ಡಾ. ಜ್ಯೋತಿ ಆರ್. ಪ್ರಸಾದ್ ರಿಂದ ತುರ್ತು ಪತ್ರಿಕಾಗೋಷ್ಠಿ

0

ಅಕಾಡೆಮಿ ಪದಾಧಿಕಾರಿಗಳಿಂದ ನಮ್ಮ ಶಿಕ್ಷಣ ಸಂಸ್ಥೆಗಳಿಗೆ ದಾಳಿ : ಆರೋಪ

ನಾವು ನೋವಿನಲ್ಲಿರುವ ಸಂದರ್ಭದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪದಾಧಿಕಾರಿಗಳು ನಮಗೆ ಸಂಬಂಧಪಟ್ಟ ವಿದ್ಯಾಸಂಸ್ಥೆಗೆ ಬಂದು ದಬ್ಬಾಳಿಕೆ ನಡೆಸತೊಡಗಿದ್ದಾರೆ. ಇನ್ನು ಮುಂದೆ ನಾವೇ ಸಂಸ್ಥೆಯನ್ನು ನೋಡಿಕೊಳ್ಳುತ್ತೇವೆ. ರೇಣುಕಾ ಪ್ರಸಾದರು ಇನ್ನು ಬರಲಾಗುವುದಲ್ಲ – ಎಂದು ಹೇಳಿ ನಮ್ಮ ಸಂಸ್ಥೆಗಳ ಸಿಬ್ಬಂದಿಗಳಿಗೆ ಆತಂಕ ಮತ್ತು ಗಾಬರಿ ಉಂಟುಮಾಡಿದ್ದಾರೆ. ಇದು ಸರಿಯಲ್ಲ “
ಎಂದು ಡಾ.ಕೆ.ವಿ. ರೇಣುಕಾಪ್ರಸಾದ್ ಅವರ ಪತ್ನಿ ಡಾ. ಜ್ಯೋತಿ ಆರ್.ಪ್ರಸಾದ್ ಆರೋಪಿಸಿದ್ದಾರೆ.


ಇಂದು ಮಧ್ಯಾಹ್ನ ಕೆವಿಜಿ ಪಾಲಿಟೆಕ್ನಿಕ್ ಕಚೇರಿಯ ಎದುರುಗಡೆ ಕರೆದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ” ನನ್ನ ಯಜಮಾನರು ಈಗ ಆಸ್ಪತ್ರೆಯಲ್ಲಿದ್ದಾರೆ. ನಾವು ನೋವು ಮತ್ತು ಸಂಕಟದ ಸಮಯದಲ್ಲಿದ್ದೇವೆ. ಇಂತಹ ಸಮಯದಲ್ಲೂ ಅವರು ಏಕಾಏಕಿ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲರ ಕಚೇರಿಗೆ ಬಂದು ಇನ್ನು ನಾವೇ ಕಾಲೇಜು ನಡೆಸುವುದು ಎಂದು ಹೇಳಿದ್ದಾರೆ. ೨೦೦೯ರಿಂದಲೂ ನಮ್ಮ ಯಜಮಾನರು ಮಾವನವರು ಮಾಡಿದ ಒಪ್ಪಂದದ ಪ್ರಕಾರ ಈ ಸಂಸ್ಥೆಗಳನ್ನು ನೋಡಿಕೊಂಡು ಬಂದಿದ್ದಾರೆ. ಈಗ ಸ್ವಲ್ಪ ಸಮಸ್ಯೆ ಆಗಿದ್ದರೂ, ನಾವು ಸುಪ್ರೀಂ ಕೋರ್ಟಿಗೆ ಹೋಗಲಿದ್ದು, ಅಲ್ಲಿ ನ್ಯಾಯ ದೊರೆಯುವ ವಿಶ್ವಾಸವಿದೆ. ಅವರು ಬರುವವರೆಗೆ ನಾನು ಶಿಕ್ಷಣ ಸಂಸ್ಥೆಗಳನ್ನು ಒಳ್ಳೆಯ ರೀತಿಯಲ್ಲಿ ನೋಡಿಕೊಳ್ಳುತ್ತೇನೆ. ಈ ಹಿಂದೆಯೂ ಒಮ್ಮೆ ನಾನು ನೋಡಿಕೊಳ್ಳುತ್ತಿದ್ದೆ. ಈಗಲೂ ಅವರ ಅನುಪಸ್ಥಿತಿಯಲ್ಲಿ ನಾನೇ ನೋಡಿಕೊಳ್ಳುತ್ತೇನೆ. ಸಂಸ್ಥೆಗಳ ಹಿತ ಕಾಪಾಡುತ್ತೇನೆ” ಎಂದು ಹೇಳಿದರು.
ಸಂಸ್ಥೆಯ ನಿರ್ದೇಶಕತ್ವಕ್ಕೆ ಸಂಬಂಧಿಸಿದ ವಿಚಾರ ನ್ಯಾಯಾಲಯದಲ್ಲಿದೆ. ನಾನು ಮತ್ತು ನನ್ನ ಮಗಳು ಇಬ್ಬರೂ ಅಕಾಡೆಮಿಯ ನಿರ್ದೇಶಕರೇ ಆಗಿದ್ದೇವೆ. ಈ ಸಂದರ್ಭದಲ್ಲಿ ಅಕಾಡೆಮಿ ಪದಾಧಿಕಾರಿಗಳು ಈ ರೀತಿ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದರು.
ಘಟನೆ ನಡೆಯುವಾಗ ನಾನು ಇಲ್ಲಿರಲಿಲ್ಲ. ಈಗ ಬಂದಿದ್ದೇನೆ. ಅವರು ಮತ್ತೆ ಎರಡೂವರೆಗೆ ಇಲ್ಲಿ ಬಂದು ಸಭೆ ನಡೆಸುವುದಾಗಿ ಹೇಳಿದ್ದಾರಂತೆ. ಇದರಿಂದ ಸಂಸ್ಥೆಯ ಸಿಬ್ಬಂದಿಗಳಲ್ಲಿ ಈ ಸಂದರ್ಭದಲ್ಲಿ ಅವರ ಕ್ರಮ ಸರಿಯಲ್ಲ ಎಂದು ಹೇಳುವುದಕ್ಕೆ ನಾನೇ ಬಂದಿದ್ದೇನೆ ಎಂದು ಅವರು ಹೇಳಿದರು.
ಪುತ್ರಿ ಅಭಿಜ್ಞಾ ಆರ್. ಪ್ರಸಾದ್ ಈ ವೇಳೆ ಉಪಸ್ಥಿತರಿದ್ದರು. ಡಾ.ಕೆ.ವಿ.ರೇಣುಕಾಪ್ರಸಾದ್ ಅವರು ನೋಡಿಕೊಳ್ಳುತ್ತಿದ್ದ ವಿದ್ಯಾಸಂಸ್ಥೆಗಳ ಎಲ್ಲಾ ಸಿಬ್ಬಂದಿಗಳು ಈ ವೇಳೆ ಅಲ್ಲಿ ನೆರೆದಿದ್ದರು.