ಸ್ಪರ್ಧಾ ಕಣದಲ್ಲಿರುವ ಏಕೈಕ ಭಾರತೀಯ ಮಹಿಳೆ
ಮಲೇಷ್ಯಾದಲ್ಲಿ ನೆಲೆಸಿರುವ ಸಂಪಾಜೆ ಮೂಲದ ಚೈತ್ರಾ ದೇವಜನ ಅವರು ಈ ಬಾರಿಯ ಮಿಸೆಸ್ ಮಲೇಷ್ಯಾ ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿ ಸಾಧನೆ ಮೆರೆದಿದ್ದಾರೆ.
ಸಂಪಾಜೆಯ ದೇವಜನ ದಿ.ಜಯಸೂರ್ಯ ಮತ್ತು ದಿ. ನಾಗವೇಣಿ ದಂಪತಿಯ ಪುತ್ರಿಯಾಗಿರುವ ಚೈತ್ರಾರವರು ಹೈದರಾಬಾದ್ ಮೂಲದ ರಾಜೇಂದ್ರ ಪ್ರಸಾದ್ ಅವರೊಂದಿಗೆ ವಿವಾಹವಾಗಿ ಕಳೆದ ಏಳು ವರ್ಷಗಳಿಂದ ಮಲೇಷ್ಯಾದ ಕೌಲಾಲಂಪುರದಲ್ಲಿ ನೆಲೆಸಿದ್ದು, ಅಲ್ಲಿ ಸ್ವಂತ ಉದ್ಯಮ ನಡೆಸುತ್ತಿದ್ದಾರೆ.
ಬಹುಮುಖ ಪ್ರತಿಭೆಯಾಗಿರುವ ಚೈತ್ರಾರವರು ಮಿಸೆಸ್ ಮಲೇಷ್ಯಾ ಸ್ಪರ್ಧೆಗೆ ಆಯ್ಕೆಯಾಗಿ ಹಲವು ಹಂತಗಳಲ್ಲಿ ಸ್ಪರ್ಧಿಸಿ ಫೈನಲಿಸ್ಟ್ ಆಗಿದ್ದು, ನ. 1ರಿಂದ 5 ರವರೆಗೆ ಫೈನಲ್ ಸ್ಪರ್ಧೆ ನಡೆಯಲಿದೆ.
ಸಂಪಾಜೆ ಹಿರಿಯ ಪ್ರಾಥಮಿಕ ಶಾಲೆ, ಅರಂತೋಡು ಎನ್‌ಎಂಪಿಯುಸಿ ಹಳೆ ವಿದ್ಯಾರ್ಥಿನಿಯಾಗಿರುವ ಚೈತ್ರಾ ಅವರು ನಿಟ್ಟೆಯಲ್ಲಿ ಇಲೆಕ್ಟ್ರಿಕಲ್ ಇಂಜಿನಿಯರಿಂಗ್, ಪಿಳನಿ ಶ್ರೀಧರ್ ಯುನಿವರ್ಸಿಟಿಯಲ್ಲಿ ಬಿ. ಟೆಕ್ ಹಾಗೂ ಮುಂಬೈಯ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ಎಂಬಿಎ ಪೂರೈಸಿದ್ದು, ಗುಜರಾತ್‌ನ ಸೂರತ್ ನಲ್ಲಿ 8 ವರ್ಷ ಹಾಗೂ ಬೆಂಗಳೂರಿನಲ್ಲಿ 1 ವರ್ಷ ವಿವಿಧ ಕಂಪೆನಿಗಳ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ವೃತ್ತಿ ನಿರ್ವಹಿಸಿದ್ದರು..
ವಿವಾಹ ನಂತರ ಮಲೇಷ್ಯಾದಲ್ಲಿ ನೆಲೆಸಿದ್ದು ಹೃಶಾಸ್ ಸ್ಪೈಸ್ ಬಾಸ್ಕೆಟ್ ಎಂಬ ಸ್ವಂತ ಉದ್ದಿಮೆ ನಡೆಸುತ್ತಿದ್ದು, ಇದರ ಉತ್ಪನಗನಗಳು ಅಮೇರಿಕಾ, ಕೆನಡಾ, ಯುರೋಪ್ ಮೊದಲಾದ ದೇಶಗಳಿಗೆ ರಫ್ತಾಗುತ್ತಿದೆ.
ಚೈತ್ರಾ ಅವರ ಪತಿ ರಾಜೇಂದ್ರ ಪ್ರಸಾದ್ ಸ್ವಿಟ್ಜರ್ ಲೆಂಡ್ ಮೂಲದ ಕಂಪೆನಿಯಲ್ಲಿ ಇಂಜಿನಿಯರ್ ಆಗಿ ವೃತ್ತಿ ನಿರ್ವಹಿಸುತ್ತಿದ್ದು, ಪುತ್ರಿಯರಾದ 6 ವರ್ಷದ ಋತಿಕಾ ಮತ್ತು 4 ವರ್ಷದ ನಿಶಿಕಾರೊಂದಿಗೆ ನೆಲೆಸಿದ್ದಾರೆ.
” ಮಿಸೆಸ್ ಮಲೇಷ್ಯಾ ಸ್ಪರ್ಧೆ ಒಂದು ಹೊಸ ಅನುಭವ ನೀಡಿದೆ . ಹತ್ತು ಮಂದಿ ಫೈನಲಿಸ್ಟ್‌ಗಳಲ್ಲಿ ನಾನೊಬ್ಬಳೇ ಭಾರತೀಯಳು. ವಿವಿಧ ಹಂತಗಳಲ್ಲಿ ಸ್ಪರ್ಧೆ ನಡೆದಿದೆ. ಫೈನಲ್ ಸ್ಪರ್ಧೆಯ ವೇಳೆ ಸಾರ್ವಜನಿಕರು ಕೂಡಾ ಓಟ್ ಮಾಡಿ ಬೆಂಬಲಿಸಬೇಕೆಂದು ಚೈತ್ರಾ ಸುದ್ದಿಯೊಂದಿಗೆ ಹೇಳಿಕೊಂಡಿದ್ದಾರೆ.