ಎನ್ನೆಂಸಿ ಭೌತಶಾಸ್ತ್ರ ವಿಭಾಗ ಮತ್ತು ಐಕ್ಯೂಎಸಿ ವತಿಯಿಂದ ವಿಶ್ವ ಆಹಾರ ದಿನಾಚರಣೆ

0

ಸುರಕ್ಷಿತ ಆಹಾರ, ಉತ್ತಮ ಜೀವನಕ್ಕೆ ಆಧಾರ: ಸುಳ್ಯ ಆರೋಗ್ಯ ಶಿಕ್ಷಣ ಅಧಿಕಾರಿ ಪ್ರಮೀಳಾ ಟಿ.

ಸುಳ್ಯ, ಅ.16; ನೆಹರೂ ಸ್ಮಾರಕ ಮಹಾವಿದ್ಯಾಲಯ ಸುಳ್ಯ ಇಲ್ಲಿನ ಭೌತಶಾಸ್ತ್ರ ವಿಭಾಗ ಮತ್ತು ಐಕ್ಯೂಎಸಿ ಘಟಕಗಳ ವತಿಯಿಂದ ವಿಶ್ವ ಆಹಾರ ದಿನಾಚರಣೆ ಕಾರ್ಯಕ್ರಮ ಅಕ್ಟೋಬರ್ 16 ಸೋಮವಾರದಂದು ಕಾಲೇಜಿನ ದೃಶ್ಯ ಶ್ರವಣ ಕೊಠಡಿಯಲ್ಲಿ ನಡೆಯಿತು. ಸುಳ್ಯ ತಾಲೂಕು ಆರೋಗ್ಯ ಕಚೇರಿಯ ಆರೋಗ್ಯ ಶಿಕ್ಷಣ ಅಧಿಕಾರಿಯಾದ ಶ್ರೀಮತಿ ಪ್ರಮೀಳಾ ಟಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ, ಆರೋಗ್ಯ ಮತ್ತು ಶಿಕ್ಷಣ ನಮ್ಮೆರಡು ಕಣ್ಣುಗಳಿದ್ದಂತೆ. ನಮ್ಮ ಮೂಲ ಆಹಾರ ನೀರು. ನೀರೇ ಜೀವನ, ನೀರೇ ಆಹಾರ ಎಲ್ಲರಿಗೂ ದೊರಕುವಂತಾಗಬೇಕು ಎಂಬ ಧ್ಯೇಯದೊಂದಿಗೆ ಆಚರಿಸುತ್ತಿರುವ ವಿಶ್ವ ಆಹಾರ ದಿನದ ಮಹತ್ವವನ್ನು ಸವಿವರವಾಗಿ ತಿಳಿಸಿದರು. ಕೃಷಿ ಮೂಲ ದೇಶದಲ್ಲಿ ಸುಸ್ಥಿರ ಅಭಿವೃದ್ಧಿಗೆ ಪೂರಕ ಗುರಿಗಳ ಈಡೇರಿಕೆಗೆ ನಾವೆಲ್ಲರೂ ಶ್ರಮವಹಿಸಬೇಕು. ಶುದ್ಧ ನೀರು ಶುಚಿತ್ವಕ್ಕೆ ಹೆಚ್ಚು ಗಮನ ನೀಡಬೇಕು. ಬಡವರಿಗೂ ದುರ್ಬಲ ಸಮುದಾಯದವರಿಗೂ ಪೌಷ್ಟಿಕಾಂಶಯುಕ್ತ ಆಹಾರ ಸಿಗಬೇಕು. ಇದ್ದವರು ಸಾತ್ವಿಕ ಆಹಾರ ಸೇವಿಸುವಂತಾಗಬೇಕು. ಹಿಂದಿನ ಜೀವನಶೈಲಿಯಿಂದ ನಿತ್ಯ ವ್ಯಾಯಾಮ ದೊರಕುತ್ತಿತ್ತು ಈಗ ನಾವು ನಮ್ಮ ಜೀವನ ಪದ್ಧತಿಯನ್ನು ಸರಿ ಪಡಿಸಿಕೊಳ್ಳಬೇಕಾಗಿದೆ. ಸುರಕ್ಷಿತ ಆಹಾರ, ಉತ್ತಮ ಜೀವನಕ್ಕೆ ಆಧಾರ ಎಂದರು. ಆಹಾರ ಪದಾರ್ಥಗಳನ್ನು ತಯಾರಿಸುವ ಉದ್ಯಮ ನೋಂದಣಿ ಮತ್ತು ಪರವಾನಿಗೆ ಪಡೆದುಕೊಳ್ಳುವ ಮಾಹಿತಿ ನೀಡಿದರು. ಐಕ್ಯೂಎಸಿ ಸಂಯೋಜಕಿ ಡಾ. ಮಮತಾ ಕೆ ಮಾತನಾಡಿ ಸಂಪನ್ಮೂಲ ವ್ಯಕ್ತಿಗಳು ತಿಳಿಸಿದ ಮಾಹಿತಿ ಸಲಹೆಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಲು ಕರೆ ನೀಡಿದರು.


ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯಾದ ರತ್ನಾವತಿ ಡಿ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಶುಭಾಂಶನೆಗೈದರು.
ಭೌತಶಾಸ್ತ್ರ ವಿಭಾಗ ಮುಖ್ಯಸ್ಥರಾದ ಪ್ರೊ. ಸತ್ಯಪ್ರಕಾಶ್ ಡಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ಅಶ್ವಿನಿ ಕೆ ವಂದಿಸಿದರು. ದ್ವಿತೀಯ ವಿಜ್ಞಾನ ಪದವಿಯ ವಿದ್ಯಾರ್ಥಿಗಳಾದ ಆಶಿತಾ ಮತ್ತು ಧನ್ಯಶ್ರೀ ಪ್ರಾರ್ಥಿಸಿ, ಸೌಮ್ಯ ಅತಿಥಿಗಳನ್ನು ಪರಿಚಯಿಸಿದರು. ಅಂತಿಮ ವಿಜ್ಞಾನ ಪದವಿಯ ಸಂಜಯ್ ಕಾರ್ಯಕ್ರಮ ನಿರೂಪಿಸಿದರು.
ಕಾಲೇಜಿನ ಎಲ್ಲಾ ಉಪನ್ಯಾಸಕರು ಮತ್ತು ಉಪನ್ಯಾಸಕೇತರ ಸಿಬ್ಬಂದಿ ವರ್ಗದವರು ಹಾಗೂ ವಿಜ್ಞಾನ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.