ಜಿಲ್ಲಾ ಸಂಘವನ್ನು ಪ್ರತಿನಿಧಿಸಲಿದ್ದಾರೆ ಸುಳ್ಯದಿಂದ ೧೮ ಕ್ರೀಡಾಪಟುಗಳು
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಮಟ್ಟದ ಕ್ರೀಡಾಕೂಟವು ಅ.೨೭ ರಿಂದ ೨೯ ರ ತನಕ ತುಮಕೂರಿನಲ್ಲಿ ನಡೆಯಲಿದ್ದು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಬಹುಮಾನ ಪಡೆದ ಸುಳ್ಯ ತಾಲೂಕು ಸರಕಾರಿ ನೌಕರರ ಸಂಘದ ೧೮ ಮಂದಿ ಕ್ರೀಡಾ ಪಟುಗಳು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ತೀರ್ಥರಾಮ ಹೊಸೊಳಿಕೆ ಹಾಗೂ ರಾಜ್ಯ ಪರಿಷತ್ ಸದಸ್ಯ ಪೃಥ್ವಿ ಕುಮಾರ್ ಮಾಹಿತಿ ನೀಡಿದ್ದಾರೆ.
ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಪೃಥ್ವಿ ಕುಮಾರ್ ೪೦೦ ಮೀ. ಓಟ ಮತ್ತು ಹರ್ಡಲ್ಸ್, ಮುಡ್ನೂರು ಮರ್ಕಂಜ ಶಾಲೆಯ ಮುಖ್ಯ ಶಿಕ್ಷಕ ದೇವರಾಜ್ ಎಸ್.ಕೆ. – ೨೦೦ ಮೀ. ಓಟ, ಸುಳ್ಯ ಜಿ.ಒಂ. ಇಂಜಿನಿಯರ್ ಮನಿಕಂಠರವರು ಜಾವೆಲಿನ್ ನಲ್ಲಿ, ಪಶು ಸಂಗೋಪನಾ ಇಲಾಖೆಯ ಪಾಲಾಕ್ಷ ಬಾಡಿ ಬಿಲ್ಡರ್‍ಸ್ ವಿಭಾಗದಲ್ಲಿ, ಪಿಡಿಒ ಲೀಲಾವತಿ ಓಟ ಸ್ಪರ್ಧೆಯಲ್ಲಿ ಬಹುಮಾನ ಪಡೆದುಕೊಂಡಿದ್ದರು.
ಅಲ್ಲದೆ ಜಿಲ್ಲಾ ಕಬಡ್ಡಿ ತಂಡದಲ್ಲಿ ಸುಳ್ಯದವರಾದ ಅಡ್ಪಂಗಾಯ ಶಾಲೆಯ ಮುಖ್ಯ ಶಿಕ್ಷಕಿ ಧನಲಕ್ಷ್ಮಿ, ಬಿಳಿಯಾರು ಶಾಲೆಯ ಶಿಕ್ಷಕಿ ಶೀಲಾವತಿ, ಬಂಗ್ಲೆಗುಡ್ಡೆ ಶಾಲೆಯ ಶಿಕ್ಷಕಿ ರೇಷ್ಮ, ಆಲೆಟ್ಟಿ ಶಾಲೆಯ ಮುಖ್ಯ ಶಿಕ್ಷಕಿ ಸುನಂದ ಜಿ, ಗಾಂಧಿನಗರ ಕೆ.ಪಿ.ಎಸ್.ನ ಶಿಕ್ಷಕಿ ಅಶ್ವಿನಿ ಎಮ್.ಆರ್., ಕೋಲ್ಚಾರು ಶಾಲೆಯ ಶಿಕ್ಷಕಿ ಜಲಜಾಕ್ಷಿ ಕೆ.ಡಿ., ನಿಡುಬೆ ಶಾಲೆಯ ಶಿಕ್ಷಕಿ ತಶ್ವಿನಿ, ಸಂಪಾಜೆ ಶಾಲೆಯ ಶಿಕ್ಷಕಿ ಇಂದಿರಾವತಿ, ದೊಡ್ಡತೋಟ ಶಾಲೆಯ ಮಮತಾ ಭಾಗವಹಿಸಲಿದ್ದಾರೆ. ಜಿಲ್ಲಾ ಪುರುಷರ ಕಡಬಡ್ಡಿ ತಂಡದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸನತ್ ಪಿ.ಎನ್. ಹಾಗೂ ಸಮಾಜಕಲ್ಯಾಣ ಇಲಾಖೆಯ ದಿಲೀಪ್ ಭಾಗವಹಿಸುವರು. ಸಾಂಸ್ಕ್ರತಿಕ ವಿಭಾಗದ ಸಂಗೀತ ಸ್ಪರ್ಧೆಯಲ್ಲಿ ಕಾಂತಮಂಗಲ ಹಿ.ಪ್ರಾ.ಶಾಲೆಯ ಶಿಕ್ಷಕಿ ಜಯಶೀಲಾ ಭಾಗವಹಿಸಲಿದ್ದಾರೆ. ತಾಲೂಕು ಅಧ್ಯಕ್ಷ ತೀರ್ಥರಾಮ ಹೊಸೊಳಿಕೆಯವರ ನೇತೃತ್ವದಲ್ಲಿ ಸುಳ್ಯದ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.