ಸುಳ್ಯ ಕಸಾಪದ ಸಾಹಿತ್ಯ ಸಂಭ್ರಮ ಸರಣಿಯ ಏಳನೇ ಕಾರ್ಯಕ್ರಮ: ಕನ್ನಡದ ಕಿರಣ ಕುತ್ಯಾಳ ಸನ್ಮಾನ

0


ಹೆಸರಾಯಿತು ಕನ್ನಡ ಉಸಿರಾಗಲಿ ಕನ್ನಡ ಸಂಭ್ರಮಾಚರಣೆ ಹಾಗೂ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡ ಸಾಹಿತ್ಯ ಪರಿಷತ್ತಿನ ಸುಳ್ಯ ತಾಲೂಕು ಘಟಕ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಸಾಹಿತ್ಯ ಸಂಭ್ರಮ – 2023 ಸಪ್ತಾಹದ ಅಂಗವಾಗಿ ಏಳನೇ ಕಾರ್ಯಕ್ರಮವಾದ ಕನ್ನಡದ ಕಿರಣ ಕುತ್ಯಾಳ ಹಾಗೂ ಜ್ಞಾನ ಪೀಠ ಪ್ರಶಸ್ತಿ ಪುಸ್ಕೃತ ಕುವೆಂಪು ನೆನಪು ಮತ್ತು ಗಾಯನ ಕಾರ್ಯಕ್ರಮವು ಸಂಧ್ಯಾರಶ್ಮಿ ಸಾಹಿತ್ಯ ಸಂಘ ಸುಳ್ಯ ಇದರ ಸಹಯೋಗದೊಂದಿಗೆ ನ.6ರಂದು ಸಂಧ್ಯಾರಶ್ಮಿ ಸಭಾಭವನದಲ್ಲಿ ನೆರವೇರಿತು.


ಈ ಸಂದರ್ಭದಲ್ಲಿ ನಾಡಿನ ಹಿರಿಯ ಕವಿ ಕಿರಣ ಕಾವ್ಯನಾಮಾಂಕಿತ ಕುತ್ಯಾಳ ನಾಗಪ್ಪ ಗೌಡರ ಕೃತಿಗಳ ಪರಿಚಯ ಹಾಗೂ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ನಾಡಿನ ಇನ್ನೋರ್ವ ಕವಿ ಜಿ.ಎಸ್. ಉಬರಡ್ಕ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರ ಹಾಗೂ ಕವಿ ಕಿರಣರ ಕುರಿತ ಒಡನಾಟವನ್ನು ಮೆಲುಕು ಹಾಕುತ್ತಾ ಕವಿತೆಗಳ ಗುಣಮಟ್ಟವನ್ನು ಪ್ರಸ್ತಾಪಿಸಿ ಕವಿ ಕಿರಣರು ಕನ್ನಡದ ರಾಬರ್ಟ್ ಫ್ರಾಸ್ಟ್ ಎಂದರು.


ಸನ್ಮಾನಕ್ಕುತ್ತರಿಸಿ ಮಾತನಾಡಿದ ಕಿರಣರು ಯಾವುದೇ ವಿಚಾರದಲ್ಲಿ ವೈಭವೀಕರಣದ ಅಗತ್ಯವಿರುವುದಿಲ್ಲ ಪ್ರಾಮಾಣಿಕವಾದ ಪ್ರಯತ್ನವು ನಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯಬಲ್ಲದು ಎಂದು ನುಡಿದರು.
ಕಿರಣರ ಕೃತಿಗಳ ಪರಿಚಯ ಮಾಡಿದ ಲೇಖಕಿ ಚಂದ್ರಾವತಿ ಬಡ್ಡಡ್ಕ ಇವರು ಕಿರಣರ ಕವಿತೆಗಳಲ್ಲಿ ನವೋದಯದ ಸೊಗಸು ಹಾಗೂ ನವ್ಯದ ಕಂಪುಗಳೆರಡು ಮಿಳಿತವಾಗಿದ್ದು ಇವರೊಬ್ಬ ವಿಶೇಷ ಕವಿ ಹಾಗೂ ಅನುಭವಜನ್ಯವಾಗಿರುವ ಪ್ರತಿಮಾ ಸ್ವರೂಪಿ ಕವಿತೆಗಳು ಸತ್ವಪೂರ್ಣವಾಗಿದೆ ಎಂದು ಹೇಳುತ್ತಾ ಕಿರಣರ ಕಾವ್ಯದ ಹೊಂಗಿರಣಗಳು ಕನ್ನಡ ಸಾಹಿತ್ಯವನ್ನು ಬೆಳಗಿವೆ ಎಂದರು.
ಭಾವನಾ ಸುಗಮ ಸಂಗೀತ ಬಳಗದ ಅಧ್ಯಕ್ಷರಾದ ಕೆ ಆರ್ ಗೋಪಾಲಕೃಷ್ಣ ಅವರು ಕುವೆಂಪುರವರ ಸಾಹಿತ್ಯವನ್ನು ಮೆಲುಕು ಹಾಕುತ್ತಾ ಅವರ ಕವಿತೆಗಳನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಕುವೆಂಪು ಸ್ಮರಣೆ ಹಾಗೂ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ಅಧ್ಯಕ್ಷರಾದ ಚಂದ್ರಶೇಖರ್ ಪೇರಾಲು ಅವರು ಮಾತನಾಡುತ್ತಾ ‘ನಮ್ಮ ನಡೆ ವಿದ್ಯಾರ್ಥಿಗಳೆಡೆ’ ಎಂಬ ಧ್ಯೇಯ ವಾಕ್ಯದೊಂದಿಗೆ ವಿದ್ಯಾರ್ಥಿಗಳಲ್ಲಿ ಕನ್ನಡದ ಸಾಹಿತಿಗಳು ಮತ್ತು ಸಾಹಿತ್ಯದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮದ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸುತ್ತಾ ನಮ್ಮ ನಾಡಿನ ಸಾಹಿತಿಗಳನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಧ್ಯಾರಶ್ಮಿ ಪಿಂಚಣಿದಾರರು ಮತ್ತು ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಡಾ. ಎಸ್ ರಂಗಯ್ಯ ಹಾಗೂ ಗೌರವಾಧ್ಯಕ್ಷರಾದ ಬಾಬುಗೌಡ ಅಚ್ರಪ್ಪಾಡಿ ಇವರುಗಳು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಕಸಾಪ ಗೌರವ ಕಾರ್ಯದರ್ಶಿ ತೇಜಸ್ವಿ ಕಡಪಳ, ಕೋಶಾಧಿಕಾರಿ ದಯಾನಂದ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸಂಧ್ಯಾರಶ್ಮಿ ಸಾಹಿತ್ಯ ಸಂಘದ ಅಧ್ಯಕ್ಷೆ ಸಾಹಿತಿ ಲೀಲಾ ದಾಮೋದರ್ ಸ್ವಾಗತಿಸಿದರು. ಖಜಾಂಜಿ ಕೇಶವ ಸಿ ಎ ವಂದಿಸಿದರು. ಉಪಾಧ್ಯಕ್ಷರಾದ ರಾಮಚಂದ್ರ ಪಳ್ಳತಡ್ಕ ಕಾರ್ಯಕ್ರಮ ನಿರೂಪಿಸಿದರು.