ಪೊಲೀಸರಿಗಾಗಿ ಹೆಲ್ಮೆಟ್ ಧರಿಸದೆ, ಜೀವ ರಕ್ಷಣೆಗೆ ಹೆಲ್ಮೆಟ್ ಕಡ್ಡಾಯಗೊಳಿಸಿ :ಎಸ್. ಐ. ಈರಯ್ಯ
ರೋಟರಿ ಕ್ಲಬ್ ಸುಳ್ಯ, ರೋಟರಿ ಶಾಲೆ ಸುಳ್ಯ ಇದರ ಸಹಯೋಗದಲ್ಲಿ ಇಂದು ರಸ್ತೆ ಸುರಕ್ಷತಾ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು.
ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಈರಯ್ಯ ದೂಂತೂರು ಜ್ಯೋತಿ ವೃತ್ತದ ಬಳಿ ಸಂಘಟಕರು ಆಯೋಜಿಸಿದ್ದ ರಸ್ತೆ ಸುರಕ್ಷತಾ ನಿಯಮದ ಕರಪತ್ರವನ್ನು ಬಿಡುಗಡೆಗೊಳಿಸಿ ಜಾಥಾಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ವಾಹನ ಚಾಲಕರು ವಾಹನ ಚಾಲನೆಯ ನಿಯಮವನ್ನು ಸಂಪೂರ್ಣವಾಗಿ ಪಾಲಿಸಬೇಕಾದದ್ದು ಕರ್ತವ್ಯ ಮತ್ತು ಜವಾಬ್ದಾರಿಯೂ ಕೂಡ ಆಗಿದೆ.
ಕಳೆದ ಕೆಲವು ದಿನಗಳ ಹಿಂದೆ ಸುಳ್ಯದ ಅಡ್ಕಾರಿನಲ್ಲಿ ಕಾರು ಚಾಲಕರ ನಿರ್ಲಕ್ಷತನದಿಂದ ನಾಲ್ಕು ಅಮಾಯಕ ಬಡಜೀವಗಳು ಬಲಿಯಾಗುವಂತಹ ಸನ್ನಿವೇಶ ನಿರ್ಮಾಣವಾಯಿತು. ಈ ರೀತಿಯ ದುರ್ಘಟನೆ ಸಂಭವಿಸಲು ಚಾಲಕರ ಜಾಗರೂಕತೆಯ ಚಾಲನೆ, ಮತ್ತು ರಸ್ತೆ ನಿಯಮಗಳ ಉಲ್ಲಂಘನೆ ಕಾರಣವಾಗಿರುತ್ತದೆ.
ಇತ್ತೀಚಿನ ದಿನಗಳಲ್ಲಿ ಸುಳ್ಯ ತಾಲೂಕು ಪರಿಸರದಲ್ಲಿ ದ್ವಿಚಕ್ರವಾಹನ ಅಪಘಾತದಿಂದ ಮೃತಪಟ್ಟವರಲ್ಲಿ ಹೆಚ್ಚಾಗಿ ಹೆಲ್ಮೆಟ್ ಧರಿಸದೆ ಇದ್ದವರು ಕಂಡುಬಂದಿದ್ದಾರೆ. ಹೆಲ್ಮೆಟ್ ಧರಿಸುವುದು ಕೇವಲ ಪೊಲೀಸರನ್ನು ಮೆಚ್ಚಿಸಲು ಮಾತ್ರ ಎಂಬ ಚಿಂತನೆ ಅವರಲ್ಲಿರುತ್ತದೆ. ಆದರೆ ಇದು ತಪ್ಪು. ತಮ್ಮ ತಮ್ಮ ಜೀವ ರಕ್ಷಣೆಗೆ ಈ ಹೆಲ್ಮೆಟ್ ಕಡ್ಡಾಯವಾಗಿರುತ್ತದೆ. ಆದ್ದರಿಂದ ವಾಹನ ದಟ್ಟಣೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಪ್ರತಿಯೊಬ್ಬ ಸವಾರರು ರಸ್ತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ. ಈ ರೀತಿಯ ಕಾರ್ಯಕ್ರಮ ಹಮ್ಮಿಕೊಂಡಿರುವ ಸುಳ್ಯ ರೋಟರಿ ಸಂಸ್ಥೆಗೆ ಪೊಲೀಸ್ ಇಲಾಖೆ ವತಿಯಿಂದ ಧನ್ಯವಾದವನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ರೋಟರಿ ಜಿಲ್ಲಾ ರಸ್ತೆ ಸುರಕ್ಷತಾ ಜಾಗೃತಿ ಚೇರ್ಮನ್ ಹರ್ಷಕುಮಾರ್ ರೈ ಮಾತನಾಡಿ, ರಸ್ತೆ ಸುರಕ್ಷಿತ ಜಾಗೃತಿ ಕಾರ್ಯಕ್ರಮವನ್ನು ಮೈಸೂರಿನಿಂದ ಚಾಮರಾಜನಗರದವರೆಗೆ ಹಮ್ಮಿಕೊಂಡಿದ್ದು ಪ್ರತಿಯೊಂದು ಕಡೆಯಲ್ಲಿಯೂ ರೋಟರಿ ವತಿಯಿಂದ ಜಾಗೃತಿ ಅಭಿಯಾನ ಮಾಡಲಾಗುತ್ತಿದೆ. ಇಂದು ಸುಳ್ಯದಲ್ಲಿ ಈ ಕಾರ್ಯಕ್ರಮಕ್ಕೆ ಉತ್ತಮ ಬೆಂಬಲ ಸಿಕ್ಕಿದ್ದು ಸುಳ್ಯ ರೋಟರಿ ಸಂಸ್ಥೆಯನ್ನು ಅಭಿನಂದಿಸಿದರು.
ರೋಟರಿ ಜಿಲ್ಲಾ ಪಬ್ಲಿಕ್ ಇಮೇಜ್ ಚೇರ್ಮನ್ ವಿಶ್ವನಾಥ ಶೆಣೈ, ಜಿಲ್ಲಾ ನಿಯೋಜಿತ ಗವರ್ನರ್ ವಿಕ್ರಂ ದತ್ತ, ಮಾಜಿ ಗವರ್ನರ್ ಡಾ ದೇವದಾಸ ರೈ ಇವರುಗಳು ಈ ಸಂದರ್ಭದಲ್ಲಿ ಮಾತನಾಡಿ, ವಾಹನ ಚಾಲನೆಯ ಸಂದರ್ಭದಲ್ಲಿ ಮೊಬೈಲ್ ಬಳಕೆ, ಮಧ್ಯಪಾನ ಸೇವಿಸಿ ವಾಹನ ಚಲಾವಣೆ, ವಿಶ್ರಾಂತಿ ಇಲ್ಲದೆ ವಾಹನ ಚಲಾವಣೆ, ಸೀಟ್ ಬೆಲ್ಟ್ ಧರಿಸದೆ ವಾಹನ ಚಲಾವಣೆ, ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೆ ವಾಹನ ಚಲಾವಣೆ, ಚಲಾಯಿಸುವ ವಾಹನದ ತಾಂತ್ರಿಕ ಪರಿಶೀಲನೆ ನಡೆಸದೆ ಇರುವ ವಿಷಯಗಳ ಬಗ್ಗೆ ಉಂಟಾಗುವ ದುರ್ಘಟನೆಗಳು, ಮತ್ತು ವಾಹನ ಹಾಗೂ ಜೀವ ವಿಮಾ ಪಾಲಿಸಿಯ ಬಗ್ಗೆ ಕಾಳಜಿ ವಹಿಸದೆ ರಸ್ತೆ ನಿಯಮಗಳನ್ನು ಗಾಳಿಗೆ ತೂರಿ ಅದರಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ನೀಡಿ ಎಲ್ಲರೂ ರಸ್ತೆ ಮತ್ತು ಸಂಚಾರ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸುಳ್ಯ ರೋಟರಿ ಕ್ಲಬ್ ದೇರ್ಲಕಟ್ಟೆ ಅಧ್ಯಕ್ಷೆ ಲತಾ, ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಆನಂದ ಖಂಡಿಗ, ರೋಟರಿ ಕ್ಲಬ್ ಸುಳ್ಯ ಸಿಟಿ ಅಧ್ಯಕ್ಷ ಗಿರೀಶ್ ನಾರ್ಕೋಡು, ಕಿನ್ನಿಗೋಳಿ ರೋಟರಿಯ ಶರತ್ ಕಿನ್ನಿಗೋಳಿ, ಪದಾಧಿಕಾರಿಗಳಾದ ಕಸ್ತೂರಿ ಶಂಕರ್, ಡಾ. ಕೇಶವ ಪಿ.ಕೆ., ಚಂದ್ರಶೇಖರ ಪೇರಾಲು, ಪ್ರಭಾಕರನ್ ನಾಯರ್, ಅಬ್ದುಲ್ ಹಮೀದ್ ಜನತಾ, ಮುರಳೀಧರ ರೈ, ಗಣೇಶ್ ಭಟ್, ಎಂ ಮೀನಾಕ್ಷಿ ಗೌಡ, ಅವಿನ್ ರಂಗತ್ತಮಲೆ, ಮಧುರ ಎಂ. ಆರ್, ಯೋಗಿತ ಗೋಪಿನಾಥ್, ಪ್ರಮೋದ್ ಕುಮಾರ್ ಕೆ, ಅಶೋಕ್ ಕೊಯಿಂಗೋಡಿ, ಪ್ರೀತಮ್ ಡಿ.ಕೆ., ಶಿವಪ್ರಸಾದ್ ಕೆ.ವಿ., ಗಿರಿಜಾ ಶಂಕರ್, ಪ್ರಭಾಕರನ್ ನಾಯರ್ ಸಿ. ಎಚ್., ಹರಿರಾಯ ಕಾಮತ್, ಶ್ರೀಹರಿ ಪೈಂದೋಡಿ, ಸತೀಶ್ ಕೆ. ಜಿ., ಹಾಗೂ ರೋಟರಿ ಶಾಲಾ ೯ನೇ ತರಗತಿ ವಿದ್ಯಾರ್ಥಿಗಳು, ಶಾಲಾ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು.
ಆನಂದ್ ಖಂಡಿಗ ಸ್ವಾಗತಿಸಿ, ಗಿರೀಶ್ ನಾರ್ಕೊಡು ವಂದಿಸಿದರು. ಪ್ರೀತಮ್ ಡಿ. ಕೆ. ಕಾರ್ಯಕ್ರಮ ನಿರೂಪಿಸಿದರು.
ಸುಳ್ಯ ಜ್ಯೋತಿ ವೃತ್ತದಿಂದ ವಾಹನದ ಮೂಲಕ ಜಾಗೃತಿ ಅಭಿಯಾನದ ಗೀತೆ, ಮತ್ತು ಅರಿವನ್ನು ಮೂಡಿಸುತ್ತಾ ಜಾಥಾ ಸುಳ್ಯ ಮುಖ್ಯಪೇಟೆಯಲ್ಲಿ ಚಲಿಸಿ ಗಾಂಧಿನಗರ ಪೆಟ್ರೋಲ್ ಬಂಕ್ ಬಳಿ ಸಮರೋಪಗೊಂಡಿತು.