ಕನ್ನಡದಲ್ಲೇ ಮಾತನಾಡಿ, ಇತರರಿಗೂ ಕಲಿಸಿ, ಉಳಿಸಿ ಬೆಳೆಸೋಣ : ಶ್ರೀಮತಿ ಜಯಲಕ್ಷ್ಮಿ ದಾಮ್ಲೆ
“ಕನ್ನಡಕ್ಕೆ ಹೋರಾಡಿದ ಮಹನೀಯರನ್ನು ಸ್ಮರಿಸುತ್ತಾ ಕನ್ನಡದ ಸೊಬಗನ್ನು ಒಂದೇ ದಿನಕ್ಕೆ ಸೀಮಿತವಾಗಿಡದೇ ಪ್ರತಿನಿತ್ಯವೂ ನಾವು ಕನ್ನಡದ ಏಳಿಗೆಗಾಗಿ ಶ್ರಮಿಸಬೇಕು. ಕನ್ನಡ ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಅಹರ್ನಿಶಿ ದುಡಿಯುವ ಶಾಲಾ ಅಧ್ಯಕ್ಷರಾಗಿರುವ ಡಾ. ಚಂದ್ರಶೇಖರ ದಾಮ್ಲೆ ಇವರ ಕಾರ್ಯವನ್ನು ನೆನಪಿಸಿಕೊಳ್ಳುತ್ತಾ, ಇನ್ನೊಂದು ಭಾಷೆಯನ್ನು ಕಲಿಯುವ ಮೂಲಕ ನಮ್ಮ ಕನ್ನಡ ಭಾಷೆಯನ್ನೂ ಇತರರಿಗೆ ಕಲಿಸುವ ಕೆಲಸ ನಮ್ಮಿಂದಾದರೆ, ಕನ್ನಡ ಭಾಷೆಯನ್ನು ಖಂಡಿತವಾಗಿಯೂ ಉಳಿಸಿ ಬೆಳೆಸಬಹುದು” ಎಂದು ಸ್ನೇಹ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಅವರು ಹೇಳಿದರು.
ನ.1ರಂದು ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಲಾ ಸಹಶಿಕ್ಷಕಿ ಶ್ರೀಮತಿ ಸವಿತಾ ಎಂ ಇವರು ಕನ್ನಡ ರಾಜ್ಯೋತ್ಸವದ ಬಗ್ಗೆ ಮಾತನಾಡಿ “ಕನ್ನಡದ ಪ್ರೀತಿ ಒಂದೇ ದಿನಕ್ಕೆ ಸೀಮಿತವಾಗದೆ ಚಿರಾಯುವಾಗಿರಬೇಕು. ಕನ್ನಡ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಪಣ ತೊಡಬೇಕು” ಎಂದೆನ್ನುತ್ತಾ ಏಕೀಕರಣಕ್ಕಾಗಿ ಹೋರಾಡಿದ ಕಟ್ಟಾಳುಗಳ ಕೊಡುಗೆಯನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕ ದೇವಿ ಪ್ರಸಾದ ಜಿ. ಸಿ ಕಾಯರ್ತೋಡಿ ಇವರು ಪ್ರಾರ್ಥಿಸಿದರು. ಶಿಕ್ಷಕಿ ಶ್ರೀಮತಿ ಶ್ರೀದೇವಿ ಪಿ. ಎಸ್ ಇವರು ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಅಮೃತ ಕೆ ವಂದಿಸಿದರು. ಶಿಕ್ಷಕಿ ಶ್ರೀಮತಿ ವನಿತಾ ಪಿ. ಕೆ ಕಾರ್ಯಕ್ರಮ ನಿರೂಪಿಸಿದರು. ನಂತರ ಶಾಲಾ ವಿದ್ಯಾರ್ಥಿಗಳಿಂದ ಮತ್ತು ಶಿಕ್ಷಕರಿಂದ ಕನ್ನಡ ಗೀತಗಾಯನ ಹಾಗೂ ನೃತ್ಯ ವೈವಿಧ್ಯ ಕಾರ್ಯಕ್ರಮಗಳು ನಡೆದವು.
ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು ಹಾಗೂ ಪೋಷಕರು ಉಪಸ್ಥಿತರಿದ್ದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.