ವೇದಮೂರ್ತಿ ಲಕ್ಷ್ಮೀನಾರಾಯಣ ಭಟ್ ಚೂಂತಾರುರವರ ಸ್ಮರಣಾರ್ಥ ವೈದಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸುವ ಕಾರ್ಯಕ್ರಮವನ್ನು ಅವರ ಪುಣ್ಯತಿಥಿಯ ದಿನ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯಲಿದ್ದು, ಪ್ರಥಮ ಪುರಸ್ಕಾರ ಅ. 3ರಂದು ಚೂಂತಾರಿನ ಉಪಾಸನ ಮನೆಯಲ್ಲಿ ನಡೆಯಲಿದೆ. ಕೊಳ್ತಿಗೆ ಗ್ರಾಮದ ಚೌರ್ಕಾಡು ಮನೆತನದವರಾದ ದರ್ಭೆ ವೆಂಕಟ್ರಮಣ ಭಟ್ ಮತ್ತು ಐವರ್ನಾಡು ದೇವಸ್ಥಾನದ ಅರ್ಚಕರಾದ, ಪರಕ್ಕಜೆ ಮೂಲದ ಪದ್ಮನಾಭ ಭಟ್ ಪ್ರಥಮ ವೈದಿಕ ಪುರಸ್ಕಾರ ಪಡೆಯಲಿದ್ದಾರೆ.
ವೆಂಕಟ್ರಮಣ ಭಟ್ ರವರು ಆರ್ಷೇಯ ಪರಂಪರೆಯ ಜ್ಯೋತಿಃಶಾಸ್ತ್ರವನ್ನು ನಿರಂತರ ಅಧ್ಯಯನ ಮಾಡಿ ಸುಮಾರು 45 ವರ್ಷಗಳಿಂದ ಗೃಹನಿರ್ಮಾಣ, ಜಾತಕ ಚಿಂತನೆ, ವಿವಾಹಾದಿ ಮಂಗಳ ಕಾರ್ಯಗಳಿಗೆ ಹಾಗೂ ದೇವಸ್ಥಾನಗಳ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಮಾರ್ಗದರ್ಶನ ನೀಡುತ್ತಾ ಜ್ಯೋತಿಃಶಾಸ್ತ್ರದಲ್ಲಿ ಪ್ರಾವಿಣ್ಯತೆ ಪಡೆದು “ಮಾಡಾವು ಜೋಯಿಸ”ರೆಂದೇ ಖ್ಯಾತಿ ಹೊಂದಿರುತ್ತಾರೆ.
ಇನ್ನೊಬ್ಬ ಸನ್ಮಾನಿತರು ಐವರ್ನಾಡಿನ ದೇರಾಜೆ ಪಂಚಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಪದ್ಮನಾಭ ಭಟ್ಟರು. ಸುಮಾರು 30 ವರ್ಷಗಳಿಂದ ದೇವರ ಪೂಜಾ ಕೈಂಕರ್ಯವನ್ನು ನಿಷ್ಠೆಯಿಂದ ಮಾಡುತ್ತಾ ಬಂದಿರುವ ಇವರು ಜನಾನುರಾಗಿ ವ್ಯಕ್ತಿತ್ವದರು. ಈ ಇಬ್ಬರು ಸಾಧಕರಿಗೆ ಅ.3ರಂದು ವೈದಿಕರತ್ನ ಪ್ರಶಸ್ತಿ ನೀಡಿ ಗೌರವ ಸಮರ್ಪಣೆ ನಡೆಯಲಿದೆ. ಪ್ರಶಸ್ತಿ ರೂ. 5000/- ಮೊತ್ತದೊಂದಿಗೆ, ಸನ್ಮಾನಪತ್ರವನ್ನು ಒಳಗೊಂಡಿರುತ್ತದೆ.
ಸನ್ಮಾನ ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಮಹೇಶ್ ಭಟ್ ಚೂಂತಾರು, ಡಾ. ಮುರಲಿಮೋಹನ್ ಚೂಂತಾರು, ನಾಕೇಶ ಚೂಂತಾರು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಸನ್ಮಾನ ಸಮಿತಿ ಸಂಚಾಲಕರಾದ ಬೆಳಾಲು ಶ್ರೀ ಮಂಜುನಾಥೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ಚೂಂತಾರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.