ಸ್ಪರ್ಧಾತ್ಮಕ ಪರೀಕ್ಷೆಗಳ ಬಗೆಗಿನ ಪೂರ್ವ ತಯಾರಿ ಮತ್ತು ಖಾಸಗಿ ಉದ್ಯೋಗಗಳ ನೇರ ಸಂದರ್ಶನ ಪೂರ್ವ ತಯಾರಿ ಬಗೆಗಿನ ತರಬೇತಿ ಕಾರ್ಯಾಗಾರವು ವಿದ್ಯಾಮಾತಾ ಅಕಾಡೆಮಿಯ ನೂತನ ಸುಳ್ಯ ಶಾಖೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸುಳ್ಯ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಪೇರಾಲ್ ರವರು ಉದ್ಘಾಟಿಸಿ, “ವಿದ್ಯಾಮಾತಾ ಅಕಾಡೆಮಿಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯೊಂದು ಸುಳ್ಯಕ್ಕೆ ಅತ್ಯಾವಶ್ಯಕತೆ ಇತ್ತು. ಈ ಭಾಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವವರು ತೀರಾ ವಿರಳ. ಈ ನಿಟ್ಟಿನಲ್ಲಿ ಪುತ್ತೂರಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ನೀಡುವುದರ ಮೂಲಕ ನೂರಾರು ವಿದ್ಯಾರ್ಥಿಗಳು ಸರಕಾರಿ ಹುದ್ದೆಗೆ ಆಯ್ಕೆಯಾಗುವಂತೆ ಮಾಡಿದ ವಿದ್ಯಾಮಾತಾ ಅಕಾಡೆಮಿಯು ಸುಳ್ಯದಲ್ಲಿ ಕೂಡ ಇಂತಹ ತರಬೇತಿಯನ್ನು ಪ್ರಾರಂಭ ಮಾಡಿದ್ದು, ತುಂಬಾ ಖುಷಿಯ ವಿಚಾರವಾಗಿದೆ. ಇದನ್ನು ಈ ಭಾಗದವರು ಸದುಪಯೋಗಪಡಿಸಿಕೊಳ್ಳಬೇಕು” ಎಂದು ಹೇಳಿ ತರಬೇತಿಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸಿದರು.
ಈ ಸಂದರ್ಭದಲ್ಲಿ ವಿದ್ಯಾಮಾತಾ ಅಕಾಡೆಮಿಯ ವತಿಯಿಂದ ಚಂದ್ರಶೇಖರ್ ಪೇರಾಲ್ ರವರನ್ನು ಸನ್ಮಾನಿಸಲಾಯಿತು. ವಿದ್ಯಾಮಾತಾ ಅಕಾಡೆಮಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಚಂದ್ರಾವತಿ ಬಡ್ಡಡ್ಕರವರು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣದ ಜೊತೆಗೆ ಉದ್ಯೋಗಗಳಿಗೆ ಸಂಬಂಧಿಸಿದ ವೃತ್ತಿಪರ ತರಬೇತಿಯ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ವಿದ್ಯಾಮಾತಾ ಅಕಾಡೆಮಿಯ ಅಧ್ಯಕ್ಷರಾದ ಭಾಗ್ಯೇಶ್ ರೈ ರವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
IAS, KAS, Banking ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿಯ ಬಗ್ಗೆ ತರಬೇತಿಯನ್ನು ಖ್ಯಾತ ಲೇಖಕರು, ವಿದ್ಯಾಮಾತಾ ಅಕಾಡೆಮಿಯ ಗೌರವ ತರಬೇತುದಾರರಾದ ಶ್ರೀ ಅರವಿಂದ ಚೊಕ್ಕಾಡಿ ನಡೆಸಿಕೊಟ್ಟರು. ತರಬೇತುದಾರರಾದ ಡಾ. ಚೈತ್ರ, ಹರ್ಷಿತಾ ಆಚಾರ್ಯ, ಚಂದ್ರಕಾಂತ್ ಗೌಡ ಸ್ಪರ್ಧಾತ್ಮಕ ಪರೀಕ್ಷೆಗಳ, ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಪಡೆಯಲು ಬೇಕಾಗಿರುವ ಉದ್ಯೋಗ ಕೌಶಲ್ಯತೆಗಳ ಬಗ್ಗೆ ಮಾಹಿತಿ ನೀಡಿದರು. ಸುಳ್ಯ ಶಾಖೆಯ ಕಛೇರಿ ಸಹಾಯಕಿ ಪೂರ್ಣಶ್ರೀ ಗೌಡ ಸಹಕರಿಸಿದರು.