ದೇವಚಳ್ಳ ಗ್ರಾ.ಪಂ.ಅಧ್ಯಕ್ಷತೆಗೆ ಅಕ್ಟೋಬರ್ 4 ರಂದು ಚುನಾವಣೆ ನಿಗದಿ

0

ಎರಡು ಬಾರಿ ಮುಂದೂಡಲ್ಪಟ್ಟ ದೇವಚಳ್ಳ ಗ್ರಾ.ಪಂ. ಚುನಾವಣೆಗೆ ಮತ್ತೆ ದಿನಾಂಕ ನಿಗದಿಯಾಗಿದೆ. ಅ.4 ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿ ಅರಬಣ್ಣ ಪೂಜೇರಿ ತಿಳಿಸಿದ್ದಾರೆ.

ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಆಯ್ಕೆ ಆ.4 ರಂದು ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಅದರಂತೆ ಅಧ್ಯಕ್ಷ ಸ್ಥಾನಕ್ಕೆ ಈ ಹಿಂದೆ ಅಧ್ಯಕ್ಷರಾಗಿದ್ದ ಸುಲೋಚನಾ ದೇವ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಲೀಲಾವತಿ ಸೇವಾಜೆಯವರು ನಾಮಪತ್ರ ಸಲ್ಲಿಸಿದ್ದರು. ಮಧ್ಯಾಹ್ನ ಒಂದು ಗಂಟೆಯ ವೇಳೆಗೆ ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದ ನಾಮಪತ್ರವನ್ನು ಸುಲೋಚನಾ ದೇವರವರು ಹಿಂಪಡೆದರು. ಹೀಗಾಗಿ ಚುನಾವಣಾ ಅಧಿಕಾರಿಯಾಗಿದ್ದ ತೋಟಗಾರಿಕಾ ಇಲಾಖೆಯ ಸಹಾಯಕ ಅಧಿಕಾರಿ ಅರಬಣ್ಣ ಪೂಜೇರಿಯವರು ಅಧ್ಯಕ್ಷ ಸ್ಥಾನ ಆಯ್ಕೆ ಪ್ರಕ್ರಿಯೆಯನ್ನು ಆ.11 ಕ್ಕೆ ಮುಂದೂಡಿದ್ದರು. ಲೀಲಾವತಿ ಸೇವಾಜೆಯವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು.

ಆ.11 ರಂದು ಅಧ್ಯಕ್ಷರ ಆಯ್ಕೆಗೆ ಬಿ.ಜೆ.ಪಿ.ಯ ಪ್ರೇಮಲತಾ ಕೇರ ಹಾಗೂ ಸ್ವಾಭಿಮಾನಿ ಬಳಗದ ಪರವಾಗಿ ಸುಲೋಚನಾ ದೇವರವರು ನಾಮಪತ್ರ ಸಲ್ಲಿಸಿದರು. ಸ್ವಲ್ಪ ಹೊತ್ತಿನ ಬಳಿಕ ಇಬ್ಬರು ಅಭ್ಯರ್ಥಿಗಳು ಏಕಕಾಲದಲ್ಲಿ ನಾಮಪತ್ರ ಹಿಂಪಡೆದರು. ಹೀಗಾಗಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮತ್ತೆ ಮುಂದೂಡಲ್ಪಟ್ಟಿತ್ತು.

ಹೀಗಾಗಿ ಚುನಾವಣಾಧಿಕಾರಿಯಾಗಿದ್ದ ಅರಬಣ್ಣ ಪೂಜಾರಿಯವರು, ಅಧ್ಯಕ್ಷತೆಗೆ ನಾಮಪತ್ರ ಸಲ್ಲಿಸಿ ವಾಪಸ್ ತೆಗೆದುಕೊಂಡ ಬಗ್ಗೆ ಸುಲೋಚನಾ ದೇವ ಮತ್ತು ಪ್ರೇಮಲತಾ ಕೇರರವರಿಗೆ ಜಿಲ್ಲಾಧಿಕಾರಿಗಳ ಆದೇಶದಂತೆ ಕಾರಣ ಕೇಳಿ ನೋಟೀಸ್ ಮಾಡಿದ್ದರು. ಇದಕ್ಕೆ ಅವರು ಉತ್ತರಿಸಿ, ನಾವು ಅಂದು ಸ್ವಇಚ್ಛೆಯಿಂದ ನಾಮಪತ್ರ ಹಿಂತೆಗೆದುಕೊಂಡಿದ್ದೆವು. ಪುನಹ ಚುನಾವಣೆ ನಿಗದಿಪಡಿಸಿದರೆ, ನಾವು ಸ್ಪರ್ಧಿಸಲು ಉತ್ಸುಕರಾಗಿದ್ದೇವೆ ಎಂದು ಉತ್ತರಿಸಿದರು.


ಆ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಅರಬಣ್ಣ ಪೂಜೇರಿಯವರು, ಅ.4 ರಂದು ಅಧ್ಯಕ್ಷತೆಗೆ ಚುನಾವಣೆ ನಡೆಯುವುದೆಂದು ಪ್ರಕಟಣೆ ಹೊರಡಿಸಿದ್ದಾರೆ.