ಪುತ್ತೂರು ತಾಲೂಕಿನ ಮಾಡಾವು ಸಮೀಪದ ಕಟ್ಟತ್ತಾರು ಎಂಬಲ್ಲಿ ಅ.15 ರಂದು ಸಂಜೆ ಸ್ನೇಹಿತರೊಂದಿಗೆ ವಾಲಿಬಾಲ್ ಆಟ ಮುಗಿಸಿ, ಅರಿಕ್ಕಿಲ ಸಮೀಪದ ಎರಕ್ಕಲ ಗೌರಿಹೊಳೆಗೆ ಈಜಲು ಹೋಗಿ ನಾಪತ್ತೆಯಾಗಿದ್ದ ಅರಂತೋಡು ನೆಹರೂ ಮೆಮೋರಿಯಲ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯ ಮೃತದೇಹ ಹೊಳೆಯ ಸಮೀಪದಲ್ಲಿ ಅ.16ರಂದು ಬೆಳಿಗ್ಗೆ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
ಮಾಡಾವಿನ ಕಟ್ಟತ್ತಾರು ಹಂಸ ಎಂಬವರ ಪುತ್ರ ಅರಂತೋಡು ನೆಹರೂ ಮೆಮೋರಿಯಲ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ತಸ್ಲೀಮ್ ಎಂಬವರು ಸಂಪಾಜೆಯ ತನ್ನ ಅಜ್ಜ ಎಂ.ಬಿ. ಇಬ್ರಾಹಿಂ ಅವರ ಮನೆಯಿಂದ ಅರಂತೋಡು ಕಾಲೇಜಿಗೆ ಬರುತ್ತಿದ್ದರು.
ಅ.೧೫ರಂದು ರಜೆಯ ಕಾರಣ ತನ್ನ ಮನೆಗೆ ತೆರಳಿದ್ದವರು ಸಂಜೆ ವೇಳೆಗೆ ಮನೆಯ ಸಮೀಪದ ಮೈದಾನದಲ್ಲಿ ಸ್ನೇಹಿತರೊಂದಿಗೆ ವಾಲಿಬಾಲ್ ಆಟ ಆಡಿ , ಬಳಿಕ ಸಮೀಪದ ಗೌರಿ ಹೊಳೆಗೆ ಈಜಲು ತೆರಳಿದ್ದರೆನ್ನಲಾಗಿದೆ. ಈ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು.
ಜೊತೆಗಿದ್ದ ಸ್ನೇಹಿತರು ಬಾಲಕನ ಮನೆಯವರಿಗೆ ವಿಷಯ ತಿಳಿಸಿದ ಮೇರೆಗೆ ಊರವರು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಸೇರಿ ಎಷ್ಟೇ ಹುಡುಕಾಟ ನಡೆಸಿದರೂ ಮೃತದೇಹ ಪತ್ತೆಯಾಗಿರಲಿಲ್ಲ. ಬಳಿಕ ರಾತ್ರಿಯಾದ ಕಾರಣ ಹುಡುಕಾಟ ನಿಲ್ಲಿಸಲಾಗಿತ್ತು.
ಅ.೧೬ರಂದು ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ನಡೆಸಿದಾಗ ಈಜಲು ತೆರಳಿದ್ದ ಜಾಗದ ಸಮೀಪದಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಮೃತ ಬಾಲಕನಿಗೆ 17 ವರ್ಷ ವಯಸ್ಸಾಗಿದ್ದು, ತಂದೆ ಹಂಸ ಕಟ್ಟತ್ತಾರು, ತಾಯಿ, ಓರ್ವ ಸಹೋದರ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.