಾಂಚನವಾಗುತ್ತದೆ. ಇಂದಿನ ಯಾಂತ್ರಿಕ ಜಂಜಾಟದ ಬದುಕಿನ ಏಕತಾನತೆ ಕಳೆಯಲು ನಾನು ಆಗಾಗ ಅದೇ ಹಳೇ ಸರ್ಟಿಫಿಕೇಟು ಮತ್ತು ಫಲಕಗಳನ್ನು ಸವರಿ ಸಮಾಧಾನಪಟ್ಟುಕೊಳ್ಳುತ್ತೇನೆ.

ಈಗಲೂ ಗ್ರಾಮೀಣ ಪ್ರದೇಶಗಳಲ್ಲಿ ನಮ್ಮ ಚೀನಪ್ಪ ಮೇಷ್ಟ್ರಂತಹ ನಿಷ್ಕಲ್ಮಶ, ನಿಷ್ಕಪಟ ಶಿಕ್ಷಕರು ಇರುವುದರಿಂದಲೇ ಗುರು ಶಿಷ್ಯರ ಸಂಬಂಧ ಉಳಿದಿದೆ ಮತ್ತು ಪಾವಿತ್ರತೆ ಹೆಚ್ಚುತ್ತಿದೆ. ನನ್ನ ನೆಚ್ಚಿನ ಗುರುಗಳಾದ ಶ್ರೀ ಚೀನಪ್ಪ ಗೌಡರ ಪಾದಾರವಿಂದಗಳಿಗೆ ನಮೋ ನಮಃ. ನಿಮಂತಹ ಗುರುಗಳನ್ನು ಪಡೆದ ನಾವೇ ಧನ್ಯರು. ನೀವು ನೂರು ಕಾಲ ಬಾಳಿ ಬೆಳಗಿ ಶಿಷ್ಯಂದಿರ ಪಾಲಿಗೆ ದೀಪಸ್ತಂಭವಾಗಿ ಬೆಳಕು ನೀಡಿ, ಅಮರತ್ವವನ್ನು ಪಡೆಯಿರಿ ಎಂದು ಶಿಕ್ಷಕರ ದಿನಾಚರಣೆಯ ದಿನದಂದು ಮನದಾಳದಿಂದ ಹಾರೈಸುತ್ತೇನೆ.