ಸಂಪರ್ಕ ಕಡಿತಗೊಂಡ ಉಪಗ್ರಹದಂತಾದ ಸುಳ್ಯ ಕಾಂಗ್ರೆಸ್

0

ಕಾಂಗ್ರೆಸ್ ಹೇಳಿಕೆಗೆ ಬಿಜೆಪಿ ತಿರುಗೇಟು

ರಾಜ್ಯದಲ್ಲಿ ಕಾಂಗ್ರೆಸ್ ಘೋಷಣೆ ಮಾಡಿದ ಪಂಚ ಗ್ಯಾರಂಟಿಗಳಲ್ಲಿ ಪೂರ್ತಿಯಾಗಿ ಎಲ್ಲವನ್ನೂ ಸಮರ್ಪಕವಾಗಿ ಯಾವುದೇ ನಿಬಂಧನೆಗಳಿಲ್ಲದೆ, ಗೊಂದಲಗಳಿಲ್ಲದೆ ಜಾರಿಗೆ ಮಾಡಲಿ. ಇನ್ನೂ ಬಾಕಿ ಇರುವ ಒಂದು ಗ್ಯಾರಂಟಿ ಬಗ್ಗೆ ಯಾವುದೇ ಪ್ರಗತಿ ಇಲ್ಲ, ಅದನ್ನೂ ತಕ್ಷಣ ಪ್ರಾರಂಭಿಸಿ ಪಂಚ ಗ್ಯಾರಂಟಿಗಳನ್ನು ಸಮರ್ಪಕವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರವಧಿ ಪೂರ್ತಿಯಾಗಿ ಯಾವುದೇ ಗೊಂದಲ ಇಲ್ಲದೆ ಮುಂದುವರಿಸಲಿ,  ಆಗ ಸುಳ್ಯ ಬಿಜೆಪಿ ನಿಮ್ಮನ್ನು ಅಭಿನಂದಿಸಲಿದೆ ಸುಳ್ಯ ಕಾಂಗ್ರೆಸ್ಸಿಗರೆ‌ ಎಂದು ಬಿಜೆಪಿ ಮಂಡಲ ಸಮಿತಿ ಹೇಳಿಕೆ ನೀಡಿದೆ.

ಸುಳ್ಯದ ಕಾಂಗ್ರೆಸ್ಸಿನ ಪೇಪರ್ ಹುಲಿ ನಾಯಕರೆ , ತಾವು ರಾಜ್ಯ ಕಾಂಗ್ರೆಸ್ ನೊಂದಿಗೆ ಲಿಂಕ್ ತಪ್ಪಿ ಸಂಪರ್ಕ ಕಡಿತಗೊಂಡ ಉಪಗ್ರಹದಂತಾಗಿ ಶೋಚನೀಯ ಪರಿಸ್ಥಿತಿಯಲ್ಲಿದ್ದೀರಿ. ವಿರೋಧ ಪಕ್ಷ ಬಿಜೆಪಿ ಶಾಸಕರಾದ ಸುಳ್ಯ ಕ್ಷೇತ್ರದ ಭಾಗೀರಥಿ ಮುರುಳ್ಯರವರು ಶಿಫಾರಸ್ಸು ಮಾಡಿದ ಬಿಜೆಪಿಗರು ಇರುವ ಅಕ್ರಮ ಸಕ್ರಮ ಸಮಿತಿಯನ್ನು ಕಾಂಗ್ರೆಸ್ ಸರಕಾರ ಅನುಮೋದನೆ ಮಾಡಿ ಆದೇಶ ಹೊರಡಿಸುವವರೆಗೆ ನಿಮಗೆ ಗೊತ್ತಿರಲಿಲ್ಲ. ತಮಗೆ ರಾಜ್ಯ, ಜಿಲ್ಲಾ ಕಾಂಗ್ರೆಸ್ ನ ನಾಯಕರು ಹಾಗೂ ರಾಜ್ಯ ಕಾಂಗ್ರೆಸ್ ಸರಕಾರದ ಜೊತೆ ಲಿಂಕ್ ತಪ್ಪಿರುವುದಕ್ಕೆ ಸಾಕ್ಷಿ ಹಾಗೂ ನಿಮ್ಮ ಸ್ಥಾನವನ್ನು ನಿಮ್ಮ ನಾಯಕರೇ ಪರೋಕ್ಷವಾಗಿ ತೋರಿಸಿಕೊಟ್ಟಿದ್ದಾರೆ‌. ಇನ್ನು ನೀವು ಒತ್ತಡ ಹಾಕಿ ಸಮಿತಿ ಬದಲಾವಣೆ ಮಾಡಬಹುದು ಅದು ಬೇರೆ ವಿಚಾರ, ತಮಗೆ ಈ ರೀತಿಯ ಅವಮಾನ ಆಗಿರುವುದಕ್ಕೆ ಮರುಕವಾಗುತ್ತಿದೆ.
ನಾವು ಆಯೋಜಿಸಿದ ಪ್ರತಿಭಟನೆ ನಮ್ಮ ಅಸ್ತಿತ್ವ ಉಳಿಸುವುದಕ್ಕೋಸ್ಕರ ಅಲ್ಲ, ಅಂತಹ ಪರಿಸ್ಥಿತಿ ಏನಿದ್ದರೂ ಸುಳ್ಯ ಕಾಂಗ್ರೆಸಿಗರಾದ ತಮಗೆ ಮಾತ್ರ. ನಮಗೆ ಅಂತಹ ಪರಿಸ್ಥಿತಿಯನ್ನು ಸುಳ್ಯದ ಬಿಜೆಪಿ ಕಾರ್ಯಕರ್ತರು ಯಾವತ್ತೂ ಬಿಜೆಪಿಗೆ ತಂದಿಲ್ಲ, ತರುವುದೂ ಇಲ್ಲ‌ ನಮ್ಮಲ್ಲಿರುವುದು ಪೇಮೆಂಟ್ ಕಾರ್ಯಕರ್ತರಲ್ಲ , ಬದ್ಧತೆಯ ಕಾರ್ಯಕರ್ತರು‌. ಯಾವತ್ತೂ ನಮ್ಮ ಪ್ರತಿಭಟನೆ ಜನರ ಹಿತಾಸಕ್ತಿಗಾಗಿ ಮಾತ್ರ.
ಸುಳ್ಯ ಬಿಜೆಪಿ ಅಧ್ಯಕ್ಷರಾದ ಹರೀಶ್ ಕಂಜಿಪಿಲಿಯವರು ನಿಮ್ಮ ಹಾಗೆ ಪತ್ರಿಕಾ ಹೇಳಿಕೆ ನೀಡಿ ಪ್ರಚಾರ ಪಡೆಯುವವರಲ್ಲ , ಹಿಂದಿನ ಶಾಸಕರಾದ ಎಸ್ ಅಂಗಾರರ ಜೊತೆಗೂಡಿ ಕೆಲಸ ಮಾಡಿ ನೂರಾರು ಕೋಟಿ ಅನುದಾನ ತರಿಸಿ ಅಭಿವೃದ್ಧಿ ಮಾಡಿಸಿ ಪ್ರಚಾರ ಪಡೆದವರು. ಅವರ ಮತ್ತು ಬಿಜೆಪಿ ಕಾರ್ಯಕರ್ತರ ಮನೆಯ ಅಡಿಕೆ, ರಬ್ಬರ್ ಮಾರಿದ ಹಣದಿಂದಲೇ ಖರ್ಚು ಮಾಡಿ ಪ್ರಚಾರ ಪಡೆದುಕೊಂಡಿರುವವರು.
ಹಿಂದಿನ ಬಿಜೆಪಿ ಸರಕಾರ ಮಂಜೂರು ಮಾಡಿದ ಅಭಿವೃದ್ಧಿ ಕಾಮಗಾರಿಗಳು, 110 ಕೆ ವಿ ವಿದ್ಯುತ್ ಸ್ಟೇಷನ್ ಕಾಮಗಾರಿ ಗಳನ್ನು ರಾಜ್ಯದ ಕಾಂಗ್ರೆಸ್ ಸರಕಾರ ತಡೆ ಹಿಡಿದಿರುವ ಬಗ್ಗೆ ಸಾಧ್ಯವಾದರೆ ನಿಮ್ಮ ನಾಯಕರಿಗೆ ಒತ್ತಡ ಹಾಕಿಸಿ ಮತ್ತೆ ಕಾಮಗಾರಿ ಮುಂದುವರಿಯುವಂತೆ ಮಾಡಿ, ಅದು ನಿಮ್ಮ ತಾಕತ್ತು ಯಾವಾಗಲೂ ಮಾಧ್ಯಮ ಹೇಳಿಕೆಯೇ ಸಾಧನೆಯಾಗಬಾರದು‌
ಉಬ್ಬರಡ್ಕ ಮಿತ್ತೂರಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ ರಾಮಯ್ಯ ಗೌಡ ಸ್ಮಾರಕಕ್ಕೆ ಅನುದಾನ ಬಿಡುಗಡೆ ಮಾಡಿದ್ದು ಹಿಂದಿನ ಬಿಜೆಪಿ ಸರಕಾರ ಎಂದು ಪ್ರತಿಭಟನೆಯಲ್ಲಿ ಬಿಜೆಪಿ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ ದಾಖಲೆ ಪ್ರದರ್ಶನ ಮಾಡಿದ ಬಗ್ಗೆ ತಮ್ಮ ಪ್ರತಿಕ್ರಿಯೆ ಇಲ್ಲ, ಈ ರೀತಿಯ ಜಾಣ ಮೌನ ನಿಮ್ಮ ಡಂಬಾಚಾರಕ್ಕೆ ಹಿಡಿದ ಕೈಗನ್ನಡಿ. ಇವುಗಳಿಗೆಲ್ಲ ಉತ್ತರ ನೀಡಿದ ಬಳಿಕ ಮತ್ತೆ ಪತ್ರಿಕಾಗೋಷ್ಠಿ ಮಾಡಿ ಸುಳ್ಳು ಆರೋಪಗಳನ್ನು ಮಾಡಿ ಎಂದು ಬಿಜೆಪಿ ಮಂಡಲ ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.