ಭಾರತೀಯ ಸೈನ್ಯದಲ್ಲಿ 21 ವರ್ಷ ಸೇವೆ ಸಲ್ಲಿಸಿರುವ ಸುಳ್ಯದ ಹೇಮನಾಥರು ಸೇವಾ ನಿವೃತ್ತಿ ಪಡೆದಿದ್ದಾರೆ. ನ.3 ರಂದು ಅವರು ಸುಳ್ಯಕ್ಕೆ ಆಗಮಿಸಿದ ಸಂದರ್ಭ ಮನೆಯವರು ಹಾಗೂ ಊರವರು ಅದ್ದೂರಿ ಸ್ವಾಗತ ಕೋರಿದರು.
ಮಂಡೆಕೋಲು ಗ್ರಾಮದ ಪೇರಾಲು ಭೋಜರಾಜ ಮತ್ತು ಶ್ರೀಮತಿ ಜ್ಯೋತಿಯವರ ಪುತ್ರನಾದ ಹೇಮನಾಥರು ೧೯೮೩ರಂದು ಜನಿಸಿದರು.
ಪ್ರಾಥಮಿಕ ಶಿಕ್ಷಣವನ್ನು ಶ್ರೀ ಪರಿವಾರಕಾನ ಪಂಚಲಿಂಗೇಶ್ವರ ದೇವಸ್ಥಾನದ ಸಮೀಪ ಇರುವ ನಾಗತೀರ್ಥ ಶಾಲೆ ಮತ್ತು ದ.ಕ.ಹಿ.ಪ್ರಾ ಶಾಲೆ ಪಂಜದಲ್ಲಿ ಪಡೆದರು. ಪ್ರೌಢ ಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಸ.ಪ.ಪೂ. ಕಾಲೇಜು ಪಂಜದಲ್ಲಿ ಪಡೆದರು. ದ್ವಿತೀಯ ವರ್ಷದ ಪದವಿ ಪೂರ್ವ ಶಿಕ್ಷಣವನ್ನು ಪಡೆಯುತ್ತಿರುವ ಸಮಯದಲ್ಲಿ ಭಾರತೀಯ ಸೇನೆಯ ವಿಭಾಗದ ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ ಎಂಬ ಸೈನಕ್ಕೆ ೨೦೦೨ರಲ್ಲಿ ಆಯ್ಕೆಗೊಂಡು ಪಂಜಾಬ್ ಮತ್ತು ಹರಿಯಾಣ ರಾಜ್ಯದ ರಾಜಧಾನಿಯಾದ ಚಂಡೀಗಢ ಎಂಬಲ್ಲಿ ದಿನಾಂಕ ೨೧-೧೧-೨೦೦೨ರಂದು ತರಬೇತಿಗೆ ಟ್ರೈನಿಂಗ್ ಸೆಂಟರ್‌ಗೆ ಸೇರ್ಪಡೆಗೊಂಡರು. ೨೦೦೩ ನವೆಂಬರ್ ವರೆಗೆ ತರಬೇತಿ ಪೂರ್ಣಗೊಳಿಸಿ ಡಿಸೆಂಬರ್ ೨೦೦೩ರಲ್ಲಿ ಹಿಮಾಚಲ ಪ್ರದೇಶ ರಾಜ್ಯದ ಶಿಮ್ಲಾ ಜಿಲ್ಲೆಯಲ್ಲಿ ಭಾರತ-ಚೀನಾ ಗಡಿಯಲ್ಲಿ ಕರ್ತವ್ಯ ನಿರ್ವಹಿಸಲು ಪ್ರಾರಂಭಿಸಿದರು.
೨೦೦೫ ಮೇ ತಿಂಗಳಿನಿಂದ ೨೦೧೦ ಮೇ ವರೆಗೆ ಉತ್ತರಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿರುವ ಬದ್ರಿನಾಥ ದೇವಾಲಯದ ಸಮೀಪ ಇರುವ ಜೋಷಿಮಠ ಎಂಬಲ್ಲಿರುವ ಚೀನಾ ಗಡಿಯಲ್ಲಿ ಕರ್ತವ್ಯ ನಿರ್ವಹಿಸಿದರು.
೨೧ ವರ್ಷದ ಸೇವೆಯನ್ನು ಸಲ್ಲಿಸಿ ೨೦೨೩ ಅಕ್ಟೋಬರ್ ೩೧ರಂದು ಸೇವಾ ನಿವೃತ್ತಿ ಪಡೆದರು.
ಪತ್ನಿ ಶ್ರೀಮತಿ ಕಾವ್ಯ ಸುಳ್ಯ ಸಮಾಜಕಲ್ಯಾಣ ಇಲಾಖೆಯಲ್ಲಿ ಮೇಲ್ವಿಚಾರಕಿ. ಮಕ್ಕಳಾದ ಸಾನ್ವಿ ಸುಳ್ಯದ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ೮ನೇ ತರಗತಿ ಹಾಗೂ ಸಾತ್ವಿಕ್ ೩ ನೇ ತರಗತಿಯ ವಿದ್ಯಾರ್ಥಿ.
ಅದ್ದೂರಿ ಸ್ವಾಗತ : ಹೇಮನಾಥರು ನ.3ರಂದು ಉಬರಡ್ಕ ಕೊಡಿಯಾಲಬೈಲಿನ ಮನೆಗೆ ಆಗಮಿಸುತ್ತಿದ್ದಂತೆ ಮನೆಯವರು ಹಾಗೂ ಊರವರು ಅದ್ದೂರಿಯಾಗಿ ಬರಮಾಡಿಕೊಂಡರು. ಬ್ಯಾಂಡ್‌ವಾದ್ಯದೊಂದಿಗೆ ಮೆರವಣಿಗೆಯಲ್ಲಿ ಹೋಗಿ, ಮನೆಯಲ್ಲಿ ಆರತಿ ಬೆಳಗಿ ಬರ ಮಾಡಿಕೊಳ್ಳಲಾಯಿತು.