ಅರಂತೋಡು – ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

0

214 ಕೋಟಿ ವಾರ್ಷಿಕ ವ್ಯವಹಾರ 23.5 ಲಕ್ಷ ನಿವ್ವಳ ಲಾಭ – 5.25 ಡಿವಿಡೆಂಡ್ ಘೋಷಣೆ

ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಅವರ ಅಧ್ಯಕ್ಷತೆಯಲ್ಲಿ ಸಿರಿಸೌಧ ಸಭಾಂಗಣದಲ್ಲಿ ಸೆ.24ರಂದು ನಡೆಯಿತು.


ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಹಕಾರಿ ಸಂಘದ ಸದಸ್ಯರಿಂದ ಸಂಘಕ್ಕೆ ಬರುವ ಲಾಭವನ್ನು ಪರಿಗಣಿಸಿ ಆ ಮೂಲಕ ಡಿವಿಡೆಂಡ್ ಆಗಿ ಸದಸ್ಯರಿಗೆ ಈ ಹಿಂದೆ ಹಂಚುತ್ತಿದ್ದೇವು. ಪ್ರತೀ ವರ್ಷ ಹತ್ತರಿಂದ ಇಪ್ಪತ್ತೈದು ಪೋವಿಜನ್ ಇಟ್ಟು ಕಡಿಮೆ ಮಾಡುತ್ತಾ ಬರುತ್ತಿದ್ದೇವು. ಇದರಿಂದ ಈ ಬಾರಿ ಡಿವಿಡೆಂಡ್ ಕಡಿಮೆ ನೀಡಲಾಗುತ್ತದೆ. ಸದಸ್ಯರು ಸಹಕರಿಸುವಂತೆ ವಿನಂತಿಸಿಕೊಂಡರು.

ಸಂಘವು 2022-23ನೇ ಸಾಲಿನ ಆರ್ಥಿಕ ವರ್ಷದಲ್ಲಿ
214 ಕೋಟಿ ವಾರ್ಷಿಕ ವ್ಯವಹಾರ ನಡೆಸಿದ್ದು, 23.5 ಲಕ್ಷ ನಿವ್ವಳ ಲಾಭ ಶೇ. 5.25 ಡಿವಿಡೆಂಡ್ ಈ ಬಾರಿ ಸದಸ್ಯರುಗಳಿಗೆ ನೀಡಲಾಗುವುದು ಎಂದರಲ್ಲದೇ, ಮುಂದಿನ ವರ್ಷದಲ್ಲಿ ಬರುವ ಆದಾಯವನ್ನು ನೇರವಾಗಿ
ಡಿವಿಡೆಂಡ್ ಮೂಲಕ ಸದಸ್ಯರುಗಳಿಗೆ ನೀಡುತ್ತೇವೆ‌ ಎಂದು ಹೇಳಿದರು.

ಭವಾನಿಶಂಕರ ಅಡ್ತಲೆ ಮಾತನಾಡಿ
ಈ ಬಾರಿ ಹೆಚ್ಚಿನ ಡಿವಿಡೆಂಟ್ ಸಿಗಬಹುದೆಂಬ ನಿರೀಕ್ಷೆ ಇಟ್ಟುಕೊಂಡು ಬಂದಿದ್ದೇವೆ. ಆದ್ದರಿಂದ ಡಿವಿಡೆಂಡ್ ಜಾಸ್ತಿ ನೀಡಬೇಕು ಎಂದು ಹೇಳಿದರು.

ಸಹಕಾರಿ ಸಪ್ತಾಹದಿಂದ ಸಂಘಕ್ಕೆ, ಸಹಕಾರಿಗಳಿಗೆ ಪ್ರಯೋಜನವಿದೆಯಾ ಎಂದು ಕೆ.ಆರ್. ಗಂಗಾಧರ ಅವರು ಕೇಳಿದರು.
ಅನಿವಾರ್ಯವಾಗಿ ಸಹಕಾರಿ ಸಪ್ತಾಹದಲ್ಲಿ ಭಾಗವಹಿಸಲೇ ಬೇಕಾಗಿರುವುದರಿಂದ ಬಜೆಟ್ ಕಡಿಮೆ ಮಾಡಿಕೊಂಡು ಸಹಕಾರಿ ಸಪ್ತಾಹ ಆಚರಣೆ ಮಾಡಬಹುದಾಗಿದೆ. ತಾಲೂಕು ಸಹಕಾರಿ ಯೂನಿಯನ್ ಸಭೆಯಲ್ಲಿಯೂ ಈ ಬಗ್ಗೆ ಪ್ರಸ್ತಾಪ ಮಾಡುವುದಾಗಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಹೇಳಿದರು.

ಸಂಘದ ವತಿಯಿಂದ ಕಾರ್ಯಾಚರಿಸುತ್ತಿರುವ ಸಮೃದ್ಧಿ ಮಾರ್ಟ್ ಗೆ ಸಲಹಾ ಸಮಿತಿ ರಚನೆ ಮಾಡುವಂತೆ ಭವಾನಿಶಂಕರ ಅಡ್ತಲೆ ಅವರು ಸಲಹೆ ನೀಡಿದರು.


ಸದಸ್ಯರಾಗಲೀ ನಿರ್ದೇಶಕರಾಗಲೀ ಸಂಘದಿಂದ ಪಡೆದ ಸಾಲವನ್ನು ನಿಗದಿತ ಸಮಯದಲ್ಲಿ ಮರುಪಾವತಿ ಮಾಡಲೇಬೇಕು. ನಿರ್ದೇಶಕರುಗಳಿಗೆ ಒಂದು ಕಾನೂನು, ಸದಸ್ಯರಿಗೆ ಒಂದು ಕಾನೂನು ಇಲ್ಲ‌ ಎಂದು ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಹೇಳಿದರು.

ಸಾಲ ನೀಡಲು ಎರಡು ಜಾಮೀನು ಬದಲು ಒಂದು ಜಾಮೀನು ತೆಗೆದುಕೊಳ್ಳುವಂತೆ ಅಶ್ರಫ್ ಗುಂಡಿ ಅವರು ಸಲಹೆ ನೀಡಿದರು.
ಸಹಕಾರಿ ಬೈಲಾ ಪ್ರಕಾರ ಸದಸ್ಯರಿಗೆ ಸಾಲ ನೀಡಲು ಎರಡು ಜಾಮೀನು ಅಗತ್ಯ. ಆದ್ದರಿಂದ ಅದನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಅಧ್ಯಕ್ಷರು ಹೇಳಿದರು.

ಯಶಸ್ವಿನಿ ಯೋಜನೆಯಲ್ಲಿ ಆಸ್ಪತ್ರೆಯಲ್ಲಿ ಸದಸ್ಯರಿಗೆ ಪ್ರಯೋಜನವಾಗುತ್ತಿಲ್ಲ ಎಂದು ಭವಾನಿಶಂಕರ ಅಡ್ತಲೆ ಅವರು ಕೇಳಿದ ಪ್ರಶ್ನೆಗೆ ಸುಳ್ಯ ಹಾಗೂ ಪುತ್ತೂರಿನ ಯಾವುದೇ ಆಸ್ಪತ್ರೆಯಲ್ಲಿ ಇದು ಪ್ರಯೋಜನವಾಗುತ್ತಿಲ್ಲ. ಸರ್ಕಾರದ ಮಟ್ಟದಲ್ಲಿ ಇದಕ್ಕೆ ಪ್ರಯತ್ನ ಮಾಡಬೇಕು ಎಂದು ಅಧ್ಯಕ್ಷ ಸಂತೋಷ್ ಅವರು ಹೇಳಿದರು.


ಸಹಕಾರಿ ಸಂಘದ ವತಿಯಿಂದ ಆಯುಷ್ಮಾನ್ ಕಾರ್ಡ್ ಶಿಬಿರ ಮಾಡುವಂತೆ ಶಿವಾನಂದ ಕುಕ್ಕುಂಬಳ ಅವರು ಸಲಹೆ ನೀಡಿದರು. ಈಗಾಗಲೇ ಒಂದು ಆಯುಷ್ಮಾನ್ ಕಾರ್ಡ್ ನೋಂದಣಿ ಶಿಬಿರ ಮಾಡಿದ್ದೇವೆ. ಸದಸ್ಯರಿಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ಇದನ್ನು ಪರಿಗಣನೆಗೆ ತೆಗೆದುಕೊಳ್ಳುವುದಾಗಿ ಅಧ್ಯಕ್ಷರು ಹೇಳಿದರು.


ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ಸಂಘದ ಸದಸ್ಯರುಗಳ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯಡಿ ಪೋತ್ಸಾಹಧನ ವಿತರಿಸಲಾಯಿತು. ಗ್ರಾಮದಲ್ಲಿ ವಿಶೇಷ ಸಾಧನೆ ಮಾಡಿದ ಕ್ರೀಡಾಪ್ರತಿಭೆಗಳಿಗೆ, ಗ್ರಾಮ ಪಂಚಾಯತಿ ತ್ಯಾಜ್ಯ ವಿಲೇವಾರಿ ಘಟಕದ ಸಿಬ್ಬಂದಿಗಳಿಗೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು. ಸಂಘದ ಸಮೃದ್ಧಿ ಮಾರ್ಟ್ ನಲ್ಲಿ ಅತೀ ಹೆಚ್ಚು ವ್ಯವಹಾರ ನಡೆಸಿದ ಗ್ರಾಹಕರಿಗೆ ಗೌರವಾರ್ಪಣೆ ಮಾಡಲಾಯಿತು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾಸುದೇವ ನಾಯಕ್ ಸ್ವಾಗತಿಸಿ, ನಿರ್ದೇಶಕ ಕುಸುಮಾಧರ ಅಡ್ಕಬಳೆ ವಂದಿಸಿದರು.

ಈ ಸಂದರ್ಭದಲ್ಲಿ ಸಹಕಾರಿ ಸಂಘದ ಉಪಾಧ್ಯಕ್ಷ ದಯಾನಂದ ಕುರುಂಜಿ, ನಿರ್ದೇಶಕರುಗಳಾದ ವಿನೋದ್ ಕುಮಾರ್ ಉಳುವಾರು, ಚಂದ್ರಶೇಖರ ಚೋಡಿಪಣೆ, ಕುಸುಮಾಧರ ಅಡ್ಕಬಳೆ, ನಿಧೀಶ್ ಎ, ಸಂತೋಷ್ ಚಿಟ್ಟನ್ನೂರು, ಶ್ರೀಮತಿ ಭಾರತಿ ಪಿ., ಶ್ರೀಮತಿ ಚಿತ್ರಾ ಶಶಿಧರ ದೇರಾಜೆ, ಸೋಮಯ್ಯ ಹೆಚ್., ಗಣೇಶ್ ಕರಿಂಬಿ, ವಿಜೇತ್ ಮರುವಳ, ಕೇಶವ ಅಡ್ತಲೆ, ಸಂಘದ ಆಂತರಿಕ ಲೆಕ್ಕ ಪರಿಶೋಧಕ ಅನಂತ ಕೃಷ್ಣ ಚಾಕೋಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.