ಮೂಡ್ನೂರು ಮರ್ಕಂಜ : ಭೋಜನ ಶಾಲಾ ಕಟ್ಟಡಕ್ಕೆ ಗುದ್ದಲಿ ಪೂಜೆ

0

ಸರಕಾರಿ ಶಾಲೆ ನಮ್ಮ ಶಾಲೆ ಎಂಬ ಮನೋಭಾವದೊಂದಿಗೆ ಅಭಿವೃದ್ಧಿ ಮಾಡುವ ಇಚ್ಛಾಶಕ್ತಿ ಇರಬೇಕು: ಮಾಜಿ ಸಚಿವ ಎಸ್.ಅಂಗಾರ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಡ್ನೂರು ಮರ್ಕಂಜ ಇದರ ಅಭಿವೃದ್ಧಿ ನಿರ್ವಹಣಾ ಸಮಿತಿ ನೇತೃತ್ವದಲ್ಲಿ ನೂತನ ಭೋಜನ ಶಾಲಾ ಕಟ್ಟಡ ನಿರ್ಮಾಣಕ್ಕೆ ಮಾಜಿ ಸಚಿವ ಎಸ್. ಅಂಗಾರ ಗುದ್ದಲಿ ಪೂಜೆ ನೆರವೇರಿಸಿದರು.
ಬಳಿಕ ಮಾತಾಡಿದ ಅವರು ಸರಕಾರಿ ಶಾಲೆ ನಮ್ಮ ಊರಿನ ಶಾಲೆ ಎಂಬ ಮನೋಭಾವ ಇರಬೇಕು. ಜೊತೆಗೆ ಅಭಿವೃದ್ಧಿ ಮಾಡುವ ಇಚ್ಛಾಶಕ್ತಿ ಇರಬೇಕು ಸರಕಾರದಿಂದ ಎಲ್ಲವೂ ಬರುತ್ತದೆ ಎಂಬ ಭಾವನೆ ಬೇಡ ನಾವೆಲ್ಲರೂ ಸೇರಿಕೊಂಡು ಅಭಿವೃದ್ಧಿಯಲ್ಲಿ ಕೈಜೋಡಿಸಬೇಕು. ಶಾಲಾ ಮಕ್ಕಳ ಶಿಸ್ತು ಕಂಡು ಪ್ರಶಂಶಿಸಿದ ಅವರು ಸಹಕಾರ ನೀಡುವುದಾಗಿ ತಿಳಿಸಿದರು.
. ಆ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀ ಅನ್ನಪೂರ್ಣೇಶ್ವರಿ ಯೋಗಿ ಸಿದ್ದ ಮಠ ದ ಸ್ವಾಮೀಜಿ ರಾಜೇಶ್ ನಾಥ್ ಮರ್ಕಂಜ ಶ್ರೀಗಳು ಮಾತನಾಡಿ, ಅಭಿವೃದ್ಧಿ ನಿರ್ವಹಣಾ ಸಮಿತಿಯು ಬಹಳ ಒಳ್ಳೆಯ ಕೆಲಸಗಳನ್ನು ಕೈಗೆತ್ತಿಕೊಂಡಿರುವುದು ತುಂಬಾ ಸಂತೋಷದ ವಿಷಯ. ಗ್ರಾಮದಲ್ಲಿರುವ ಶಾಲೆಗಳು ಅಭಿವೃದ್ಧಿಯಾದರೆ ಶಾಲೆಯು ಉನ್ನತ ಮಟ್ಟಕ್ಕೆ ಹೆಸರುವಾಸಿಯಾಗಲು ಸಾಧ್ಯವಾಗುತ್ತದೆ. ಶಾಲಾ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು. ಅಭಿವೃದ್ಧಿ ನಿರ್ವಹಣಾ ಸಮಿತಿಯ ಸಂಚಾಲಕ ಜಗನ್ನಾಥ ಮಾತಾಡಿ, ಒಳ್ಳೆಯ ಕೆಲಸ ಮಾಡುವಾಗ ಟೀಕೆಗಳು ಬರುವುದು ಸಹಜ ಟೀಕೆಗಳನ್ನು ಸವಾಲಾಗಿ ಸ್ವೀಕರಿಸಿ ಒಂದು ಹೆಜ್ಜೆಯನ್ನು ಮುಂದಿಟ್ಟುಕೊಂಡು ಮುಂದುವರಿಯುತ್ತೇವೆ. ಶಾಲೆಗೆ ಬೇಕಾಗಿರುವ ಮೂಲಭೂತ ಸೌಕರ್ಯಗಳ ಲ್ಲಿ ಒಂದಾದ ಮಕ್ಕಳಿಗೆ ಸುಸಜ್ಜಿತವಾದ ಭೋಜನ ಶಾಲೆ ನಿರ್ಮಾಣ ಮಾಡಬೇಕು ಅಂತ ನಾವು ತೀರ್ಮಾನಿಸಿದ್ದೇವೆ ಅದನ್ನು ಯಶಸ್ವಿಯಾಗಿ ನೆರವೇರಿಸಕೊಡಲು ಕಟಿ ಬದ್ಧರಾಗಿದ್ದೇವೆ ಎಂದು ಹೇಳಿದರು. ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹೇಮಾ ಕುಮಾರ್ ಜೋಗಿಮೂಲೆ ಮಾತಾಡಿದರು.
ವೇದಿಕೆಯಲ್ಲಿ ಅಧ್ಯಕ್ಷೆ ಗೀತಾ ಪಂಚಾಯತ್ ವತಿಯಿಂದ ಶೌಚಾಲಯ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು. ವೇದಿಕೆಯಲ್ಲಿ ಶಾಲಾ ಮೇಲುಸ್ತುವಾರಿ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಬೊಮ್ಮೇಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಶಿಕಾಂತ್ ಬೂಡು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ದೇವರಾಜ್ ಎಸ್.ಕೆ. ಸ್ವಾಗತಿಸಿ, ಸಹ ಶಿಕ್ಷಕ ಬೆಳ್ಳಿಯಪ್ಪ ನಿರೂಪಿಸಿ ವಂದಿಸಿದರು. ಶಾಲಾ ಮೇಲುಸ್ತುವಾರಿ ಸಮಿತಿ ಪದಾಧಿಕಾರಿಗಳು ಅಭಿವೃದ್ಧಿ ನಿರ್ವಹಣಾ ಸಮಿತಿಯ ಪದಾಧಿಕಾರಿಗಳು ಶಾಲಾ ಪೋಷಕರು ಶಾಲಾ ಶಿಕ್ಷಕ ವೃಂದದವರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು