ಶಿಕ್ಷಣಾಧಿಕಾರಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಮೇಲ್ವಿಚಾರಕಿ ಸಭೆಗೆ ಬಾರದಿರುವ ಹಿನ್ನೆಲೆ
ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಆಶ್ರಮ ಶಾಲೆಯ ಮೇಲ್ವಿಚಾರಕಿ ಸಭೆಗೆ ಬಾರದಿರುವ ಕಾರಣಕ್ಕೆಆಕ್ರೋಶಗೊಂಡ ನಾಗರಿಕರಿಂದ ಗ್ರಾಮ ಸಭೆ ಅರ್ಧಕ್ಕೆ ನಿಲ್ಲಿಸಿ ಮುಂದೂಡಿದ ಘಟನೆ ಆಲೆಟ್ಟಿ ಪಂಚಾಯತ್ ಗ್ರಾಮ ಸಭೆಯಲ್ಲಿ ಇಂದು ವರದಿಯಾಗಿದೆ.
ಆಲೆಟ್ಟಿ ಗ್ರಾಮ ಪಂಚಾಯತ್ ಇದರ ದ್ವಿತೀಯ ಹಂತದ ಗ್ರಾಮ ಸಭೆಯು ಸೆ.25 ರಂದು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವೀಣಾಕುಮಾರಿ ಆಲೆಟ್ಟಿ ಯವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಭವನದಲ್ಲಿ ಆರಂಭಗೊಂಡಿತು. ತೋಟಗಾರಿಕಾ ಇಲಾಖೆಯ ಅಧಿಕಾರಿ ನೊಡೆಲ್ ಅಧಿಕಾರಿ ಯಾಗಿದ್ದರು.
ಸಭೆಆರಂಭವಾಗುತ್ತಿದ್ದಂತೆ
ಇಲಾಖೆಯ ಎಲ್ಲಾ ಅಧಿಕಾರಿಗಳು ಇದ್ದರೆ ಮಾತ್ರ ಸಭೆ ನಡೆಸುವಂತೆ ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದರು.
ಗ್ರಾಮದ ಕುರಿತು ಚರ್ಚಿಸುವ ಸಂದರ್ಭದಲ್ಲಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಬಾರದಿದ್ದರೆ ಸಮರ್ಪಕ ಉತ್ತರ ಸಿಗುವುದಿಲ್ಲ. ಸಮಸ್ಯೆ ಪರಿಹಾರವಾಗುವುದಿಲ್ಲ ಎಂದು ಸುದರ್ಶನ ಪಾತಿಕಲ್ಲು ಹೇಳಿದರು.
ಕೋಲ್ಚಾರು ಭಾಗದ 2 ನೇ ವಾರ್ಡಿನ ಮಾಣಿಮರ್ದು ಕೊಡಂಬಾರೆ ಎಂಬಲ್ಲಿ ಮಂಜೂರಾದ ಮೋರಿ ಬದಲಾವಣೆಯ ಬಗ್ಗೆ ಶ್ರೀಧರ ಮಾಣಿಮರ್ದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಸದಸ್ಯ ದಿನೇಶ್ ಕಣಕ್ಕೂರು ಮಾಣಿಮರ್ದು ಎಂಬಲ್ಲಿಗೆ ವಿದ್ಯುತ್ ಸಂಪರ್ಕಕ್ಕಾಗಿ
ಮೆಸ್ಕಾಂ ಇಲಾಖೆಗೆ ಎಫ್.ಸಿನೀಡಿರುವುದರಿಂದ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ರಸ್ತೆಗೆ ಮೋರಿ ಕೆಲಸ ಮಾಡುವುದರಿಂದ ವಿದ್ಯುತ್ ಸಂಪರ್ಕದ ಕೆಲಸಕ್ಕೆ ಅಡ್ಡಿಯಾಗುತ್ತದೆ ಎಂದು ಅಧಿಕಾರಿಗಳು ನೀಡಿದ ಸೂಚನೆ ಮೇರೆಗೆ ಬಂದಿರುವ ಅನುದಾನ ಲ್ಯಾಪ್ಸ್ ಆಗಬಾರದೆಂದು ಅದೇ ವಾರ್ಡಿನ ಬಿಲ್ಲರಮಜಲು ಎಂಬಲ್ಲಿಗೆ ಬದಲಾಯಿಸಿ ಮೋರಿ ನಿರ್ಮಿಸಲಾಗಿದೆ ಎಂದು ಹೇಳಿದರು.
ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ರಸ್ತೆ ದುರಸ್ತಿಗೆ ಮಾತ್ರ ಅವಕಾಶ ಇರುವುದು.ಅಭಿವೃದ್ಧಿ ಹೊಸ ಕಾಮಗಾರಿ ಮಾಡಲು ಅವಕಾಶವಿರುವುದಿಲ್ಲ.
ಕಿರಿದಾದ ಮೋರಿ ನಿರ್ಮಿಸವುದಕ್ಕೆ ಅಡ್ಡಿಯಿಲ್ಲ ಎಂದು
ಅರಣ್ಯ ಇಲಾಖೆಯ ಅಧಿಕಾರಿಯವರು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸದಸ್ಯ ಧರ್ಮಪಾಲ ಕೊಯಿಂಗಾಜೆ ಯವರು ಆಡಳಿತ ಮಂಡಳಿಯ ಸದಸ್ಯರು ಒಪ್ಪಿಗೆ ನೀಡಿದರೆ
ಮುಂದಿನ ಕ್ರಿಯಾ ಯೋಜನೆಯಲ್ಲಿ ಮಾಣಿಮರ್ದು ಕೊಡಂಬಾರೆಯಲ್ಲಿ ಅವಶ್ಯಕತೆ ಇರುವ 2 ಮೋರಿ ರಚನೆಗೆ ಅನುದಾನ ಇರಿಸಿ ನಿರ್ಮಿಸುವುದಾಗಿ ಭರವಸೆ ನೀಡಿದರು.
ಆಲೆಟ್ಟಿ ಸರಕಾರಿ ಪ್ರೌಢಶಾಲೆಯಲ್ಲಿ ಖಾಯಂ ಹಿಂದಿ ಶಿಕ್ಷಕರೊರ್ವರು ಕಳೆದ ಕೆಲ ಸಮಯಗಳಿಂದ ಸರಿಯಾಗಿ ಶಾಲೆಗೆ ಹಾಜರಾಗದೆ ಮಕ್ಕಳಿಗೆ ಪಾಠ ಪ್ರವಚನ ನಡೆಯುತ್ತಿಲ್ಲ.
ಶಾಲೆಗೆ ಬರುವಾಗ
ಮದ್ಯ ಸೇವಿಸಿಕೊಂಡು ಬರುವುದಲ್ಲದೆ ಅನುಚಿತವಾಗಿ ವರ್ತಿಸುತ್ತಿರುವುದರಿಂದ ಶಾಲೆಯ ವಾತಾವರಣ ಹಾಳಾಗುತ್ತಿದೆ. ಶಾಲೆಯ ಗೌರವಕ್ಕೆ ಕುಂದು ಉಂಟು ಮಾಡುತ್ತಿದ್ದಾರೆ. ಶಿಕ್ಷಕರ ಬದಲಾವಣೆಯ ಬಗ್ಗೆ ಕ್ಷೇತ್ರಶಿಕ್ಷಣಾಧಿಕಾರಿಯವರ ಗಮನಕ್ಕೆ ತಂದರೂ ವರ್ಗಾವಣೆ ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ಮಕ್ಕಳ ಭವಿಷ್ಯತ್ತಿನ ಗಂಭೀರ ಸಮಸ್ಯೆಯ ಕುರಿತು ಗ್ರಾಮ ಸಭೆಯಲ್ಲಿ ಮಹತ್ವದನಿರ್ಣಯವಾಗಬೇಕು.ಈ ಸಭೆಗೆ ಶಿಕ್ಷಣಾಧಿಕಾರಿಯವರು ಬಾರದಿದ್ದರೆ ಸಭೆ ಮುಂದೂಡುವಂತೆ ಗ್ರಾಮಸ್ಥರಾದ ಧನಂಜಯ ಕುಂಚಡ್ಕ, ರಾಧಾಕೃಷ್ಣಪರಿವಾರಕಾನ, ಸುದರ್ಶನ ಪಾತಿಕಲ್ಲು, ರಾಧಾಕೃಷ್ಣ ಕೋಲ್ಚಾರು, ವೆಂಕಪ್ಪ ಮಾಸ್ತರ್ ಕುಂಚಡ್ಕ ಮತ್ತಿತರರು ಒತ್ತಾಯಿಸಿದರು.
ಆಲೆಟ್ಟಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ವಾಲ್ಮೀಕಿ ಆಶ್ರಮ ಶಾಲೆ ಇದೆ. ಭಾರತದ ಸಂಸ್ಕೃತಿ ಆಚಾರ ವಿಚಾರಗಳ ಜತೆ ಮಕ್ಕಳಿಗೆ ಶಿಕ್ಷಣ ಹಾಗೂ ಸುಸಜ್ಜಿತ ವಸತಿ ವ್ಯವಸ್ಥೆ ಇದೆ. ಸುಮಾರು 50 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಪೋಷಕರ ಸಮಿತಿ ಎಲ್ಲಾ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಿದ್ದಾರೆ. ಮಕ್ಕಳ ಮಧ್ಯೆ ಸಣ್ಣ ಪುಟ್ಟ ವಿಚಾರದ ಕುರಿತು ಪೋಷಕರು ವಿಚಾರಿಸಿರುವುದನ್ನು ಆಕ್ಷೇಪಿಸಿದ ಮೇಲ್ವಿಚಾರಕಿ ಪೋಷಕರ ಗಮನಕ್ಕೆ ತಾರದೆ ಏಕಾಏಕಿ ಪೋಷಕರ ಸಮಿತಿ ಅನರ್ಹಗೊಳಿಸಿರುತ್ತಾರೆ. ಮಕ್ಕಳ ದೈನಂದಿನ ಆಚಾರ ವಿಚಾರಗಳನ್ನು ಬದಲಾಯಿಸುವಂತೆ ಒತ್ತಡ ಹೇರಿ ಮಕ್ಕಳಲ್ಲಿ ಭಯದ ವಾತವರಣ ನಿರ್ಮಿಸಿರುತ್ತಾರೆ.
ಕನ್ನಡ ಭಾಷೆ ತಿಳಿಯದ ಕೇರಳದಿಂದ ಶಿಕ್ಷಕಿಯೊಬ್ಬರನ್ನು ನಿಯಮ ಮೀರಿ ಪೋಷಕರ ಸಮಿತಿಯ ಗಮನಕ್ಕೆ ತಾರದೆ ನೇಮಕ ಮಾಡಿದ್ದಾರೆ. ಇದರಿಂದ ಮಕ್ಕಳಿಗೆ ಗೊಂದಲ ಉಂಟಾಗಿದೆ ಎಂದು ಶ್ರೀಧರ ಮಾಣಿಮರ್ದು, ಲತೀಶ್ ಗುಂಡ್ಯ, ಅಶೋಕ ಪೀಚೆ ಮತ್ತಿತರರು ಆರೋಪಿಸಿದರು. ಇಲಾಖೆಯ ಅಧಿಕಾರಿಗಳು ಅಥವಾ ಮೇಲ್ವಿಚಾರಕಿ ಸಭೆಗೆ ಬಂದು ಉತ್ತರಿಸುವಂತೆ ಪಟ್ಟು ಹಿಡಿದರು.
ಎರಡು ಶಾಲೆಯ ಗೊಂದಲದ ವಿಚಾರದ ಬಗ್ಗೆ ಪರಸ್ಪರ ದೀರ್ಘಕಾಲದ ಚರ್ಚೆ ನಡೆಯಿತು. ನೊಡೆಲ್ ಅಧಿಕಾರಿ ದೂರವಾಣಿ ಮೂಲಕ ಅಧಿಕಾರಿಗಳನ್ನು ಸಂಪರ್ಕಿಸಿದರು. ಶಿಕ್ಷಣಾಧಿಕಾರಿಯವರು ಮಂಗಳೂರಿನಲ್ಲಿ ಸಭೆ ಇದ್ದುದರಿಂದ ಬದಲಾಗುವುದಿಲ್ಲ ಎಂದು ತಿಳಿಸಿದರು.
ಹಾಸ್ಟೆಲ್ ಮೇಲ್ವಿಚಾರಕಿ ಆಶ್ರಿಯಾ ರವರು ಬರುವುದಾಗಿ ಹೇಳಿ ಗಂಟೆ ಕಳೆದರೂ ಬಾರದಿರುವುದರಿಂದ ದರಿಂದ ಆಕ್ರೋಶಗೊಂಡ
ಗ್ರಾಮಸ್ಥರು ಗ್ರಾಮ ಸಭೆಯನ್ನು ಅಧಿಕಾರಿಗಳಿಬ್ಬರು ಬಾರದಿರುವುದರಿಂದ ಮುಂದೂಡಬೇಕು ಎಂದು ಒತ್ತಾಯಿಸಿದರು.
ಶಿಕ್ಷಣಾಧಿಕಾರಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಆಶ್ರಮ ಶಾಲೆಯ ಮೇಲ್ವಿಚಾರಕಿ ಬಾರದಿರುವ ಕಾರಣಕ್ಕೆ ಸಭೆ ಮುಂದೂಡಲಾಗಿದೆ ಎಂದು ಅಧ್ಯಕ್ಷರು ಘೋಷಿಸಿದರು.
ಪಂಚಾಯತ್ ಉಪಾಧ್ಯಕ್ಷ ರು, ಸದಸ್ಯರು, ಪಿ.ಡಿ.ಒ, ಇಲಾಖೆಯ ಅಧಿಕಾರಿಗಳು ವೇದಿಕೆಯಲ್ಲಿದ್ದರು. ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿದರು.