ವಿಶೇಷ ಉಪನ್ಯಾಸ- ಸಾಧಕರಿಗೆ ಸನ್ಮಾನ
ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಸಂಭ್ರಮಾಚರಣೆ ಹಾಗೂ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸಾಹಿತ್ಯ ಸಂಭ್ರಮ ೨೦೨೩ ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ನೆನಪು ಕಾರ್ಯಕ್ರಮಗಳ ಸಮಾರೋಪ ಸಮಾರಂಭ ನ. ೭ರಂದು ಸುಳ್ಯದಲ್ಲಿ ನಡೆಯಿತು.
ಕಸಾಪ ಕೋಶಾಧಿಕಾರಿ ದಯಾನಂದ ಆಳ್ವರ ಜಟ್ಟಿಪಳ್ಳದ ಪದ್ಮಶ್ರೀ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣ ಮಾಡಿದ ಸಾಹಿತಿ, ಬರಹಗಾರರಾದ ಡಾ.ನರೇಂದ್ರ ರೈ ದೇರ್ಲರವರು ಇಂದಿನ ಯುಗದಲ್ಲಿ ಮೊಬೈಲ್‌ಗಳಲ್ಲಿ ಹಾಗೂ ನವ ಮಾಧ್ಯಮಗಳಲ್ಲಿ ಅತ್ಯುತ್ತಮ ಕವನ, ಕಥೆಗಳು ಹಾಗೂ ಅದ್ಭುತ ಬರಹಗಳು ಸೃಷ್ಠಿಯಾಗುತ್ತಿದೆ. ಇಂತಹ ಬರಹಗಳನ್ನು ದಾಖಲಿಸುವ ಮತ್ತು ಅದಕ್ಕೆ ಪ್ರಶಸ್ತಿ ನೀಡುವ ಕೆಲಸ ಅಕಾಡೆಮಿಗಳು ಮಾಡಬೇಕು ಎಂದ ಅವರು, ಕನ್ನಡದಲ್ಲಿ ಓದುಗರ ಸಂಖ್ಯೆ ಜಾಸ್ತಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಪೇರಾಲು ವಹಿಸಿದ್ದರು. ನೆಹರೂ ಸ್ಮಾರಕ ಮಹಾ ವಿದ್ಯಾಲಯದ ಉಪನ್ಯಾಸಕ ಪ್ರೊ.ಸಂಜೀವ ಕುಪ್ಪಾಜೆ ಅವರು ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರಾದ ಚಂದ್ರಶೇಖರ ಕಂಬಾರ ಅವರ ಬದುಕು, ಬರಹ ಅವಲೋಕನ ಕುರಿತು ಮಾತನಾಡಿದರು. ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ, ಕಸಾಪ ಪೂರ್ವಾಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಗೌಡ ಮುಖ್ಯ ಅತಿಥಿಯಾಗಿದ್ದರು.
ಸಮಾರಂಭದಲ್ಲಿ ಡಾ.ಉಮ್ಮರ್ ಬೀಜದಕಟ್ಟೆ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪಿ.ಬಿ.ಸುಧಾಕರ ರೈ, ಡಾ.ನಿತಿನ್ ಪ್ರಭು, ಕೋಡ್ಲ ಗಣಪತಿ ಭಟ್, ಜಯರಾಮ ಬೊಳಿಯಮಜಲು ಅವರನ್ನು ಸನ್ಮಾನಿಸಲಾಯಿತು.
ತಾಲೂಕು ಕನ್ನಡ ರಾಜ್ಯೋತ್ಸವದಲ್ಲಿ ಸನ್ಮಾನಿತರಾದ ವೆಂಕಟ್ರಾಮ್ ಭಟ್ ಸುಳ್ಯ ಮತ್ತು ಲೀಲಾ ದಾಮೋದರ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕೆ.ಟಿ.ವಿಶ್ವನಾಥ ಮತ್ತು ಸಾಹಿತ್ಯ ಸಂಭ್ರಮದಲ್ಲಿ ಗೀತಗಾಯನ ನಡೆಸಿಕೊಟ್ಟ ಭಾವನಾ ಸಂಗೀತ ಬಳಗದ ಅಧ್ಯಕ್ಷ ಕೆ.ಆರ್.ಗೋಪಾಲಕೃಷ್ಣ ಅವರನ್ನು ಗೌರವಿಸಲಾಯಿತು. ಕಸಾಪ ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಲ್ಲತ್ತಡ್ಕ, ಗೌರವ ಕಾರ್ಯದರ್ಶಿಗಳಾದ ತೇಜಸ್ವಿ ಕಡಪಳ, ಚಂದ್ರಮತಿ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಸಾಪ ಕೋಶಾಧಿಕಾರಿ ದಯಾನಂದ ಆಳ್ವ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಸಾಪ ಕಾರ್ಯಕಾರಿ ಸಮಿತಿ ಸದಸ್ಯರಾದ ಶರೀಫ್ ಜಟ್ಟಿಪಳ್ಳ, ಯೋಗೀಶ್ ಹೊಸೋಳಿಕೆ, ತೇಜಸ್ವಿ ಕಡಪಳ, ಚಂದ್ರಮತಿ ಕೆ. ಸನ್ಮಾನ ಪತ್ರ ವಾಚಿಸಿದರು. ಸಂಕೀರ್ಣ ಚೊಕ್ಕಾಡಿ ವಂದಿಸಿದರು. ರಮೇಶ್ ನೀರಬಿದಿರೆ ಕಾರ್ಯಕ್ರಮ ನಿರೂಪಿಸಿದರು.