ಶಾಂತಿನಗರದಲ್ಲಿ ವಾಸ ಯೋಗ್ಯ ಮನೆ ಇಲ್ಲದೆ ಸಂಕಷ್ಟಪಡುತ್ತಿದ್ದ ಬಡ ಮಹಿಳೆಯ ಮನೆಗೆ ಅರುಣ್ ಕುಮಾರ್ ಪುತ್ತಿಲ ಭೇಟಿ

0

ಇಲಾಖೆ ಮತ್ತು ಪುತ್ತಿಲ ಪರಿವಾರದ ಸಹಕಾರದಿಂದ ಯೋಗ್ಯ ಮನೆ ನಿರ್ಮಿಸಿ ಕೊಡುವ ಭರವಸೆ

ಸುಳ್ಯದ ಶಾಂತಿನಗರದಲ್ಲಿ ಸುಮತಿ ಎಂಬ ಬಡ ಮಹಿಳೆ ವಾಸಿಸಲು ಯೋಗ್ಯವಾದ ಮನೆ ಇಲ್ಲದೆ ಕೇವಲ ಪ್ಲಾಸ್ಟಿಕ್ ಹೊದಿಕೆಯಿಂದ ನಿರ್ಮಿಸಿರುವ ಮನೆಯಲ್ಲಿ ತನ್ನ ಮೂವರು ಮಕ್ಕಳೊಂದಿಗೆ ವಾಸಿಸುತ್ತಿದ್ದು ಕಷ್ಟದ ಜೀವನವನ್ನು ಸಾಗಿಸುತ್ತಿದ್ದಾರೆ.

ಇದರ ಬಗ್ಗೆ ಸ್ಥಳೀಯ ಮಹಿಳೆಯೋರ್ವರು ಪುತ್ತಿಲ ಪರಿವಾರದವರಿಗೆ ವಿಷಯ ತಿಳಿಸಿದ್ದು ಇದಕ್ಕೆ ಸ್ಪಂದನೆ ನೀಡಿದ ಅರುಣ್ ಕುಮಾರ್ ಪುತ್ತಿಲ ಇಂದು ಶಾಂತಿನಗರಕ್ಕೆ ಭೇಟಿ ನೀಡಿ ಮನೆ ಪರಿಸರವನ್ನು ಪರಿಶೀಲನೆ ನಡೆಸಿ ಸಂಬಂಧಪಟ್ಟ ಇಲಾಖೆಯವರ ಸಹಕಾರವನ್ನು ಪಡೆದು ಪುತ್ತಿಲ ಪರಿವಾರದ ವತಿಯಿಂದ ಸ್ಪಂದಿಸುವ ಭರವಸೆಯನ್ನು ನೀಡಿ ತೆರಳಿದ್ದಾರೆ.

ಕಳೆದ 5 ವರ್ಷಗಳ ಹಿಂದೆ ಸುಮತಿಯವರ ಪತಿ ಮೃತಪಟ್ಟಿದ್ದು ಮನೆ ಮತ್ತು ಮಕ್ಕಳ ಜೀವನ ನಿರ್ವಹಣೆಗೆ ಸುಮತಿಯವರು ಕೂಲಿ ಕೆಲಸ ಮಾಡಿ ದಿನ ಕಳೆಯುತ್ತಿದ್ದಾರೆ. ಮನೆಯ ಸಮಸ್ಯೆಯ ಬಗ್ಗೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಗೆ ಮನವಿ ನೀಡಿದ್ದು ಮನೆ ಇರುವ ಜಾಗದ ದಾಖಲೆ ಪತ್ರಗಳು ಪತಿಯ ಅಜ್ಜನ ಹೆಸರಿನಲ್ಲಿ ಇರುವ ಕಾರಣ ಇಲಾಖೆಯ ವತಿಯಿಂದ ಅನುದಾನ ಬರುವುದು ಅಸಾಧ್ಯವಾಗಿತ್ತು.

ಇದೀಗ ಮಾಹಿತಿ ತಿಳಿದ ಅರುಣ್ ಪುತ್ತಿಲರವರು ಭೇಟಿ ನೀಡಿ ಸ್ಥಳ ಪರಿಶೀಲನ ನಡೆಸಿ ಸ್ಥಳದಿಂದಲೇ ನಗರ ಪಂಚಾಯತ್ ಮುಖ್ಯ ಅಧಿಕಾರಿ ಸುಧಾಕರ್ ರವರ ಬಳಿ ದೂರವಾಣಿ ಮೂಲಕ ಮಾತನಾಡಿ ಇಲಾಖೆಯ ವತಿಯಿಂದ ಸ್ಪಂದಿಸುವಂತೆ ಮನವಿ ಮಾಡಿಕೊಂಡರು. ಇದಕ್ಕೆ ಉತ್ತರಿಸಿದ ನಗರ ಪಂಚಾಯತ್ ಮುಖ್ಯ ಅಧಿಕಾರಿ ಸ್ಥಳದ ದಾಖಲೆ ಪತ್ರ ಅವರ ಪತಿಯ ಅಜ್ಜನ ಹೆಸರಿನಲ್ಲಿ ಇರುವ ಕಾರಣ ಅನುದಾನ ನೀಡಲು ಸಾಧ್ಯವಾಗುತ್ತಿಲ್ಲ. ಸಂಬಂಧಪಟ್ಟ ಕುಟುಂಬದ ಹಿರಿಯರ ನೇತೃತ್ವದಲ್ಲಿ ಜಾಗದ ಪಾಲು ಪಟ್ಟಿ ತಯಾರಿಸಿ ಮಾಡಿಕೊಂಡಲ್ಲಿ ಆಶ್ರಯ ಯೋಜನೆಯಲ್ಲಿ ಬರುವ ಅನುದಾನಗಳನ್ನು ಮೊದಲ ಆದ್ಯತೆಯಲ್ಲಿ ನೀಡಿ ಸಹಕರಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ತಮ್ಮ ಸಂಘಟನೆಯ ಕಾರ್ಯಕರ್ತರ ಬಳಿ ಅರುಣ್ ಕುಮಾರ್ ಪುತಿಲ ಮಾತನಾಡಿ ಕೂಡಲೇ ಇಲಾಖೆಗಳಿಗೆ ದಾಖಲೆಗಳಿಗೆ ಬೇಕಾದ ಕಾಗದ ಪತ್ರಗಳನ್ನು ಹೊಂದಿಸಿ ನಗರ ಪಂಚಾಯತ್ ಮುಖ್ಯ ಅಧಿಕಾರಿಯ ಬಳಿ ನಾಳೆಯೇ ತೆರಳುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಪುತ್ತಿಲ ಪರಿವಾರದ 50ಕ್ಕೂ ಹೆಚ್ಚು ಕಾರ್ಯಕರ್ತರು ಉಪಸ್ಥಿತರಿದ್ದರು.