ಮುಕ್ಕೂರು : ಶಾಲಾ ವಾರ್ಷಿಕೋತ್ಸವ ಆಚರಣೆಯ ಬಗ್ಗೆ ಪೂರ್ವಭಾವಿ ಸಭೆ

0

ಡಿಸೆಂಬರ್ ನಲ್ಲಿ ಸ್ಕೂಲ್ ಡೇ, ಊರವರಿಗೆ ಕ್ರೀಡಾಕೂಟ ನಡೆಸಲು ಪ್ರಸ್ತಾಪ

ನ.11 ರಂದು ಮಧ್ಯಾಹ್ನ 2 ಗಂಟೆಗೆ ಎರಡನೆ ಹಂತದ ಪೂರ್ವಭಾವಿ ಸಭೆ

ಮುಕ್ಕೂರು : ಶತಮಾನದ ಹೊಸ್ತಿಲಿನಲ್ಲಿರುವ ಮುಕ್ಕೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ವರ್ಷ ಶಾಲಾ ವಾರ್ಷಿಕೋತ್ಸವ ಆಚರಿಸುವ ನಿಟ್ಟಿನಲ್ಲಿ ಪೂರ್ವಭಾವಿ ಸಭೆಯು ಮುಕ್ಕೂರು ಶಾಲಾ ಸಭಾಂಗಣದಲ್ಲಿ ಸೋಮವಾರ ನಡೆಯಿತು.

ಡಿಸೆಂಬರ್ ಎರಡನೇ ವಾರದಲ್ಲಿ ಹಳೆ ವಿದ್ಯಾರ್ಥಿಗಳು, ಮುಕ್ಕೂರು ವಾರ್ಡ್ ನವರಿಗೆ ಕ್ರೀಡಾಕೂಟ, ಮೂರನೇ ವಾರದಲ್ಲಿ ಶಾಲಾ ವಾರ್ಷಿಕೋತ್ಸವ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಸಭೆಯಲ್ಲಿ ತೀರ್ಮಾನಿಸಲಾಯಿತು. ನ.11 ರಂದು ಮಧ್ಯಾಹ್ನ 2 ಗಂಟೆಗೆ ಊರವರ, ಪೋಷಕರ ಸಭೆ ಸೇರಿ ಅಂತಿಮ ತೀರ್ಮಾನ ಕೈಗೊಳ್ಳಲು ಸಭೆ ನಿರ್ಧರಿಸಿತು.

ಮಧ್ಯಾಹ್ನದಿಂದ ರಾತ್ರಿ 9 ಗಂಟೆಯ ತನಕ ವಾರ್ಷಿಕೋತ್ಸವದ ಕಾರ್ಯಕ್ರಮ ನಡೆಸುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಯಿತು. ಶಿಕ್ಷಣ ಇಲಾಖೆಯ ಸುತ್ತೋಲೆಯಂತೆ ಪ್ರೋಟೋಕಾಲ್ ಪ್ರಕಾರ ಅತಿಥಿಗಳನ್ನು ಆಹ್ವಾನಿಸಿ ಸಭೆ ಏರ್ಪಡಿಸಲು ನಿರ್ಧರಿಸಲಾಯಿತು. ಅಂಗನವಾಡಿ, ಶಾಲಾ ಮಕ್ಕಳಿಗೆ, ಹಳೆ ವಿದ್ಯಾರ್ಥಿಗಳಿಗೆ, ಹೊರಗಿನ ತಂಡಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಅವಕಾಶ ಕಲ್ಪಿಸುವ ಬಗ್ಗೆ ಚರ್ಚಿಸಲಾಯಿತು.

ಸುಮಾರು 17 ವರ್ಷಗಳ ಬಳಿಕ ಶಾಲಾ ವಾರ್ಷಿಕೋತ್ಸವ ನಡೆಸಲು ಉದ್ದೇಶಿಸಿದ್ದು ಊರವರ ತನು, ಮನ, ಧನದ ಸಹಕಾರ ಪಡೆದು ಅರ್ಥಪೂರ್ಣ ರೀತಿಯಲ್ಲಿ ಆಯೋಜಿಸಲು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಕಾರ್ಯಕ್ರಮಕ್ಕೆ ಪೂರಕವಾಗಿ ವಿವಿಧ ಸಲಹೆ ಸೂಚನೆಗಳನ್ನು ಪಡೆಯಲಾಯಿತು.

ಶಾಲಾ ವಾರ್ಷಿಕೋತ್ಸವ ಆಯೋಜನೆಗೆ ಸಂಬಂಧಿಸಿದ ನಿಯಮಗಳ ಬಗ್ಗೆ ಶಾಲಾ ಪ್ರಭಾರ ಮುಖ್ಯಗುರು ಅರವಿಂದ ಕೆ ಅವರು ಮಾಹಿತಿ ನೀಡಿದರು. ವೇದಿಕೆಯಲ್ಲಿ ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಶಾಲಾ ಎಸ್ಡಿಎಂಸಿ ಅಧ್ಯಕ್ಷ ಜಯಂತ ಗೌಡ ಕುಂಡಡ್ಕ, ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ, ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ, ಗ್ರಾ.ಪಂ.ಸದಸ್ಯೆ ಗುಲಾಬಿ ಬೊಮ್ಮೆಮಾರು, ಎಸ್ಡಿಎಂಸಿ ಉಪಾಧ್ಯಕ್ಷೆ ಸುಮತಿ ರೈ , ಪೋಷಕರು, ಊರವರು ಉಪಸ್ಥಿತರಿದ್ದರು.